Saturday 8 August 2015

ಫಂಟಾಮೃದಂಗಮುರಜಾದಿನಿನಾದಭಂಗಿತುಂಗೀಭವಚ್ಛ್ರುತಿರಸಾಯನಯಕ್ಷಗಾನೈಃಭಕ್ತೈಃ ಸುನಾಟ್ಯಕುಶಲೈಃ ಪರಿತೋಷ್ಯಮಾಣೇ ದುರ್ಗೇ ಕಟೀಲುವರದೇ ತವ ಸುಪ್ರಭಾತಮ್!! ..

ಅಸ್ರಣ್ಣರು ಕಟೀಲು ದೇವಿಗೆ ಹೀಗೆ ಸುಪ್ರಭಾತ ಹೇಳಿ ಕವಾಟೋದ್ಘಾನೆಯನ್ನು ಮಾಡಬೇಕು ಸಮಯದಲ್ಲೂ ಯಕ್ಷಗಾನವೆನ್ನುವ ಪದ ತಾಯಿಗೆ ಕೇಳಿಸಬೇಕುರಾತ್ರಿ ಅದನ್ನು ನೋಡಬೇಕು. ಕಟೀಲಲ್ಲಿದ್ದರೆ ನೋಡಲು ಪೀಠ ಬೇಕು. ಬೇರೆಡೆ ಹೇಗೆ ನೋಡುತ್ತಾಳೋ ನಾನರಿಯೆ. ಆದರೆ ಹೋಗುತ್ತಾಳೆ ಅನ್ನುವುದು ಭಕ್ತರ ಅನುಗ್ರಹದ ಅನುಭವದಿಂದ ವೇದ್ಯವಾಗುತ್ತದೆ. ಜ್ಯೋತಿಶ್ಶಾಸ್ತ್ರವಿದರಿಗೆ ತಿಳಿಯುತ್ತದೆ. ರೀತಿ ಹೋಗಲು ಅಸಾಧ್ಯವೆಂಬ ಕಾರಣಕ್ಕೆ ರಾತ್ರಿಯೂ ಸೇರಿ ದಿನವಿಡೀ ಉತ್ಸವವಿರುವ ಕಟೀಲಿನ ಆಟದ ದಿನ ಯಕ್ಷಗಾನಕ್ಕೆ ರಜೆ ಎಂದು ಹಿಂದೆ ಅವಳೇ ಪ್ರೇರೇಪಿಸಿ ಅದನ್ನೂ ಘೋಷಿಸಿದ್ದಾಳೆ. ಏನಪ್ಪಾ ಇವಳ ಸಂಕಲ್ಪ.
ಭಾವುಕರು ಕಣ್ಮುಚ್ಚಿ ಭಜಿಸುತ್ತಾರೆ; ರಸಿಕರು ಕಣ್ಬಿಟ್ಟು ನೋಡುತ್ತಾರೆ; ಕಲಾವಿದರು ಬೆವರಿಳಿಸಿ ಕುಣಿಯುತ್ತಾರೆ; ಯಜಮಾನ, ಸೇವಾಕರ್ತರು ಮನೋಭೀಷ್ಟಗಳನ್ನು ಕೋರುತ್ತಾರೆ; ಆಸ್ರಣ್ಣರು ಪ್ರಸಾದ ತರುವಾಗ ಗೌರವದಿಂದ ಇದಿರುಗೊಳ್ಳುತ್ತಾರೆ, ಊರವರು ನಮ್ಮ ಊರಿನ ಹಬ್ಬವೆಂಬಂತೆ ಭಾಗವಹಿಸುತ್ತಾರೆ..... ಹೀಗೆ ವೈಭವವೋ ವೈಭವ. ಕಟೀಲಮ್ಮನ ಆಟ.(ಆಟ ಎಂದೂ ಯಕ್ಷಗಾನದ್ದು ಪರ್ಯಾಯನಾಮ)
