Friday, 26 June 2015

ಯಕ್ಷಗಾನ - ಪ್ರಯೋಜನ

ಯಾವುದೇ ಕಾವ್ಯ ಅಥವಾ ಕಲೆ ಇರಲಿ ಅದರಲ್ಲಿ ಕವಿಗಳು, ಸಹೃದಯರು ಆಸಕ್ತಿ ತೋರಿಸುವುದು ಸಹಜ. ಇಂತಹ ಆಸಕ್ತಿಗೆ ಏನಾದರೂ ಪ್ರಯೋಜನ ಇರಲೇಬೇಕಲ್ಲವೇ?
"ಪ್ರಯೋಜನಮನುದ್ದಿಶ್ಯ ಮಂದೋಪಿ ಪ್ರವರ್ತತೇ" (ಪ್ರಯೋಜನವಿಲ್ಲದಿದ್ದರೆ ಬುದ್ಧಿಹೀನನೂ ಪ್ರವೃತ್ತಿಯಲ್ಲಿ ತೊಡಗುವುದಿಲ್ಲ) ಅನ್ನುವ ನಲ್ನುಡಿಯಂತೆ ಪ್ರೆಯೋಜನ ಅನಿವಾರ್ಯ.
ಕಾವ್ಯಪ್ರಕಾಶ ಎಂಬ ಸಾಹಿತ್ಯಶಾಸ್ತ್ರಜ್ಞ ಕಾವ್ಯ ಪ್ರಯೋಜನವನ್ನು ಬಹಳ ಚೆನ್ನಾಗಿ ಹೇಳಿದ್ದಾನೆ.
"ಕಾವ್ಯಮ್ ಯಶಸೇ, ಅರ್ಥಕೃತೇ, ವ್ಯವಹಾರವಿದೇ, ಶಿವೇತರಕ್ಷತಯೇ, ಕಾಂತಾಸಮ್ಮಿತತಯೋಪದೇಶಯಜೇ, ಸದ್ಯಃ ಪರ ನಿರ್ವೃತಯೇ" ಎಂದು. ಯಕ್ಷಗಾನ ಒಂದು ಕಾವ್ಯ. ಅಲ್ಲಿ ಭಾಗವತರು ಪ್ರಸಂಗ ಸಾಹಿತ್ಯವನ್ನು ಯಥಾವತ್ತಾಗಿ ಹಾಡಬೇಕು. ಆದರೆ ಅರ್ಥಧಾರಿಗಳು ಭಾವಕ್ಕನುಗುಣವಾಗಿ ಅವರ ಅರ್ಥಾನುಸಂಧಾನದಂತೆ ಪ್ರಸಂಗಕಾವ್ಯಕ್ಕನುಗುಣವಾಗಿ ಅರ್ಥ ಹೇಳುವ ಗದ್ಯಕವಿಗಳು. ಆದ್ದರಿಂದ ಯಕ್ಷಗಾನವನ್ನು ಪೂರ್ಣ ಪ್ರಮಾಣದ ಕಾವ್ಯವೆಂದು ಪ್ರಾಮಾಣಿಕವಾಗಿ ಅನ್ನಬೇಕು. ಆದ್ದರಿಂದ ಒಂದೋಂದಾಗಿಯೇ ಪ್ರಯೋಜನಗಳನ್ನು ಮೆಲುಕು ಹಾಕಿ ನೋಡೋಣ.
ಕಾವ್ಯಮ್ ಯಶಸೇಅಂದರೆ ಕೀರ್ತಿಗಾಗಿ ಅನ್ನುವುದು  ಮೊದಲನೆಯದು.
