Tuesday, 7 July 2015

ಯಕ್ಷಗಾನದ Copyright ಅನ್ನುವ ಗೀಳು

ನನಗಾಗುವ ಆಶ್ಚರ್ಯ ಯಕ್ಷಗಾನ ಕಾವ್ಯ ರಸಾಯನ ಅನ್ನುತ್ತಾರೆ. ಅದು ಬೆಳೆಯಬೇಕೆಂದು ಬೊಬ್ಬಿಡುತ್ತಾರೆ. ಹಾಳಾಗುತ್ತಿದೆ ಎಂದು ಗೋಳಿಡುತ್ತಾರೆ. ಸರಿ ಮಾಡಬೇಕೆಂದು ಕಮ್ಮಟ ಮಾಡುತ್ತಾರೆ; ಲೇಖನಗಳನ್ನು ಬರೆಯುತ್ತಾರೆ; ನೈಜ ರೂಪದ ಭಾವಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ; ಹಾಡುಗಳನ್ನೂ ವಿನಿಮಯಕ್ಕೆ ಉಪಯೋಗಿಸುತ್ತಾರೆ; ವೀಡಿಯೋಗಳನ್ನು ಕೂಡಾ. ಇದು ಯಕ್ಷಗಾನೀಯವಾದದ್ದು; ಇದು ಅಲ್ಲ ಎಂದು ವಿಮರ್ಶಿಸಿತ್ತಾರೆ. ಸಂತೋಷದ ವಿಚಾರವೇ. ಅವರ ಕಾಳಜಿಗೆ ತಲೆ ಬಾಗಲೇಬೇಕು. ಆದರೆ ಅದು ಮುಂದಿನ ವಿನಿಮಯಕ್ಕೆ ಬೇರೊಬ್ಬ ಬಳಸಿದರೆ ಆಕ್ಷೇಪಿಸುತ್ತಾರೆ. ಎಂತಹ ವಿಪರ್ಯಾಸ? ನನಗಂತೂ ಅರ್ಥವೇ ಆಗಲಿಲ್ಲ ಇದರ ಹಿಂದಿನ ಮರ್ಮ ಏನೆಂದು.
ಆಗುವುದೂ ಇಲ್ಲ ಬಿಡಿ. ಪ್ರಾಯಶಃ ಬ್ರಹ್ಮ ರಹಸ್ಯ ಅದು. ಅದಕ್ಕಂದದ್ದೇ ಇರಬೇಕು ಶಾಸ್ತ್ರಗಳು ಗುಪ್ತತೆಯನ್ನು ತನ್ನದಾಗಿಸಿಕೊಂಡವುಗಳು ಎಂದು. ಅದನ್ನು ಯಾವನೋ ದಯಾಳುವಾದ ತತ್ತ್ವಶಾಸ್ತ್ರಜ್ಞ ಉಪದೇಶಿಸುವಾಗ ಅನ್ನುವುದು "ಇತಿ ಗುಹ್ಯತಮಮ್ ಶಾಸ್ತ್ರಮ್" ಎಂದು. ಅಂದರೆ ಇದು ತೀರಾ ಗುಟ್ಟಾಗಿರುವಂಥದ್ದು ನಿನಗೆ ಮಾತ್ರ ಹೇಳುವುದು ಎಂದು. ಆದರೆ ಹೀಗೆ ಹೇಳಿದ ಶಾಸ್ತ್ರಗಳು ಮುಂದೆ ಅವರಿಂದ ಯಾರೊಬ್ಬನ ಮುಖಾಂತರವಾದರೂ ಲೋಕಕ್ಕೆ ಕೊಡಲ್ಪಟ್ಟಿವೆ. ಲೋಕಕ್ಕೆ ಉಪಕಾರವಾಗಿದೆ. ನಂತರ ಗುಹ್ಯತಮ ಶಾಸ್ತ್ರವಾಗಿ Copyright ಅನ್ನಿಸಿಕೊಂಡು ಉಳಿಯಲಿಲ್ಲ. ಯಕ್ಷಗಾನದಲ್ಲೂ ಹಾಗನ್ನೋಣವೇ? ಹೇಳಲು ಮುಜುಗರವಾಗುತ್ತದೆ.