  ಕಟೀಲಮ್ಮನ ಆಟಕ್ಕೆ ಪೀಠಿಕೆ ಮನ್ವಂತರದ್ದಲ್ಲ ಎಂದೇ ನನ್ನ ಊಹೆ. ಇಲ್ಲಿನ ಎಲ್ಲಾ ಕ್ರಮಗಳೂ ಅದನ್ನೇ ಸಾರುತ್ತವೆ ಅನ್ನಿಸುತ್ತದೆ. ಅತೀ ಹೆಚ್ಚು ನಡೆಯುವ ದೇವೀ ಮಹಾತ್ಮ್ಯೆ ಪ್ರಸಂಗದ ಮೂಲ ಸಪ್ತಶತೀ ಎನ್ನುವ ಮಾರ್ಕಂಡೇಯ ಪರಾಣಾಂತರ್ಗತವಾದ ಒಂದು ಭಾಗ. ದೇವಿಯ ಕಥೆಯನ್ನು ಸಾರುವ ಭಾಗ. ಅದರ ಹನ್ನೆರಡನೆಯ ಅಧ್ಯಾಯ ವೈಶಿಷ್ಟ್ಯಪೂರ್ಣವಾದ ದೇವಿಯ ವಾಕ್ಯಗಳುಳ್ಳದ್ದು. ಅವುಗಳನ್ನೇ ಮೆಲುಕು ಹಾಕೋಣ. ’ಸರ್ವಮ್ ಮಮೈತನ್ಮಾಹಾತ್ಮ್ಯಮ್ ಮಮ ಸನ್ನಿಧಿಕಾರಕಮ್ (ಈವರೆಗೆ ಆದದ್ದೆಲ್ಲವೂ ನನ್ನ ಮಹಾತ್ಮೆಯಾಗಿದ್ದು ನನ್ನ ಸಾನ್ನಿಧ್ಯವನ್ನು ಸೃಷ್ಟಿಸುತ್ತದೆ). ಮಹಾತ್ಮೆ ಅಂದರೆ ಸಪ್ತಶತಿಯಲ್ಲಿರುವ ಕಥೆ ಎಂದು ತೆಗೆದುಕೊಂಡರೆ ಸಾನ್ನಿಧ್ಯ ಸೃಷ್ಟಿಯಾಗುವ ಬಗೆ ಹೇಗೆ ಎಂದು ಯೋಚಿಸಿದರೆ ಅವಳೇ ಹೇಳುತ್ತಾಳೆ....’ಪ್ರೀತಿರ್ಮೇ ಕ್ರಿಯತೇ ಸಾಸ್ಮಿನ್ ಸಕೃದುಚ್ಚರಿತೇ ಶ್ರುತೇ’.(ನನ್ನ ಮಹಾತ್ಮೆಯ ಭಾಗವನ್ನು ಓದಿದರೆ ಯಾ ಕೇಳಿದರೂ ನನಗೆ ಅದು ಪ್ರೀತಿದಾಯಕ):......ಇತ್ಯಾದಿ ವಾಕ್ಯಗಳಿಂದ. ಅದರಲ್ಲೇ ಇರುವ ಇನ್ನೊಂದು ವಾಕ್ಯ ಹೀಗಿದೆ. ’ವಿಪ್ರಾಣಾಮ್ ಭೋಜನೈರ್ಹೋಮೈಃ ಪ್ರೇಕ್ಷಣೀಯೈರಹರ್ನಿಶಮ್’ ...ಎಂದು.(ಶಾಂತನವೀ ಪಾಠ) ಇದನ್ನೇ ಕಂಡಲ್ಲಿ ಯಕ್ಷಗಾನ ಅಮ್ಮನಿಗೆ ಪ್ರೀತಿ ಎನ್ನುವುದು ಸ್ಪಷ್ಟವಾಗುತ್ತದೆ. ಸಪ್ತಶತಿಯ ಏಳುನೂರು ಮಂತ್ರಗಳ ಮೂಲಕ ಹೋಮ ಮಾಡಿದಲ್ಲಿ (ಚಂಡಿಕಾಹೋಮ), ತದಂಗತ್ವೇನ ಅವಳ ಪ್ರೀತಿಗಾಗಿ ಬ್ರಾಹ್ಮಣರಿಗೆ ಉಣಬಡಿಸುವುದರಿಂದ ಹಾಗೂ ಅಹರ್ನಿಶವಾಗಿ (ಅಹ್ನಿ ನಿಶಮ್ ಅಹರ್ನಿಶಮ್. ದಿನದಲ್ಲಿ ರಾತ್ರಿ ಅಂದರೆ ರಾತ್ರಿ ಇಡೀ ಎಂದರ್ಥ) ದೃಷ್ಯಮಾಧ್ಯಮದ ಮೂಲಕ ನೋಡಿದರೆ  ನನಗೆ ಸಂತೋಷವಾಗುತ್ತದೆ ಹಾಗೂ ನನ್ನ ಸಾನ್ನಿಧ್ಯ ಸೃಷ್ಟಿಯಾಗುತ್ತದೆ ಎಂದು. ವಾಕ್ಯಗಳು ನನ್ನದಲ್ಲ, ಪುರಾಣ ಬರೆದ ವ್ಯಾಸರದ್ದಲ್ಲ, ಅಮ್ಮ ಅಂದ ಮಾತು. ಮಾತುಗಳು ದುರ್ಗೆಯ ಸಂಕಲ್ಪದ ನುಡಿ, ರೀತಿ ನಡೆಯಿರಿ ಎಂದು ದೇವತೆಗಳಿಗೆ ನಿರ್ದೇಶಿಸಿದ್ದು.
ವಾಕ್ಯವನ್ನೇ ವಿಮರ್ಶಿಸೋಣ. ರಾತ್ರಿ ಇಡೀ ಪ್ರದರ್ಶ್ಯವಾಗುವ ಕಲೆ, ಅದನ್ನು ಕಣ್ಣುಬಿಟ್ಟು ನೋಡುವ ಕಲೆ ಯಾವುದೆಂದು ನೋಡೋಣ. ಅಂತಹ ಸಾಮರ್ಥ್ಯವಿರುವ ಶ್ರೀಮಂತಕಲೆ ಎನ್ನುವುದದ್ದಿರೆ ‘ಯಕ್ಷಗಾನ’ ಎಂದು ನಾವೆಲ್ಲ ತಲೆ ಎತ್ತಿ ಅನ್ನಬಹುದು. ಅಂತಹ ರಸವತ್ತತೆ ತುಂಬಿ ತುಳುಕುವ ಕಲೆ ನಮ್ಮ ಯಕ್ಷಗಾನ. ಆದ್ದರಿಂದಲೇ ಅದು ಯಕ್ಷಗಾನ ಅಂದರೆ ಅಲೌಕಿಕದ ಶಬ್ದ ಯಾ ಅಲೌಕಿಕ ಕಲೆ. ದೇವತೆಗಳು ದುರ್ಗೆಯ ಪ್ರೀತ್ಯರ್ಥವಾಗಿಯೇ ಕಂಡು ಹುಡುಕಿ ನಮಗಿತ್ತ ಕಲೆಆದ್ದರಿಂದಲೇ ಆಟವಾದದ್ದು. ‘ಆ’ ಅಂದರೆ ಸಮ್ಯಕ್, ‘ಅಟ’ ಅಂದರೆ ಜ್ಞಾನ ಅಂದರೆ ಸರಿಯಾಗಿ ಅವಳನ್ನು ತಿಳಯುವಂತೆ ಮಾಡುವ ಕಲೆ ಎಂದರ್ಥ. ಪದವೂ ಇತರ ಕಲೆಗಳಿಗಿಲ್ಲವಲ್ಲ.
