Monday 30 January 2017

ನವಾನಾಮ್ ರಾತ್ರೀಣಾಮ್ ಸಮಾಹಾರಃ ನವರಾತ್ರಮ್

ಒಂಭತ್ತು ರಾತ್ರಿಗಳು ಸೇರಿರುವಂಥದ್ದು ನವರಾತ್ರ ಎಂಬ ಹಬ್ಬ. ಹೀಗೆಯೇ ಕೆಲವೆಡೆ ಪ್ರಯೋಗವಿದೆ. ಆದರೆ ನಮ್ಮ ಕರಾವಳಿಯಲ್ಲಿ ಮತ್ತು ಇತರ ಹೆಚ್ಚಿನೆಡೆ ನವರಾತ್ರೀ ಎಂದೇ ಪ್ರಯೋಗ. ಈ ಪ್ರಯೋಗಕ್ಕೆ ನಮಗೆ ವ್ಯಾಕರಣದಲ್ಲಿ ಸಾಮಾನ್ಯವಾಗಿ ಹುಡುಕಿದರೆ ಅರ್ಥ ನಿಷ್ಪತ್ತಿ ದೊರೆಯಲಾರದು. ನವರಾತ್ರಿಯು ಪಾಡ್ಯದಿಂದ ನವಮೀವರೆಗೆ ಒಟ್ಟು ಒಂಭತ್ತು ತಿಥಿಗಳಲ್ಲಿ ಆಚರಿಸಲ್ಪಡುವುದರಿಂದ  ಒಂಭತ್ತು ರಾತ್ರಿಗಳು ಎನ್ನುವ ಸಾಮಾನ್ಯ ಅರ್ಥ ಇದಕ್ಕೆ ಕೂಡುವುದಾದರೂ ಆವಾಗ ನವರಾತ್ರ ಎಂದೇ ಪದಪ್ರಯೋಗವಾಗಬೇಕು. ಹೀಗೆ ಹೇಳೋಣವೇ? ಕೆಲವೊಮ್ಮೆ ತಿಥಿಗಳು ದೀರ್ಘವಾಗಿ ಬಂದಾಗ ಈ ವರ್ಷ ಹಾಗೂ ಕಳೆದ ವರ್ಷದಂತೆ ಈ ನವರಾತ್ರಿಯು ಹತ್ತು ದಿನಗಳಷ್ಟು ದೀರ್ಘವಾಗುತ್ತದೆ. ಅದೇ ರೀತಿ ಕೆಲವೊಮ್ಮೆ ತಿಥಿಗಳು ಹ್ರಸ್ವವಾದಲ್ಲಿ ಆಗ ಎಂಟೇ ದಿನಗಳಲ್ಲಿ ನವರಾತ್ರಿಯು ಮುಗಿಯುತ್ತದೆ. ಇದೂ ಅಲ್ಲದೆ ವಿಜಯದಶಮಿಯನ್ನೂ ನವರಾತ್ರಿಯ ಅಂಗತ್ವೇನ ಆಚರಿಸಲ್ಪಡುವುದರಿಂದ ಆ ರೀತಿಯಲ್ಲಿ ನೋಡುವುದಾದರೆ ಹತ್ತು ತಿಥಿಗಳು ಆಗುತ್ತವೆ. ಹಾಗಿರುವಾಗಲೂ ನವರಾತ್ರಿ ಎನ್ನುವುದು ಕೂಡಲಾರದು.
ಆದರೆ ಬಹ್ವರ್ಥಕಗಳನ್ನು ನವ ಶಬ್ದಕ್ಕೂ ರಾತ್ರಿಶಬ್ದಕ್ಕೂ ಹುಡುಕುವಾಗ ಮಾತ್ರ ‘ನವರಾತ್ರೀ’ ಎನ್ನುವ ಅರ್ಥ ಕೂಡುತ್ತದೆ. ನವ ಎನ್ನುವುದು ಒಂಭತ್ತು ಮತ್ತು ಹೊಸತು ಎನ್ನುವ ಅರ್ಥವಿದೆ. ಅದೇ ರೀತಿ ರಾತ್ರಿ ಎನ್ನುವುದಕ್ಕೆ ಸೂರ್ಯನ ಬೆಳಕಿನ ಅಭಾವದ ಕತ್ತಲು ಮತ್ತು ದುರ್ಗಾ ಎನ್ನುವ ಅರ್ಥವಿದೆ. ನವ ಶಬ್ದಕ್ಕೆ ಒಂಭತ್ತು ಎನ್ನುವ ಬದಲು ಹೊಸತು ಎನ್ನುವ ಅರ್ಥವನ್ನೂ ರಾತ್ರಿ ಎನ್ನುವುದಕ್ಕೆ ದುರ್ಗಾ ಎನ್ನುವ ಅರ್ಥವನ್ನೂ ತೆಗೆದುಕೊಂಡಲ್ಲಿ ಇಲ್ಲಿ ಹೊಂದಿಸಲು ಬಲು ಸುಕರ.