ಯಕ್ಷಗಾನದ ಉಳಿವಿಗಾಗಿ ಗುರುಗಳನ್ನು ಆಶ್ರಯಿಸುವುದು ಸಹಜ. ಆದರೆ ಅದೇ ಗುರುಗಳಿಗೆ ಇರುವ ವೃತ್ತಿ ಮಾತ್ಸರ್ಯ ಕಂಡರೆ ಬೇಸರವಾಗುತ್ತದೆ. ತಾನು ಕಲಿಸಿಕೊಟ್ಟದ್ದನ್ನು ತನ್ನ ಶಿಷ್ಯ ಪ್ರದರ್ಶಿಸಿ ಅದು ಅವನ ಉತ್ತಮ ವೇಷ ಅನ್ನಿಸಿಕೊಳ್ಳುವುದರಲ್ಲಿ ಯಶಸ್ವಿಯಾದಲ್ಲಿ ತನ್ನ ವಿದ್ಯೆ ಪರಾಧೀನವಾಗುತ್ತದೆ ಎಂದು ಮಾತ್ಸರ್ಯದಿಂದ ಹೇಳಿಯೇ ಕೊಡುವುದಿಲ್ಲ. ಕಟೀಲಲ್ಲಿ ನಡೆದ ಹಿಮ್ಮೇಳ ಕಮ್ಮಟದಲ್ಲೂ ಭಾಗವಹಿಸಿದವರಲ್ಲಿ ಒಬ್ಬರು ತಪ್ಪುಗಳನ್ನು ಹೇಳುತ್ತಾರಾದರೂ ಸರಿ ಯಾವುದೆಂದು ಹೇಳಲೇ ಇಲ್ಲ. ಓಡಿ ಹೋಗಿ ತಮ್ಮ ಆಸನದಲ್ಲಿ ಕುಳಿತುಬಿಟ್ಟರು. ಎಂಥ Copyright ಇದು?
ಯಕ್ಷಗಾನಕ್ಕೆ ಸಂಶೋಧನಾತ್ಮಕ ವೀಡಿಯೋ ಚಿತ್ರೀಕರಣಗಳನ್ನು ಮಾಡಿಸಿಕೊಂಡು ಇಂದು ತನ್ನ ಅಂಕಿತದಲ್ಲಿ ಅನರ್ಘ್ಯ ಗಾನಗಳು, ಬಣ್ಣಗಳು, ನಾಟ್ಯಗಳನ್ನು ಇರಿಸಿಕೊಂಡು ಕಲಿಕೆಗಾಗಿ ನೀಡಿ ಎಂದು ಕೇಳಿದಲ್ಲಿ ನಮ್ಮಲ್ಲಿ ಬಂದು ನೋಡಬಹುದೇ ಹೊರತು ಅದರ ಪ್ರತಿಗಳನ್ನು ನೀಡುವುದಿಲ್ಲ ಅನ್ನುತ್ತಾರೆ. ಕನಿಷ್ಟ ಮಾರುಕಟ್ಟೆಗೂ ಹಾಕುವುದಿಲ್ಲ. ಇವರಿಂದ ಯಕ್ಷಗಾನ ಉಳಿಯಲಿದೆಯೇ? ಎಂಥ Copyright ಇದು?