‘ಕಮ್ ಲಾತಿ ಇತಿ ಕಲಾ’ ಎಂದು ತಿಳದವರಂದರು. ಅಕ್ಷರನಾಮದಂತೆ ‘ಕ’ ಅಂದರೆ ದೇವರು. ಅವರನ್ನು ತರುತ್ತದೆ ಆದ್ದರಿಂದ ಅದು ಕಲಾ ಅನ್ನಿಸಲ್ಪಡುತ್ತದೆ. ಆಡು ಭಾಷೆಯಲ್ಲಿ ಕಲೆ ಅನ್ನಿಸಲ್ಪಡುತ್ತದೆ. ಆದ್ದರಿಂದಲ್ಲವೇ ‘ಕಲಶ’ ಅನ್ನುವ ಶಬ್ದ ಹುಟ್ಟಿದ್ದು. ತಂಬಿಗೆಯಲ್ಲಿ ತುಂಬಿಸಲ್ಪಟ್ಟ ದ್ರವ್ಯದಲ್ಲಿ ದೇವರನ್ನು ಬರಮಾಡುವ ವಿಶೇಷ ಮಂತ್ರಗಳನ್ನು ಆವಾಹಿಸುವುದಕ್ಕೆ ‘ಕಲಾವಾಹನೆ’ ಅನ್ನುತ್ತಾರೆ. ಅಂತಹ ಕಲೆಗಳು ತಂಬಿಗೆಯಲ್ಲಿ ಮಲಗುತ್ತವೆ ಎನ್ನುವರ್ಥದಲ್ಲಿ ಕಲಶ ಅನ್ನುತ್ತಾರೆ ಅವುಗಳನ್ನು... ಯಕ್ಷಗಾನ ಅರ್ಥದಲ್ಲಿ ಯೋಚಿಸುವುದಾದರೆ ಪುರಾಣೋಕ್ತ ಕಥಾನಕಗಳ ಪ್ರದರ್ಶನಗಳ ಮೂಲಕ ನಿಜವಾದ ಕಲೆ. ದೇವೀ ಮಹಾತ್ಮೆಯೂ ಆದೀತು ಯಾ ಇನ್ನೊಂದು ಮಹಾತ್ಮೆ. ಎಲ್ಲವೂ ದೇವರ ಪ್ರೀತ್ಯರ್ಥವಾಗಿಯೇ. ‘ಯೋ ದೇವಾನಾಮ್ ನಾಮಧಾ ಏಕ ಏವ’ (ಎಲ್ಲಾ ದೇವರ ನಾಮಗಳನ್ನು ಧರಿಸಿದವನು ಒಬ್ಬನೇ ಅಂದರೆ ಪರಬ್ರಹ್ಮ) ಎನ್ನುವ ವೇದವಾಕ್ಯದಂತೆ. ಹೀಗೆ ಶ್ರೌತ ಎನಿಸಿದ ಯಕ್ಷಗಾನ ಕರಾವಳಿಯ ಜನಮಾನಸದಲ್ಲಿ ಕೃತ್ಯಾಕೃತ್ಯಗಳ ಉಪದೇಶವನ್ನು ಪಂಡಿತರಿಗೂ ಪಾಮರರಿಗೂ ಮಾಡಿ ಧರ್ಮಪ್ರಚಾರ ಮಾಡುತ್ತದೆ. ಆದ್ದರಿಂದಲ್ಲವೇ ಕಟೀಲು ಭ್ರಮರಾಂಬಿಕೆ ಯಕ್ಷಗಾನಪ್ರೀತೆ. ಅವಳಿಗೆ ಸುಪ್ರಭಾತವೂ ಅದರಿಂದಲೇ ಜೋ ಜೋ ಗೀತೆಯೂ ಅದರಿಂದಲೇ.