   ನವರಾತ್ರಿಯಲ್ಲಿ ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನೀ, ಕಾಲರಾತ್ರೀ, ಮಹಾಗೌರೀ, ಸಿದ್ಧಿದಾತ್ರೀ ಎಂಬ ಒಂಭತ್ತು ರೂಪದ ನವ ದುರ್ಗೆಯರನ್ನು ಆರಾಧಿಸುವ ಕ್ರಮವಾದರೆ ದುರ್ಗಾ, ಆರ್ಯಾ, ಭಗವತೀ, ಅಂಬಿಕಾ, ಚಂಡಿಕಾ, ಸರಸ್ವತೀ, ಚಂಡಿಕಾ, ಮಹಿಷಮರ್ದಿನೀ, ವಾಗೀಶ್ವರೀ ಎನ್ನುವ ಒಂಭತ್ತು ರೂಪದ ನವದುರ್ಗೆಯರನ್ನೂ ಪ್ರತಿದಿನಕ್ಕೆ ಪ್ರತ್ಯೇಕಪ್ರತ್ಯೇಕವಾಗಿ ಆರಾಧಿಸುವ ಕ್ರಮವೂ ಇದೆ. ಇದು ಒಂದೊಂದು ತಿಥಿಗೆ ಒಂದೊಂದು ದುರ್ಗೆಯ ಆರಾಧನೆ ಅಂದರೆ ಒಂದೊಂದು ತಿಥಿಗೆ ಒಂದೊಂದು ಹೊಸ ದುರ್ಗೆಯರಂತೆ ಒಟ್ಟು ಒಂಭತ್ತು ದುರ್ಗೆಯರ ಆರಾಧನೆಯಾಗುತ್ತದೆ. ಇಂತಹ ಹೊಸಹೊಸ ದುರ್ಗೆಯರ ಆರಾಧನೆಯ ವ್ರತಕ್ಕೆ ನವರಾತ್ರಿ ಎಂದೂ ನವ ಅಂದರೆ ಎಂಟರ ನಂತರದ ಒಂಭತ್ತು ದುರ್ಗೆಯರ ಆರಾಧನೆಯ ವ್ರತ ಎನ್ನುವ ಅರ್ಥದಲ್ಲಿ ನವರಾತ್ರ ಎಂದೂ ಅರ್ಥೈಸಿದಲ್ಲಿ ಸಂಗತವೆನಿಸುತ್ತದೆ. ಆಗ ಶಬ್ದದ ಗೊಂದಲ ನಿವಾರಣೆಯಾಗುತ್ತದೆ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು

            Vidwan Sriharinarayanadasa Asranna, Kateelu

Saturday 6 February 2016

ನನ್ನೂರು ಮತ್ತು ಯಕ್ಷಗಾನ

ಎಲ್ಲಿಂದ ಆರಂಭಿಸಲಿ ಎಲ್ಲಿಗೆ ನಿಲ್ಲಿಸಲಿ ಅಂದೇ ತಿಳಿಯಲಾಗದ ವಿಚಾರ. ಕಟೀಲಿನ ತಾಯಿ ಭ್ರಮರಾಂಬೆಯಿಂದ ಆರಂಭಿಸಲೋ, ಕಟೀಲಿನಲ್ಲಿ ಸಂದ ಯಕ್ಷಗಾನದ ಶಕಪುರುಷರಿಂದ ಆರಂಭಿಸಲೋ, ನನ್ನ ಗುರುಗಳಿಂದ ಅಥವಾ ಗುರು ಪರಂಪರೆಗಳಿಂದ ಆರಂಭಿಸಲೋ, ನಾಟಕ ಪಟು ಯಕ್ಷಗಾನದ ಭಾವನಿರ್ದೇಶಕ ನನ್ನ ತಂದೆಯಿಂದ ಆರಂಭಿಸಲೋ, ದೊಡ್ಡಪ್ಪ ಗೋಪಾಲಕೃಷ್ಣ ಆಸ್ರಣ್ಣರ ಯಕ್ಷಗಾನದ ತುಡಿತವನ್ನು ಹೇಳಿ ಆರಂಭಿಸಲೋ, ನನ್ನ ಬಾಲ್ಯದ ಮನೆಯನ್ನು ನೆನಪಿಸಿ ಆರಂಭಿಸಲೋ ಒಂದೂ ತಿಳಿಯುವುದಿಲ್ಲ.
ಯಕ್ಷಗಾನ ಬೆಳೆದ ನನ್ನ ಊರಿನ ಹೆಸರೇ ಕಟೀಲು. ಇಷ್ಟೆಂದರೆ ಕೆಲವನ್ನು ಬರಹ ಗೌರವದ (ಉದ್ದವಾಗುವಿಕೆ) ಭಯದಿಂದ ಬಿಡಬಹುದು ಅನ್ನಿ. ಅದನ್ನು ಹಿಂದೆ ಕಟೀಲಿನ ಹಾಗೂ ಯಕ್ಷಗಾನದ ಸಂಬಂಧದ ಬಗೆಗಿನ ಲೇಖನದಲ್ಲೂ ಹೇಳಿದ್ದೇನೆ. ಅದನ್ನು ಬದಿಗಿರಿಸಿ ಆರಂಭಿಸೋಣ.