ಯಕ್ಷಗಾನ ಎನ್ನುವುದು ಸಾಂಸ್ಥಿಕವಾಗಿ ನೋಡಿದರೆ ದೇವಸ್ಥಾನಗಳಿಗೆ, ಸಂಘ ಸಂಸ್ಥೆಗಳಿಗೆ ಕೀರ್ತಿಯನ್ನು ತಂದುಕೊಟ್ಟಿದೆ. ವೈಯಕ್ತಿಕವಾಗಿ ನೋಡಿದರೆ ಶೇಣಿ, ಸಾಮಗದ್ಯಯರು, ಪೊಳಲಿ, ...... ಹೀಗೆ ಹಳೆಯ ಅಮರರಾದ ದಂತಕಥೆಗಳ ಹೆಸರುಗಳು, ಕೋಳ್ಯೂರು, ಚಿಟ್ಟಾಣಿ, ಮೂಡಂಬೈಲು..... ಹೀಗೆ ವರ್ತಮಾನದ ದಿಗ್ಗಜರ ಹೆಸರುಗಳು ಕೆಲವು ಪುಟಗಳಿಗೆ ಮುಟ್ಟೀತು.
ಎರಡನೆಯದು, ‘ಅರ್ಥಕೃತೇಅಂದರೆ ಸಂಪಾದನೆಗಾಗಿ. ಇದಕ್ಕೂ ಉದಾಹರಣೆಗಳು ಹಿಂದಿನದ್ದೇ. ವರ್ತಮಾನಕಾಲದಲ್ಲಿ ನಮ್ಮ ಕಲಾವಿದರು ಕಾರುಗಳಲ್ಲಿ ತಿರುಗುವುದನ್ನೂ ನೋಡುತ್ತೇವೆ. ನಮಗೂ ಸಂತಸವಾಗುತ್ತದೆ. ಎಲ್ಲರೂ ಹೀಗಾಗಲಿ ಎಂದೂ ಆಶಿಸೋಣ. ಇದಲ್ಲದೆ ಯಕ್ಷಗಾನದ ಸಹೃದಯ ಸಂಘಟಕರು ಪುರಭವನದಲ್ಲಿ, ಟೆಂಟ್ ಆಟದ ಸಂಘಟಕರು ತಮ್ಮ ಮೇಳಗಳ ಮೂಲಕವೂ ಸಂಪಾದಿಸುವುದನ್ನು ನಾವರಿತವರಿದ್ದೇವೆ. ದೂರದರ್ಶನ, ಆಕಾಶವಾಣಿ, ಪತ್ರಿಕೆಯವರು, ಮುದ್ರಕರು, ಹೆಚ್ಚೇಕೆ ಜಾಹೀರಾತಿನವರೂ, ಚರುಮುರಿಯವರೂ ಪ್ರಯೋಜನವನ್ನು ತಮ್ಮದಾಗಿಸಿದ್ದಾರೆ.
ಮೂರನೆಯದು, ‘ವ್ಯವಹಾರವಿದೇಅಂದರೆ ವ್ಯವಹಾರ ಜ್ಞಾನಕ್ಕಾಗಿ. ಕಲಾವಿದರ ಕಲಿಕೆ ಕಾಣುವಾಗ ಏನೇನೂ ಇಲ್ಲ ಅಂಥ ಇದ್ದವರು ಯಕ್ಷಗಾನದಿಂದಾಗಿ ವ್ಯವಹಾರ ಜ್ಞಾನಿಗಳಾಗಿದ್ದಾರೆ ಅನ್ನುವುದನ್ನು ಮರೆಯುವಂತಿಲ್ಲ. ಸಿದ್ಧಕಟ್ಟೆ ಚೆನ್ನಪ್ಪಶೆಟ್ಟರ ಓದು ಅತೀ ಕಡಿಮೆಯಂತೆ (ಶಾಲೆಯಲ್ಲಿ). ಆದರೆ ಅವರು ವಿದ್ವನ್ಮಾನ್ಯರು ಆದರು. ಶೇಣಿಗಳ ಅಗಾಧಜ್ಞಾನಕ್ಕೆ ಯಕ್ಷಗಾನ ವೇದಿಕೆಯಾಯಿತು. ಹಿರಿಯರನ್ನು ಗೌರವಿಸಬೇಕು, ಗುರುನಿಂದೆ ಕೂಡದು ಇತ್ಯಾದಿ ಸಂಸ್ಕೃತಿಯ ರಾಯಭಾರಿ ನಮ್ಮ ಯಕ್ಷಗಾನ ಅನ್ನುವುದನ್ನು ಎಂದೂ ಮರೆಯುವಂತಿಲ್ಲ.