ಉಡುಪಿಯ ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು ಕಟೀಲಿನಲ್ಲಿ ತನ್ನ ಕಾಲಿಗೆ ಚಿನ್ನದ ಗೆಜ್ಜೆ ಕಟ್ಟಿ ಕುಣಿದು ದೇವಿಗೆ ಅರ್ಪಿಸಿದವರು. ಉಕ್ಕೇರಿದ ನೆರೆಯಲ್ಲಿ ಸಹಾಯಕ್ಕಾಗಿ ಚಾಚಿದ ಉಪಕರಣಗಳನ್ನು ಉಪಯೋಗಿಸದೆ ದೇವಿಯನ್ನು ಅಪ್ಪಿಹಿಡಿದು ದೇವಿಗೆ ತನ್ನನ್ನು ಅರ್ಪಿಸಿಕೊಂಡ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಾಗೂ ಮುಂಬೈನಲ್ಲಿ ಪ್ರಸಿದ್ಧರಾಗಿದ್ದ ಪ್ರತಃಸ್ಮರಣೀಯರಾದ್ದ ದಿ ಗೋಪಾಲಕೃಷ್ಣ ಆಸ್ರಣ್ಣರೂ ಗೆಜ್ಜೆ ಕಟ್ಟಿ ಕುಣಿದು ಸೇವೆಯಿಂದ ಸಾರ್ಥಕ್ಯವನ್ನು ಯಕ್ಷಗಾನದಲ್ಲಿ ಅನುಭವಿಸಿದವರು. ತೆಂಕಾಗಲಿ, ಬಡಗಾಗಲಿ ಯಾವುದೇ ತಿಟ್ಟಿನ ಮೇಳ ಕಟೀಲಿನ ಸಮೀಪ ತನ್ನ ಪ್ರದರ್ಶನ ನೀಡುವಾಗ ತಾಯಿಯ ಮುಂದೆ ಬಂದು ಕುಣಿದೇ ಪ್ರದರ್ಶನ ನೀಡುವುದು ಕ್ಷೇತ್ರದ ಮಾಹಾತ್ಮ್ಯಕ್ಕೆ ಹಿಡಿದ ಕೈಗನ್ನಡಿ ಅನ್ನಬಹುದು.
ಕಟೀಲಿನ ಆಟ ಮಾಡಿಸುವ ಜನರನ್ನು ಹಿಂದೂಗಳೇ ಅನ್ನುವಂತೆಯೂ ಇಲ್ಲ. ಕ್ರೈಸ್ತರು, ಮುಸಲ್ಮಾನರೂ ಯಕ್ಷಗಾನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಅದೇ ರೀತಿ ಒಂದೊಂದು ಊರಿನವರು ಒಟ್ಟಾಗಿ ಊರಿನ ಹತ್ತು ಸಮಸ್ತರು ಎಂದು ಹೇಳಿಕೊಂಡು ಪ್ರತಿವರ್ಷ ಆಟ ಆಡಿಸುವುದನ್ನು ಕಾಣಬಹುದಾಗಿದೆ.ಇಂತಹ ಪ್ರದರ್ಶನಗಳ, ಸಂಘಗಳ ಸಂಖ್ಯೆಯೇ ಮುನ್ನೂರಕ್ಕೆ ಮಿಕ್ಕಿ ಇದೆ. ಅವರಲ್ಲಿ ಹೆಚ್ಚಿನವರು ಸೇವೆಗಿಂತ ಹಿಂದಿನ ನಲುವತ್ತೆಂಟು ಯಾ ಇಪ್ಪತ್ತನಾಲ್ಕು ಯಾ ಕನಿಷ್ಟ ಹನ್ನೆರಡು ದಿನವಾದರೂ ವ್ರತದಿಂದ ಉಳಿದು ಸೇವೆ ಮಾಡಿಸುವುದನ್ನೂ ಕಾಣಬಹುದಾಗಿದೆ.