ಯಕ್ಷಗಾನದ ಊರಿನಲ್ಲಿ ಹುಟ್ಟಿದವ ನಾನು ಎಂಬುದೇ ಹೆಮ್ಮೆ ನನಗೆ. ಇದಲ್ಲದೆ ನನ್ನ ತಂದೆ ವಿದ್ವಾಂಸರು. ಸಂಸ್ಕೃತ ಶಿರೋಮಣಿ ಹಾಗೂ ಕನ್ನಡ ಪಂಡಿತ ಪದವಿಧರರು, ಶಾಲಾ ಅಧ್ಯಾಪಕರು ಬೇರೆ, ಸ್ವತಃ ನಾಟಕ ಬರೆದು ಅಂದು ಜಿಲ್ಲೆಯಲ್ಲಿ ಪ್ರಸಿದ್ಧರಾದವರು, ಕರ್ನಾಟಕ ಯಕ್ಷಗಾನ ಮಂಡಳಿಯ ಪ್ರಾಯೋಗಿಕ ನಡೆಯಲ್ಲಿ (Practice) ನಿರ್ದೇಶಿಸುತ್ತಿದ್ದವರು, ಕೆಲವು ವರ್ಷ ಸಾಲಿಗ್ರಾಮ ಮೇಳಕ್ಕೂ ಕೂಡ). ತಾಯಿ ಹಿಂದಿನವರಾದರೂ ವಿದ್ಯಾಭ್ಯಾಸವನ್ನು ಶಾಲೆಯಲ್ಲಿ ಹಾಗೂ ಅಧ್ಯಾಪಕ ತಂದೆಯಲ್ಲಿ ಪಡೆದವರು. ದಾಸರ ಪದ್ಯಗಳನ್ನು ಅರ್ಥೈಸಿ ಅನುಭವಿಸಿ ಹಾಡುವವರು. ಇದಲ್ಲದೆ ಇವರ ಎಂಟನೇ ಗರ್ಭದಲ್ಲಿ ಜನಿಸಿದವನಾದ್ದರಿಂದ ಆಗಲೇ ಪ್ರಬುದ್ಧರೆನಿಸಿದ ಅಕ್ಕಂದಿರ ಜೊತೆ ಬೆರೆತವ ನಾನು. ನನ್ನ ತಂದೆ ತನ್ನ ತೀವ್ರ ಅನಾರೋಗ್ಯದಿಂದ ಶಸ್ತ್ರಕ್ರಿಯೆಗೆ ತುತ್ತಾಗಿ ಒಂದು ಮೈಲಿ ದೂರದ ಮನೆಗೆ, ನಡೆದು ಹೋಗುವ ಕಾಲದಲ್ಲಿ ನಡೆಯಲು ಅಸಾದ್ಯವಾದದ್ದುಕಟೀಲಿನ ರಥಬೀದಿಯ ಅರ್ಚಕರ ಮನೆಯಲ್ಲಿ ಅವರನ್ನು ಉಳಿಯುವಂತೆ ಮಾಡಿತು. ಇದರಿಂದ ನನ್ನ ಮೂರನೆಯ ತಿಂಗಳಿನಿಂದಲೇ ಯಕ್ಷಗಾನದ ಸದ್ದು ನನಗೆ ಹೃದ್ಯವಾಯಿತು. ನೆನಪಿಗೆ ಉಳಿಯುವ ಕೌಮಾರ್ಯದಲ್ಲೇ ಯಕ್ಷಗಾನದ ದಿಗ್ಗಜರ ಕುಣಿತ, ಆರ್ಭಟ, ರಸೋತ್ಕರ್ಷತೆಯ ಪರಾಕಾಷ್ಟೆಯು ನನ್ನನ್ನು ರಂಗಸ್ಥಳದ ಮುಂದೆ ಎಳೆದು ಕೊಂಡೊಯ್ಯಿತು. ತಂದೆಯ ಹಳೆಯ ಬೈರಾಸು ನನಗೆ ಆಸನವಾಯಿತು. (ಆಸ್ರಣ್ಣರ ಗೌರವದ ಬೆಂಚು ನನಗೆ ಬೇಡವಾಗಿತ್ತು). ಹೀಗೆ ನಿದ್ದೆ ಬರುವವರೆಗೆ ಆಟ. ಆಮೇಲೆ ಹತ್ತುಹೆಜ್ಜೆಯ ನಡಿಗೆಯ ಮನೆಯಲ್ಲಿ ನಿದ್ದೆ. ಇದು ನನಗೆ ಪರಿಪಾಠವಾಯಿತು.