ಅಕಾಡೆಮಿಯ ಕಮ್ಮಟಗಳೂ ಇಷ್ಟೇ. ಹತ್ತು ಜನ ವಿದ್ವಾಂಸರ ನಡುವೆ ವಿಷಯಗಳು ಚರ್ಚಿಸಲ್ಪಡುತ್ತವೆ. ದಾಖಲೀಕರಣ ನಡೆಯುತ್ತದೆ. ಬೆಂಗಳೂರಿನ ಕಪಾಟುಗಳಲ್ಲಿ ಇರಿಸಲ್ಪಡುತ್ತವೆ. ಯಾರು ಕೇಳಿದರೂ ಕೊಡಲ್ಪಡುವುದಿಲ್ಲ. ಕನಿಷ್ಟ ಲಾಭಕ್ಕಾದರೂ ಮಾರಲ್ಪಡುವುದಿಲ್ಲ. ಕೊನೆಗೆ ಒಂದು ದಿನ ನಿಯಮಾನುಸಾರ ಕಡತವು ನಾಶಗೊಳ್ಳಲ್ಪಡುತ್ತವೆ. ಎಂಥ Copyright ಇದು?
ತಿಟ್ಟೊಂದರಲ್ಲಿದ್ದರು ಪ್ರಸಿದ್ಧ ವೇಷಧಾರಿ. ತನ್ನ ಅತ್ಯುತ್ತಮ ವೇಷ, ಕುಣಿತ, ಭಾವ, ಮಾತು, ಸಂಘಟನೆಗಳಿಂದ ಪ್ರಸಿದ್ಧಿಯನ್ನು ಕಂಡವರು. ಆದರೆ ತನ್ನ ಯಾವುದೇ ಪಾತ್ರದ ವೀಡಿಯೋ ಮಾಡಲು ಹಠದಿಂದ ತಡೆದರು. ಅದರಿಂದಾಗಿ ಪ್ರದರ್ಶನಕ್ಕೆ ಪ್ರೇಕ್ಷಕರು ಕಡಿಮೆ ಆಗುತ್ತಾರೆ ಆಸ್ರಣ್ಣರೇ, ಬೇಡ ಅಂದೇಬಿಟ್ಟರು. ವಯಸ್ಸಿನ ಆಧಿಕ್ಯದಿಂದ ದಿವಂಗತರಾದರು. ಈಗ ಅವರಿಗೆ ಹೆಗ್ಗಳಿಕೆ ಮಾತ್ರ ಯಕ್ಷಗಾನದ ದಂತಕಥೆ ಎಂದು. ಯಾಕೆಂದರೆ ಅಕ್ಷಿಕಥೆ ಅನ್ನಲು ವೀಡಿಯೋಗಳು ಇಲ್ಲ ನೋಡಿ. ಎಂಥ Copyright ಇದು?
ಧ್ವನಿಸುರುಳಿಯೊಂದರಲ್ಲಿ ಅವರ ಸಂಗ್ರಹದ ಮುದ್ರಿಕೆ ಮುದ್ರಣವಾಗಿದೆ ಎಂದು ಸಾರಾಸಗಟಾಗಿ ಖಂಡಿಸಿದರು ಮತ್ತೊಬ್ಬರು. ಮುದ್ರಿಸಿದವರು ಗೌರವಾನ್ವಿತರು ಅನ್ನುವುದನ್ನೂ ಮರೆತರು. ಅದು ಯಕ್ಷಗಾನದ ಪ್ರಚಾರಕ್ಕಾಗಿ ಅನ್ನುವುದೂ, ಲಾಭದ ಉದ್ದೇಶವಿಲ್ಲದೆ ಉಚಿತವಾಗಿಯೇ ನೀಡಲ್ಪಡುವುದು ಅನ್ನುವುದೂ ಅವರ ಗಣನೆಗೆ ಬರಲಿಲ್ಲ. ಉತ್ತಮ ಕಾರ್ಯಕ್ಕೆ ಹಾಡಿದ ಭಾಗವತರ ಆಕ್ಷೇಪವಿರಲಿಲ್ಲ; ಬದಲಿಗೆ ಸ್ವಾಗತವಿತ್ತು. ಆದರೆ ಸಂಗ್ರಾಹಕರ ಆಕ್ಷೇಪ (ಪುರಾವೆ ಕೇಳಲಾಗದು)ಮಾತ್ರ ಬಲವಾಗಿತ್ತು. ಎಂಥ Copyright ಇದು?