ನಾಲ್ಕನೆಯದು, ‘ಶಿವೇತರಕ್ಷತಯೇಅಂದರೆ ಅಮಂಗಲದ ನಾಶಕ್ಕಾಗಿ ಎಂದು. ಇದಕ್ಕೆ ಕಟೀಲು ಕ್ಷೇತ್ರವನ್ನೇ ಉದಾಹರಿಸಬಹುದು. ಎಷ್ಟು ಜನ ತಮ್ಮ ತಾಪತ್ರಯಕ್ಕಾಗಿ ಯಕ್ಷಗಾನವನ್ನು ಹರಕೆಯಾಗಿಸುತ್ತಾರೆ. ಅದರಿಂದ ಸುಖಿಗಳಾಗುತ್ತಾರೆ ಎಂದು ಭಕ್ತರಲ್ಲಿ ಕೇಳಿದರೆ ಲೆಕ್ಕ ಸಿಕ್ಕೀತು, ವಿಷಯ ತಿಳಿದೀತು. ನನ್ನ ತಂದೆ ಗಂಡು ಸಂತತಿಗಾಗಿಯೇ ಆಟ ಹರಕೆ ಹೇಳಿದ್ದು ಇಂದಿಗೆ ನಲುವತ್ತಾರು ಸಂವತ್ಸರಗಳು ಸಂದವು. ಹೀಗೆ ಧರ್ಮಸ್ಥಳ, ಮಂದರ್ತಿ, ಮಾರಣಕಟ್ಟೆ ಮೇಳಗಳ ಸಂಖ್ಯೆ ಅನೇಕ.
ಕಾಂತಾಸಂಹಿತತಯಾ ಉಪದೇಶಯುಜೇಅಂದರೆ ಯಾವುದೇ ಆದೇಶವಿಲ್ಲದೆ ನಯವಾದ ನಿಯಮ ಪ್ರತಿಪಾದನೆಯಿಂದಲೇ ಉಪದೇಶಿಸಲು ಎಂದರ್ಥ. ಧರ್ಮಶಾಸ್ತ್ರವನ್ನು ಆದೇಶದಂತೆ ಹೇರುವುದು ಪ್ರಭುಸಂಹಿತೆ. ಅವು ಶೃತಿ, ಸ್ಮೃತಿ, ಧರ್ಮಶಾಸ್ತ್ರ ಇತ್ಯಾದಿ ಗ್ರಂಥಗಳು. ಇದು ಪಾಠದ ರೀತಿಯಲ್ಲಿ ಗುರುಕುಲದಲ್ಲಿ ಕಲಿಯುವಂಥದ್ದು. ಸ್ವಲ್ಪ ಕಷ್ಟ. ಇನ್ನೊಂದು ನಯವಾಗಿ ನೀತಿಪಾಠದಿಂದ ತಿಳಿಯಪಡಿಸುವುದು. ಯಕ್ಷಗಾನದಿಂದಾಗಿ ಅನಕ್ಷರಸ್ಥರೂ ನಮ್ಮ ಊರಿನಲ್ಲಿ ಯುಕ್ತಾಯುಕ್ತತೆ ಮಾತನಾಡುತ್ತಾರೆ. ಧರ್ಮಬುದ್ಧಿಯಿಂದ ನಡೆಯುತ್ತಾರೆ. ಇದಕ್ಕೆ ತಾವು ನೋಡಿದ ಯಕ್ಷಗಾನದಲ್ಲಿನ ಮಹಾಪುರುಷರ ನಡೆಯನ್ನು ಉತ್ತರಿಸುತ್ತಾರೆ. ಧರ್ಮರಾಯ ಯಕ್ಷನಿಗೆ ಕೊಟ್ಟ ಉತ್ತರವಂತೆ "ಮಹಾತ್ಮನೋ ಯೇನ ಗತಾಃ ಪಂಥಾಃ" ಅಂದರೆ ಮಹಾತ್ಮರು ಯಾವ ದಾರಿಯಲ್ಲಿ ಸಾಗುತ್ತಾರೋ ಅದೇ ಧರ್ಮದ ದಾರಿ ಎನ್ನುವುದನ್ನು ನಿರಕ್ಷರಕುಕ್ಷಿಗಳೂ ಅರ್ಥೈಸಿಕೊಂಡಿದ್ದಾರೆ. ಇದಕ್ಕಿಂತ ದೊಡ್ಡ ಪ್ರಯೋಜನ ಬೇಕೇ ಹೇಳಿ. ಇದನ್ನೇ ಪ್ರಾಚೀನರಂದದ್ದು "ಕಾವ್ಯಸ್ಯ ಪ್ರಯೋಜನಮ್ ಹಿ ರಾಜಕುಮಾರಾದೀನಾಮ್ ವಿನೇಯಾನಾಮ್ ರಾಮಾದಿವತ್ ಪ್ರವರ್ತಿತವ್ಯಮ್ ರಾವಣಾದಿವತ್ ಇತ್ಯಾದಿ ಕೃತ್ಯಾಕೃತ್ಯಪ್ರವೃತ್ತಿನಿವೃತ್ತ್ಯುಪದೇಶಃ" (ವಿನಯಪೂರ್ವಕವಾಗಿಯೇ  ಹೇಳಬೇಕಾದ ರಾಜಕುಮಾರರಿಗೆ ರಾಮನ ಹಾಗೆ ವ್ಯವಹರಿಸುವ ಪ್ರವೃತ್ತಿ ಹಾಗೂ ರಾವಣನ ಹಾಗೆ ವ್ಯವಹರಿಸದಂತೆ ನಿವೃತ್ತಿಯನ್ನು ಉಪದೇಶಿಸುವುದೇ ಕಾವ್ಯದ ಪ್ರಯೋಜನ).
ಕೊನೆಯದು, ‘ಸದ್ಯಃ ಪರನಿರ್ವೃತಯೇಅಂದರೆ ಮೋಕ್ಷಕ್ಕಾಗಿ. ಧರ್ಮವೇ ಮೋಕ್ಷಕ್ಕೆ ದಾರಿ. ಧರ್ಮವನ್ನು ತನ್ನದು ಅನ್ನುವ ನೆಲೆಯಲ್ಲಿ ಕರ್ಮಫಲವನ್ನು ಬಿಟ್ಟು ನಿರಪೇಕ್ಷಬುದ್ಧಿಯಿಂದ ಮಾಡಿದಲ್ಲಿ ಮೋಕ್ಷ ಸಿಗುತ್ತದಂತೆ. (ಯುಕ್ತಃ ಕರ್ಮಫಲಮ್ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಟಿಕೀಮ್) ಕೆಲವರು ಯಕ್ಷಗಾನವನ್ನು ಆಡಿಸುವುದೂ ನಿರಪೇಕ್ಷ ಬುದ್ಧಿಯಿಂದ. ಬಲಿಪ ಭಾಗವತರಂಥವರು ತಪಸ್ಸನ್ನಾಗಿ ಸ್ವೀಕರಿಸಿ ಧನದ ಆಶೆಗೆ ಯಕ್ಷಗಾನೀಯವಲ್ಲದ ಮಾರ್ಗವನ್ನವಲಂಬಿಸದೆ ರಾಜಯೋಗಿಗಳಾದವರು. ಯೋಚನೆಯನ್ನವಲಂಬಿಸಿದರೆ ಮಾರ್ಗವೂ ಮೋಕ್ಷಕ್ಕೆ ಸೇರುತ್ತದೆ.
ಹೀಗೆ ಯಕ್ಷಗಾನ ಕಾವ್ಯವು ಮಂಗಲಪ್ರದ. ಆತ್ಯಂತಿಕ ಪ್ರಯೋಜನವುಳ್ಳದ್ದು. ಕರಾವಳಿ ಪಾವನ. ನಾವೆಲ್ಲ ಪುನೀತರು.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
    Vidwan Sriharinarayanadasa Asranna, Kateelu

No comments:

Post a Comment