ಕಟೀಲಿನ ಆಟ ಹೊರಡುವುದೂ ದೀಪಾವಳಿಯ ನಂತರ ದೇವಿಯ ತಾರಾನುಕೂಲದ ದಿನ ಸಂಪ್ರದಾಯಬದ್ಧವಾಗಿ. ಅದೇ ರೀತಿ ಮುಗಿಯುವುದೂ ವೃಷಭಮಾಸದ ಹನ್ನೊಂದನೆಯ ದಿನ. ಹೀಗೆ ಎಲ್ಲವೂ ಕ್ರಮಬದ್ಧವಾಗಿಯೇ. ಸಂದರ್ಭದಲ್ಲಿ ದೇವಿಯ ಪ್ರತೀಕವಾಗಿ ಮೇಳಗಳಲ್ಲಿ ಎರಡು ಕಿರೀಟ ಹಾಗೂ ಒಂದು ಚಕ್ರ ತ್ರಿಕಾಲದಲ್ಲಿ ಪೂಜಿಸಲ್ಪಡುತ್ತದೆ. ಅದಕ್ಕಾಗಿಯೇ ಒಬ್ಬ ಅರ್ಚಕನಿರುತ್ತಾನೆ. ಯಾವುದೇ ಗದ್ದೆಯಲ್ಲಿ ಚೌಕಿ ಇರಲಿ (ವೇಷಧಾರಿಗಳ green room) ಅಲ್ಲಿ ಸಂಜೆ ಹೊತ್ತು ದೇವರು ಬಂದರೂ ಮರುದಿನ ದೇವರು ಅಲ್ಲಿಂದ ಹೊರಡುವ ತನಕ ಚೌಕಿಯೇ ದೇವಾಲಯದಂತೆ. ಇಲ್ಲಿ ಪಾದರಕ್ಷೆಗಳು ನಿಷೇಧಿಸಲ್ಪಡುತ್ತದೆ, ಸೂತಕಾದಿಗಳಿಂದ ಇರುವವರು ಪ್ರವೇಶಿಸುವಂತಿಲ್ಲ. ಹೀಗೆ, ದೇವಾಲಯದ ನಿಯಮಗಳು ಅನುಸರಿಸಲ್ಪಡುತ್ತದೆ.
ಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯಾವಾಗ ಆರಂಭವಾಯಿತೋ ತಿಳಿಯದು. ೧೯೭೫ರವರೆಗೆ ಒಂದೇ ಮೇಳದಲ್ಲಿ ಸೇವೆ ಆಟ ನಡೆಯುತ್ತಿತ್ತು. ಸಂದರ್ಭದಲ್ಲಿ ಸ್ಪರ್ಧೆಯ ಜೋಡಾಟಗಳೂ ನಡೆಯುತ್ತಿದ್ದ ಕಾಲ. ಆದರೆ ಕಟೀಲು ಮೇಳಕ್ಕೆ ಮಾತ್ರ ಅದು ಲೀಲಾಜಾಲ. ಸ್ಪರ್ಧೆಯಲ್ಲಿ ಸೋತ ಇತಿಹಾಸವೇ ಮೇಳಕ್ಕಿಲ್ಲ.ಇದರಿಂದಾಗಿ ಬೇರೆ ಎರಡು ಶ್ರೀಮಂತ ಮೇಳಗಳು ಮಂಕಾಗಿ ತಮ್ಮ ತಿರುಗಾಟವನ್ನೇ ನಿಲ್ಲಸಿದವಂತೆ. ೧೯೮೨ರಲ್ಲಿ ಮೂರನೇ ಮೇಳ ತಿರುಗಾಟ ಆರಂಭಿಸಿತು. ಆಮೇಲೆ ೧೯೯೩ರಲ್ಲಿ ನಾಲ್ಕು, ೨೦೧೦ರಲ್ಲಿ ಐದು, ೨೦೧೩ರಲ್ಲಿ ಆರನೇ ಮೇಳ ಹೀಗೆ ತನ್ನ ಶಾಖೆಗಳನ್ನು ವಿಸ್ತರಿಸಿ ವರ್ಷಕ್ಕೆ ಸರಾಸರಿ ೧೧೦೦ ಸೇವೆಗಳನ್ನು ಮುಗಿಸುತ್ತಿದೆ. ಆದರೆ ಇವುಗಳಲ್ಲಿ ಐನೂರು ಸೇವೆಗಳು