ಆಟದ ದೇವರ  ಪೂಜೆ ನೋಡಲು ಅರ್ಧಗಂಟೆ ಮುಂಚೆಯೇ ಚೌಕಿಯತ್ತ ಧಾವಿಸಿ ನಾನು ಮೊದಲಾಗಿ ನೋಡುತ್ತಿದ್ದದ್ದು ಭಾಗವತರ ವೇಷ ಬಟವಾಡೆಯ ಕಾಗದ; ಅನಂತರ ರೆಂಜಾಳ ರಾಮಕೃಷ್ಣರೋ, ಪಡ್ರೆ ಚಂದು ಅವರೋ, ಗೋಪಾಲ ಭಟ್ಟರೋ, ಸುಮ್ಮನೆ ಕುಳಿತಿದ್ದರೆ ಬಲಿಪ ನಾರಾಯಣ ಭಾಗವತರೋ ನನ್ನ ಮಾತುಕತೆಗೆ ಆಶ್ರಯದಾತರಾಗಿ ಒದಗುತ್ತಿದ್ದರು. ಅಂದಿನ ಪ್ರಸಂಗದ ಕಥೆ ಅವರಲ್ಲಿ ಕೇಳುತ್ತಿದ್ದೆ. ಆಮೇಲೆ ರಂಗಸ್ಥಳದ ಮುಂದೆ ಕೂರುತ್ತಿದ್ದೆ. ಚಿಕ್ಕಪ್ರಾಯದ ಬಾಲೆ ಚದುರೆ .. ಅಲ್ಲಿಂದಲೇ ನನಗೆ ನೋಡಬೇಕು. ವೆಂಕಪ್ಪಯ್ಯರ ಶ್ರುತಿಬದ್ಧವೆನಿಸದ (ಅವರ ಗಂಟಲಿನ ಸಮಸ್ಯೆ ಬಂದ ನಂತರದ ಸ್ಥಿತಿ) ಪದ್ಯ ಮುಗಿದ ನಂತರ ಬಲಿಪರ ಯಾ ಇರಾ ಭಾಗವತರ ಪದ್ಯವನ್ನೂ ಎಂದೂ ಬಿಡಲಾರದೆ ಆಸ್ವಾದಿಸುತ್ತಾ ಬೈರಾಸಿನಲ್ಲಿ ಆಟ ನೋಡುವುದೇ ಅಂದಿಗೆ ಆಪ್ಯಾಯಮಾನವಾಗಿತ್ತು.
ಶಾಲೆ ಆರಂಭವಾದಂದಿನಿಂದ ವಿದ್ವಾನ್ ಪಿ. ಕೃಷ್ಣ ಭಟ್ ಅವರ ಚಾಟಿ ಏಟು ಆಟವನ್ನು ಕಡಿಮೆ ಮಾಡುತ್ತಿತ್ತೋ ಏನೋ; ಒಂದುವೇಳೆ ಅವರು ಯಕ್ಷಗಾನಾಸಕ್ತರು ಆಗದೇ ಇರುತ್ತಿದ್ದರೆ. ಆದರೆ ಅವರ ಆಸಕ್ತಿಯೂ ಯಕ್ಷಗಾನವಾದ್ದರಿಂದ ಶಿಷ್ಯತ್ವ ಅವರ ಮುಂದೆ ಸುಲಭವಾಯಿತು. ಹೆಜ್ಜೆ ಕಲಿತೆ. ಪು ಶ್ರೀನಿವಾಸ ಭಟ್ಟರು ಮಗುವಿನೊಂದಿಗೆ ಮಗುವಾಗಿರುತ್ತಿದ್ದ ಕಾರಣ ಅವರು ನನಗೆ ಯಕ್ಷಮಿತ್ರರಾಗುತ್ತಿದ್ದರು. ಇವರಿಂದ ಸ್ವಲ್ಪಮಟ್ಟಿಗೆ ವಿದ್ಯಾವಂತನಾದೆ.
ನಂತರ ಸಿಕ್ಕಿದವರು ಕೊರ್ಗಿ ವೇಂಕಟೇಶ ಉಪಾಧ್ಯಾಯರು. ನನ್ನ ಸ್ವರೂಪೋದ್ಧಾರಕರು. ಅವರಿಂದ ಕಲಿತೆ ಯಕ್ಷಗಾನಪಾಠವನ್ನು, ಸಂಸ್ಕೃತ ಬಾಲಪಾಠವನ್ನು, ಜೀವನದ ಪಾಠವನ್ನು ಮತ್ತು ಅದಕ್ಕಿಂತ ಹೆಚ್ಚಾಗಿ "ಧೈರ್ಯಮ್ ಸರ್ವತ್ರ ಸಾಧನಮ್" ಎನ್ನುವ ಮೌಲ್ಯವನ್ನು.