ಇವುಗಳಿಂದ ಯಕ್ಷಗಾನದ ಪ್ರಚಾರವೇ ಯಾ ಅದರ ಕುಂಠಿತವೇ ಎಂದು ಮೊದಲು ಯೋಚಿಸಬೇಕು. ಒಂದುವೇಳೆ ಬೆಳಕಿಗೇನೇ ಬರದಿದ್ದಲ್ಲಿ ಇದರಿಂದಾಗುವ ನಷ್ಟ ಯಾರಿಗೆ ಅನ್ನುವುದನ್ನು ಯೋಚಿಸಬೇಕು. ಹೊಂದಿದವರಲ್ಲಿ ಇದ್ದೇ ಇದೆ. ಉಳಿದವರಲ್ಲಿ ಇಲ್ಲವೇ ಇಲ್ಲ. ಒಂದು ರೀತಿಯ ನಷ್ಟವಲ್ಲವೇ ಸಹೃದಯರಿಗೆ. ಹೊಂದಿದವರು ಲಾಭದ ಉದ್ದೇಶ ಹೊಂದಿದ್ದರೆ ಮಾರುಕಟ್ಟೆಗೆ ತಂದರೂ ಸಾರ್ಥಕವೆನ್ನಬಹುದಿತ್ತು. ಇಲ್ಲವಾದರೆ..., ಲಾಭದ ಉದ್ದೇಶವಿಲ್ಲದವರ ಭಾವನೆಗೆ ಸ್ಪಂದಿಸುವುದೇ ಸೂಕ್ತವೆಂದಾದರೂ ಯೋಚಿಸಬೇಕು.
ಒಂದು ಹಂತದಲ್ಲಿ ಯಕ್ಷಗಾನದ ಕಲಾವಿದರನ್ನು ನಿಜವಾಗಿ ನಾವು ಅಭಿನಂದಿಸಬೇಕು. ನಾವು ಸದುದ್ದೇಶದಿಂದ ನೇರಪ್ರಸಾರ ಯಾ ದಾಖಲೀಕರಣ ಮಾಡುತ್ತೇವೆ ಅಂದರೆ ಅದನ್ನು ಮನಸಾ ಒಪ್ಪಿ ಸ್ವಾಗತಿಸುತ್ತಾರೆ. ಯಕ್ಷಗಾನ ಬೆಳೆದು ಬಂದ ಬಗೆ ಇದು. ಮೊನ್ನೆ ಕಟೀಲಿನ ತಾಳಮದ್ದಳೆಯ ಸಪ್ತಾಹದಲ್ಲೂ ನೇರಪ್ರಸಾರ ಮಾಡಲಾಗಿತ್ತು. ಕಲಾವಿದರಾದ ಪ್ರಭಾಕರ ಜೋಷಿಯವರು ಮೆಸೇಜ್ ಮೂಲಕ ನನ್ನನ್ನು ಅಭಿನಂದಿಸಿದ್ದರು. ಅವರು ತನ್ನ ಅರ್ಥವನ್ನು ನನ್ನ ಅನುಮತಿ ಇಲ್ಲದೆ ಪ್ರಸಾರ ಮಾಡಕೂಡದು ಎಂದೂ ಅಂದವರಲ್ಲ. ಉಳಿದ ಕಲಾವಿದರೂ ಇದೇ ರೀತಿ ಸ್ಪಂದಿಸಿದ್ದಾರೆ ಸ್ಪಂದಿಸುತ್ತಾರೆ. ಇದು, ಇದು ... ಅವರ ಅಭಿಮಾನ. ಆದ್ದರಿಂದ ಅವರಿಗೆ ನಮಸ್ಕಾರ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು
   Vidwan Sriharinarayanadasa Asranna, Kateelu

No comments:

Post a Comment