ಖಾಯಂ ಆಗಿ ಪ್ರತಿವರ್ಷ ನಡೆಯುವವುಗಳು. ಸುಮಾರು ಇನ್ನೂರ ನಲುವತ್ತು ಆಟಗಳನ್ನು ಸಾಂದರ್ಭಿಕವಾಗಿ ಬೇಕಾದವರು ತತ್ಕಾಲ ವ್ಯವಸ್ಥೆಯಡಿ ಪಡೆದುಕೊಳ್ಳಬಹುದಾದದ್ದು. ಉಳಿದಂತೆ ಸುಮಾರು ಮುನ್ನೂರ ನಲುವತ್ತು ಆಟಗಳನ್ನು ನಿಗದಿಪಡಿಸಿ ನೀಡಿದ ದಿನದಂದು ಮುಂಗಡ ಕಾದಿರಿಸಿದ ಭಕ್ತಾದಿಗಳು ಆಡಿಸುವಂಥದ್ದು. ಹೀಗೆ ಹಂಚುವಿಕೆಯ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಇಂತಹ ಮುಂಗಡ ಕಾದಿರಿಸಿದ ಭಕ್ತರ ಸಂಖ್ಯೆ ದೇವಳದಲ್ಲಿ ಎಂಟು ಸಾವಿರದ ಆರುನೂರು; ಅಂದರೆ ಸುಮಾರು ಇಪ್ಪತ್ತೈದು ವರ್ಷಗಳಿಗೆ ಸಾಕಾಗುವಷ್ಟಿದ್ದು ಕೊನೆಯ ಭಕ್ತ ಅಲ್ಲಿಯವರೆಗೆ ಕಾಯುವುದು ಅನಿವಾರ್ಯವಾಗಿದೆ.
ಸುಮಾರು ಇನ್ನೂರೈವತ್ತು ಕಲಾವಿದರು, ಇನ್ನೂರ ಎಂಭತ್ತು ಸಹಾಯಕರನ್ನೊಳಗೊಂಡ ಕಟೀಲುಮೇಳ, ಪ್ರಸ್ತುತ ಉಭಯತಿಟ್ಟುಗಳಲ್ಲೇ ಅತೀ ಹೆಚ್ಚು ಮೇಳಗಳನ್ನು ಭಕ್ತರಿಗೋಸುಗ ತನ್ನದಾಗಿಸಿಕೊಂಡಿದೆ. ಕಲೆಯು ಇದರಿಂದ ಭಕ್ತರಿಗೆ ಸೇವೆಯಿಂದ ಕೃತಾರ್ಥತಾ ಭಾವವನ್ನು, ಸಹೃದಯರಿಗೆ ರಸದೌತಣವನ್ನು, ಕಲಾವಿದರಿಗೆ ಹಾಗೂ ಸಹಾಯಕರಿಗೆ ಉದ್ಯೋಗವನ್ನು, ವಿದ್ಯುತ್ ಗುತ್ತಿಗೆದಾರರಿಗೆ, ಊರಿನ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರವನ್ನೂ, ಇನ್ನೂ ಅನೇಕರಿಗೆ ಅವರವರ ಮನೋಭೀಷ್ಟಗಳನ್ನು ನೀಡುತ್ತಾ ಧರ್ಮಪ್ರಚಾರದೊಂದಿಗೆ ಕಲಾಪ್ರಚಾರವನ್ನೂ ತನ್ನದಾಗಿಸಿಕೊಂಡಿದೆ.


-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
           Vidwan Sriharinarayanadasa Asranna, Kateelu

No comments:

Post a Comment