ದೇವಸ್ಥಾನದ ಜಾತ್ರೆಯಲ್ಲಿ ಪಲ್ಲಕ್ಕಿ ಸುತ್ತಿನ ಯಕ್ಷಗಾನ ಸೇವೆಗೆ ಗೆಜ್ಜೆ ಕಟ್ಟುವ ಮೂಲಕ ವೇಷ ಆರಂಭಿಸಿ ಕೆಲವೊಂದು ಪಾತ್ರಗಳನ್ನು ಉಪಾಧ್ಯಾಯರ ನಿರ್ದೇಶನದಲ್ಲಿ ರಂಗಸ್ಥಳದಲ್ಲೂ ಮಾಡಿದೆ. ಇಲ್ಲಿಗೆ ಹತ್ತನೇ ತರಗತಿ ಮುಗಿದು ಉಡುಪಿಗೆ ಸಂಸ್ಕೃತ ಅಧ್ಯಯನಕ್ಕಾಗಿ ತೆರಳಿದೆ. ತೆಂಕುತಿಟ್ಟಿನ ಗಾಳಿ ಇಲ್ಲದಿರುವ ಉಡುಪಿ, ಬಡಗಿನ ಗಾಳಿ ಇಲ್ಲದ ನಾನು ಅಲ್ಲಿ ಸ್ತಬ್ಧನಾಗಿ ಹೋದೆ ಮೊದಲೆರಡು ವರ್ಷ. ಅಷ್ಟಾಗುವಾಗ ನನ್ನ ತಂದೆಯ ಅಕಾಲಿಕ ಮರಣದಿಂದ ಮನೆಯ ಹೊಣೆಗಾರಿಕೆಯು ವಿದ್ಯಾರ್ಥಿಜೀವನದಲ್ಲೇ ನನ್ನನ್ನು ಆಕ್ರಮಸಿತು. ಅಕ್ಕಂದಿರ ಮದುವೆಯಿಂದ ಹಿಡಿದು ಎಲ್ಲವೂ ಆಗಬೇಕಿತ್ತು. ಮೂರೂ ಮಗಂದಿರು ಆಗ ವಿದ್ಯಾರ್ಥಿಗಳು. ಅದೇ ನನ್ನ ಜೀವನವಾಯಿತು. ಯಕ್ಷ್ಗಗಾನ ಹಗಲುಗನಸು ಅನ್ನೋಣವೇ ಸಂಸ್ಕೃತಶಾಲೆ. ರಾತ್ರಿಗನಸು ಅನ್ನೋಣವೇ ರಾತ್ರಿಯ ಇಂಗ್ಲೀಷ್ ಶಾಲೆ. ಮಧ್ಯೆ ಪೌರೋಹಿತ್ಯ, ಆಗಮ, ಜ್ಯೋತಿಷ್ಯ, ವೇದಪಾಠಗಳ ಸಮಯ ಬೇರೆ. ಹೀಗೆ ದಿನಕ್ಕೆ ಹನ್ನೊಂದು ಗಂಟೆಯ ಪಾಠ ಕೇಳುವುದೇ ಜೀವನವಾಯಿತು. ಯಕ್ಷಗಾನದ ಕನಸಿಗೂ ಸಮಯವಿಲ್ಲವಾಯಿತು. ರಜೆ ಸಿಕ್ಕಿದರೆ ನನ್ನ ಅಲ್ಲಿನ ಖರ್ಚಿಗೆ ಮತ್ತು ಮನೆಯ ಹೊಣೆಗಾರಿಕೆಗೆ ವಿತ್ತಸಂಚಯನದ ಅನಿವಾರ್ಯತೆ ಜೀವನದ ದಾರಿಯನ್ನೇ ಕಸಿದುಕೊಂಡಿತು.
ಹೀಗೆ ನನ್ನ ಬದುಕಿನ ಏಳು ವರ್ಷಗಳು ಉಡುಪಿಯಲ್ಲಿ ಸಾಗುವಾಗ ನನಗೆ ಅಲ್ಲೊಂದಿಲ್ಲೊಂದು ಆಟಗಳನ್ನು, ತಾಳಮದ್ದಲೆಯನ್ನು ಸವಿಯುವ ಅವಕಾಶ ಸಿಗುತ್ತಿತ್ತು. ಸುಧಾಕರ ಆಚಾರ್ಯರ ಅಗಸ್ಟ್ ಹದಿನೈದರ ತಾಳಮದ್ದಲೆ, ಅವರ ಸಂಯೋಜನೆಯ ಆಟಗಳು ಒಂದಿಷ್ಟು ಮಾನಸಿಕ ತೃಪ್ತಿಗೆ ಕಾರಣವಾಗಿತ್ತಷ್ಟೇ. ಸಂದರ್ಭದಲ್ಲಿ ನನ್ನ ಕುಟುಂಬ ಸ್ನೇಹಿತರಾದ, ನನ್ನ ಅಣ್ಣನ ಗುರುಗಳಾದ ಮಧೂರು ನಾರಾಯಣ ರಂಗಾ ಭಟ್ಟರು ತನ್ನ ಇಬ್ಬರು ಮಕ್ಕಳನ್ನು ನನ್ನ ಹೊಣೆಗಾರಿಕೆಯಲ್ಲಿ ಉಡುಪಿಗೆ ಕಳುಹಿಸಿದರು. ಅವರಲ್ಲಿ ಒಬ್ಬ ದೊಡ್ಡ ಜ್ಯೋತಿಷ್ಯರಾದರೆ ಇನ್ನೊಬ್ಬ ಯಕ್ಷಗಾನಪಟು ಎನಿಸಿದರು . ಅವರೇ ಎಲ್ಲರಿಗೂ ಪರಿಚಿತರಾದ ವಾಸುದೇವ ರಂಗಾ ಭಟ್ಟರು. ತನ್ನ ಬಾಲ್ಯದ ಹವ್ಯಾಸವನ್ನು ಉಡುಪಿಯಲ್ಲೂ ಮುಂದುವರಿಸಲು ಕೃಷ್ಣಾಪುರ ಮಠದ ಆಶ್ರಯದಲ್ಲಿದ್ದ ವಿದ್ಯಾದಾಯಿನಿ ಸಂಘವು ಅವರಿಗೆ ಸಹಕರಿಸಿತು. ಕಾಸರಗೋಡಿನವರಾದ ಹುಟ್ಟುಕುರುಡ ಗೋಪಾಲಕೃಷ್ಣ ಎಂಬವರು ಅವರ ಸಹ ಅರ್ಥಧಾರಿಯಾದರು. ಗೋಪಾಲಕೃಷ್ಣರಿಗೆ ನಾನು ಸಂಸ್ಕೃತ ಪಾಠ ಮಾಡುತ್ತಿದ್ದೆ. ಮೊದಲೇ ಸಲುಗೆಯಲ್ಲಿದ್ದ ವಾಸುದೇವ ರಂಗಾ ಭಟ್ಟರು ಮತ್ತು ಗೋಪಾಲಕೃಷ್ಣ ಭಟ್ಟರ ಒತ್ತಾಯವು ನನ್ನನ್ನೂ ವಿದ್ಯಾದಾಯಿನಿಗೆ ಎಳೆದುಕೊಂಡು ಹೋಯಿತು. ಭೀಷ್ಮ ಸೇನಾಧಿಪತ್ಯದ ದ್ರೋಣನ ಅರ್ಥದಿಂದ ನನ್ನ ತಾಳಮದ್ದಲೆಯ ಜೀವನ ಆರಂಭವಾಯಿತು. ಆದಿತ್ಯವಾರ ಸಂಸ್ಕೃತ ಶಾಲೆ ಇದ್ದು ಸಂಧ್ಯಾಶಾಲೆ ಇಲ್ಲದಿದ್ದುದರಿಂದ  ಸಮಯ ಯಕ್ಷಗಾನದ ತಾಳಮದ್ದಲೆಯ ಶಾಲೆಯಾಯಿತು. ಜೀವನದ ಇಷ್ಟಶಾಲೆಯೂ ಆಯಿತು. ವಾಸುದೇವ ರಂಗಾ ಭಟ್ಟರು ನನ್ನ ಗುರುಗಳಾದರು. ಅಂದಿನಿಂದ ಆಸಕ್ತಿ  ಪುನಃ ಜಾಗೃತಗೊಂಡಿತು. ಸಂತಸದ ಜೀವನದ ಆರಂಭವಾಯಿತು.
ನನ್ನ ದೊಡ್ಡಪ್ಪ ಆರಂಭಿಸಿದ ಅಷ್ಟಮಿಯ ತಾಳಮದ್ದಲೆಯಲ್ಲಿ ಅವರೇ ಅರ್ಥ ಹೇಳುತ್ತಿದ್ದರು. ನನ್ನ ತಂದೆ ಮೊದಲೇ ಇಹಲೋಕದಿಂದ ನಿರ್ಗಮಿಸಿದ್ದರಿಂದ ಅವರ ನಂತರ ಯಾರೂ ಆಸ್ರಣ್ಣರು ಅರ್ಥ ಹೇಳುತ್ತಿರಲಿಲ್ಲ. ಆದರೆ ತಾಳಮದ್ದಲೆ ನಿಲ್ಲದಂತೆ ಕಾಪಿಟ್ಟವರು ಪ್ರಸಿದ್ಧರಾದ ವಿದ್ವಾನ್ ಕೊರ್ಗಿ ವೇಂಕಟೇಶ ಉಪಾಧ್ಯಾಯರು ಹಾಗೂ ಅವರ ಶಿಷ್ಯ ಕವಿ, ನಾಟ್ಯಗುರು, ಅರ್ಥಧಾರಿ, ಹಿಮ್ಮೇಳದ ಭಾಗವತ, ಮದ್ದಲೆಗಾರರೂ ಆದ, ಪ್ರಸಿದ್ಧರಾದ ಕಟೀಲು ಲಕ್ಷ್ಮೀನಾರಾಯಣ ಭಟ್ಟರೆಂಬ ಅಸಾಮಾನ್ಯಪಟು. ನಾನು ಅರ್ಥ ಹೇಳುತ್ತೇನೆ ಎಂದು ತಿಳಿದ ಕೂಡಲೆಯೇ ಅರ್ಥ ಹೇಳಲು ಒತ್ತಾಯಿಸಿದರು. ಅಂದು ಕಟೀಲಿನಲ್ಲಿ ತಾಳಮದ್ದಲೆಯಲ್ಲಿ  ನನ್ನ ರಂಗಪ್ರವೇಶ ಆರಂಭವಾಯಿತು. ‘ಕೃಷ್ಣಸಂಧಾನ ವಿದುರನೇ ಕಟೀಲಿನ ಮೊದಲ ಅರ್ಥ. ವಾಸುದೇವ ಸಾಮಗರ ಕೃಷ್ಣನಿಗೆ ಕೊರ್ಗಿಯವರ ಕೃಷ್ಣ.
ಲಕ್ಷ್ಮೀನಾರಾಯಣ ಭಟ್ಟರಿಂದ ನನ್ನ ಅಣ್ಣ ಪ್ರಸಾದ ಆಸ್ರಣ್ಣರೂ ತಾಳಮದ್ದಲೆಗೆ ಎಳೆಯಲ್ಪಟ್ಟರು ನಾವು ಮೂವರೂ ಸೇರಿ ಪ್ರತಿ ಶನಿವಾರ ತಾಳಮದ್ದಲೆ ಆರಂಭಿಸಿದೆವು. ಸಮಯವಿದ್ದಲ್ಲಿ ಕೊರ್ಗಿಯವರೂ ಬಂದು ತಿದ್ದುತ್ತಿದ್ದರು. ಕಟೀಲು ರಮಾನಂದ ರಾಯರು ಉಚಿತ ಭಾಗವತಿಕೆಯನ್ನು, ನಾರಾಯಣ ಭಟ್ಟರು ಮದ್ದಲೆಯನ್ನು, ದೇವಿಪ್ರಸಾದ್ ಚೆಂಡೆಯನ್ನೂ ನುಡಿಸಿದರು. ಹೀಗೆ ಆರಂಭವಾದ ತಾಳಮದ್ದಲೆಗೆ ಪ್ರಸಂಗ ಪುಸ್ತಕವನ್ನು ಪು. ಶ್ರೀನಿವಾಸ ಭಟ್ಟರು ಒದಗಿಸಿದರು. ರಾಮಾಯಣದ ಒಂದು ಪದ್ಯವನ್ನೂ ಬಿಡದೆ ಎಲ್ಲಿವರೆಗೆ ಸಾಗುತ್ತದೋ ಅಲ್ಲಿವರೆಗೆ ಮಾತ್ರ ಮಾಡಿ ಧಾರಾವಾಹಿಯಂತೆ ಇಡೀ ರಾಮಾಯಣವನ್ನು ತಾಳಮದ್ದಲೆಯ ರೂಪದಲ್ಲಿ ನಡೆಸಿದೆವು.
ಅನಂತರ ನಾನು ಕಲಿತ ನಾಲ್ಕಕ್ಷರವನ್ನು  ತಾಳಮದ್ದಲೆಯಲ್ಲಿ ಉಪಯೋಗಿಸಲು ಆರಂಭಿಸಿದೆನನ್ನಣ್ಣ ವೇದಾಂತ ವಿದ್ವಾಂಸನಾದ ಪ್ರಸಾದ ಆಸ್ರಣ್ಣರು ನನ್ನ ತಾತ್ವಿಕ ಹಾಗೂ ಪೌರಾಣಿಕ ಗುರುಗಳಾದರು. ಲಕ್ಷ್ಮೀನಾರಾಯಣ ಭಟ್ಟರು ವಾದದ ಸದಸ್ಯರಾದರು. ರಂಗ ಭಟ್ಟರು ಮುಂದುವರಿದ ಚರ್ಚೆಯ ಭಾಗವಾದರು. ಕೊರ್ಗಿಯವರು ನಿರ್ಣಯದ ಅಧ್ಯಾಪಕರಾದರು. ಹೀಗೆ ಮುಂದುವರಿದು ಕೊರ್ಗಿ ಅವರ ಮಾರ್ಗದರ್ಶನದಲ್ಲಿ ವಾಸುದೇವ ರಂಗ ಭಟ್ಟರ ಸಂಯೋಜಕತ್ವದಲ್ಲಿ ಶೇಣಿಸಾಮಗರು ಹಲವಾರು ಭಾರಿ ಬಂದು ನಮ್ಮ ಅಜ್ಜಂದಿರಾದರು. ತಾಳಮದ್ದಲೆಯ ಹುಚ್ಚು ಅಂಟಿಸಿದ ಹರಿಕಾರರಾದರು. ಸಾಗಿತು ಹೀಗೆಯೇ  ನಮ್ಮ ಅಭಿರುಚಿ. ಮುಂದೆ ತಾಳಮದ್ದಲೆಯ ಸಪ್ತಾಹವೂ ಅದೇ ವಾಸುದೇವ ರಂಗ ಭಟ್ಟರ ಸಂಯೋಜಕತ್ವದಲ್ಲಿ ಹನ್ನೊಂದು ವರ್ಷ ನಡೆಯಿತು.
ಮಧ್ಯೆ ನನ್ನ ತಂದೆ ಮಾಡಿಸುತ್ತಿದ್ದ ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿಸುತ್ತೇನೆಂದು ಹರಕೆ ಹೊತ್ತ ತಾಯಿಯ ಹರಕೆಗಾಗಿ ಪುನಃ ಗೆಜ್ಜೆ ಕಟ್ಟಲು ಆರಂಭಿಸಿದೆ. ದೀರ್ಘಕಾಲದ ಬಿಡುವಿಕೆಯಿಂದಾಗಿ ಹೆಜ್ಜೆ ಮರೆತು ಹೋದಧ್ದರಿಂದ ಅದನ್ನು ಹೆಚ್ಚು ರೂಢಿಸಿ ಕೊಂಡಿಲ್ಲ ಅನ್ನಿ. ಅದು ನಮ್ಮ ಆಟದ ಸೇವೆಗೆ ಸೀಮಿತವಾಗಿಯೇ ಇಂದಿಗೂ ಇದೆ. ಪ್ರಸ್ತುತ ಯಕ್ಷಗಾನ ತಾಳಮದ್ದಲೆಯು ಸೇವೆ ಎನ್ನುವ ಸಂಕಲ್ಪದಲ್ಲಿ ದೇವಸ್ಥಾನಗಳಿಗೆ ಸೀಮಿತವಾಗಿ ಅರ್ಥಹೇಳುವವನಾಗಿ ಇದ್ದೇನೆ.
ನನ್ನ ಆಸಕ್ತಿಯ ಯಕ್ಷಗಾನ ಮತ್ತೂ ಗರಿಬಿಡುವಂತೆ ಮಾಡಿದ್ದು ಶ್ರೀದುರ್ಗಾ ಮಕ್ಕಳ ಮೇಳ ಅನ್ನುವ ನಾನೇ ಕಟ್ಟಿ ಬೆಳೆಸಿದ ಸಂಸ್ಥೆಯಿಂದ. ಇದಕ್ಕೆ ಪ್ರೇರಕರು ನನ್ನ ಅಧ್ಯಾಪಕರಾದ ವಾಸುದೇವ ಶೆಣೈ ಅವರು. ಇದಕ್ಕೆ ಕಾರಣ ಕೃಷ್ಣ ಭಟ್ಟರ ನಿವೃತ್ತಿ, ಕೊರ್ಗಿಯವರ ಅನಾರೋಗ್ಯ; ಕಟೀಲಿನಲ್ಲಿ ನಿಂತ ಯಕ್ಷಗಾನದ ತರಗತಿ. ಇದು ಬೆಳೆದು ವಾರ್ಷಿಕೋತ್ಸವದ ಆಚರಣೆಗೆ ಬಂದಾಗ ಯಕ್ಷಗಾನದ ಮೇರುವ್ಯಕ್ತಿಗಳಿಗೆ ಸನ್ಮಾನ ಮಾಡಬೇಕೆಂದು ಕಂಡಿತು. ಅದಕ್ಕಾಗಿ ನನ್ನ ಹಿತೈಷಿ ಮಾನ್ಯ ಶ್ರೀಧರ ಶೆಟ್ಟಿ ಮಾಣಿಲದವರ ಪರಿಚಯದಿಂದ ಡಾ. ಪದ್ಮನಾಭ ಕಾಮತರನ್ನು ಅತಿಥಿಗಳಾಗಿ ಕರೆಯುವ ಪ್ರೇರಣೆ ಬಂತು. ಇದು ಒಂದರ್ಥದಲ್ಲಿ ನನ್ನ ಯಕ್ಷಪಯಣದ ದಾರಿಯನ್ನೇ ಬದಲಿಸಿತು.ಅವರಿಂದ ಯಕ್ಷಮಿತ್ರ ನಮ್ಮವೇದಿಕೆಯ ಸದಸ್ಯನಾದೆ; ಅದರೊಳಗಿನ ಸದಸ್ಯರು ಮಿತ್ರರಾಗಿ ಲಭಿಸಿದರು. ದಿನವೊಂದಕ್ಕೆ ಕನಿಷ್ಟ ಒಂದು ಗಂಟೆಯಾದರೂ ಮೊಬೈಲ್ ಇದಕ್ಕಾಗಿ ಉಪಯೋಗವಾಗುವ ಕ್ರಮ ನಿತ್ಯವಿಧಿಯಲ್ಲಿ ಸೇರಿತು.
ಇನ್ನು ಏನಾಗುತ್ತದೋ ತಿಳಿಯುವ ಯೋಗ್ಯತೆ ಇಲ್ಲದಿದ್ದರೂ ಆದದ್ದೆಲ್ಲಾ ಒಳಿತೇ ಆಯಿತು ಅನ್ನುವ ದಾಸವಾಣಿ ಅನುಭವಕ್ಕೆ ಬಂದದ್ದಂತೂ ನಿಜ. ಹೀಗಾಗುವುದಕ್ಕೆ ಸಹಕರಿಸಿದ ಪ್ರತಿಯೊಬ್ಬನಿಗೂ, ಪ್ರತಿಯೊಂದಕ್ಕೂ ಹೇಳುತ್ತೇನೆ. "ಭೂಯಿಷ್ಠಾಂತೇ ನಮ ಉಕ್ತಿಮ್ ವಿಧೇಮಅನ್ನುವ ವೇದವಾಕ್ಯವೇ ನನ್ನ ನಿತ್ಯೋಕ್ತಿಯಾಗಲೆಂದು.
ನಮಸ್ಕಾರ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
            Vidwan Sriharinarayanadasa Asranna, Kateelu