Monday 24 August 2015

ಸೃಷ್ಟಿಪ ಕಾರ್ಯವು ಅಷ್ಟೊಂದು ಘನವಲ್ಲ

ಬ್ರಹ್ಮ..... ಪ್ರಪಂಚ ಅನ್ನುವುದು ಅಚೇತನಾತ್ಮಕವಾದುದು. ಪೃಥಿವೀ, ಅಪ್, ತೇಜಸ್ಸು, ವಾಯು, ಆಕಾಶಗಳೆಂಬುದು ಸೇರಿ ಪ್ರಪಂಚ ಎನ್ನಿಸಲ್ಪಡುತ್ತದೆ. ಆಕಾಶ, ಜಲಗಳನ್ನು ನಾವೇ ಕಾಣುತ್ತಿದ್ದೇವೆ.
"ಆಕಾಶಾದ್ವಾಯುಃ, ವಾಯೊರಗ್ನಿಃ, ಅಗ್ನೇರಾಪಃ, ಅದ್ಭ್ಯಃ ಪೃಥಿವೀ"
ಎನ್ನುವ ನಿತ್ಯವಾದ ವೇದವಾಕ್ಯದಂತೆ ವಾಯು ಹಾಗೂ ತೇಜಸ್ಸು ಇದ್ದಿರಲೇಬೇಕು. ಹುಡುಕಬೇಕಷ್ಟೇ. ಪೃಥಿವೀ ತತ್ವವು ಇದೆಯೋ ಇಲ್ಲವೋ ಎನ್ನುವುದು ಪ್ರತ್ಯಕ್ಷಕ್ಕೂ ಅನುಮಾನಕ್ಕೂ ಸಿಗದು. ಇಲ್ಲವೆಂದೇ ಭಾವಿಸಿದಲ್ಲಿ ಸೃಷ್ಟಿಯೇ ಸಾಧ್ಯವಾಗದು. ಇದೆ ಎಂದರೆ ಮುಂದೆ ದೊರಕೀತು.
ಮೊದಲಾಗಿ ಸೃಷ್ಟಿ ಎಂದರೆ ಏನು ಎನ್ನುವುದನ್ನು ತಿಳಿಯಲೇಬೇಕು. ತಿಳಿದುಕೊಳ್ಳೋಣ. ಆಮೇಲಲ್ಲವೇ ಅದರಲ್ಲಿ ಕಾರ್ಯಪ್ರವೃತ್ತನಾಗಲು ನಿನಗೆ ಸಾಧ್ಯ. ’ಸೃಜ ವಿಸರ್ಗೇಎನ್ನುವುದು ಅದರ ಮೂಲಾರ್ಥ. ಅಂದರೆ ಇದ್ದದ್ದನ್ನು ಹೊರಗೆಡಹುವುದು ಅಂದರೆ ನಿನ್ನಿಂದ ಉಂಟು ಮಾಡುವುದು ಎಂದರ್ಥವಲ್ಲವಲ್ಲ. ಸ್ತ್ರೀ ಪುರುಷರ ಸಮ್ಮಿಲನದಿಂದ ಅಂದರೆ ಶುಕ್ಲಶೋಣಿತದ ಸಂಯೋಗದಿಂದ ಉಂಟಾಗುವ ಧಾತು ಏನಿದೆಯೋ ಅದೇ ಪಾತ್ರವಾಗಿರುವ ಸಂದರ್ಭದಲ್ಲಿ ಯಾವುದೋ ಪೂರ್ವಜನ್ಮದ ಕರ್ಮವಿಶೇಷದಿಂದ ಪ್ರಾಪ್ತವಾಗಲೇಬೇಕಾದ ಜನ್ಮವನ್ನು ಪಡೆಯಬಹುದಾದ ಆತ್ಮವನ್ನು ಇರಿಸುವುದು ಸೃಷ್ಟಿಯ ಕಾರ್ಯ. ಇದಕ್ಕಿಂತ ಹೊರತಾದ ಯಾವ ಕರ್ತವ್ಯವೂ ಬ್ರಹ್ಮನದ್ದಲ್ಲ. ಇದನ್ನು ಘನವಾದ ಕಾರ್ಯ ಅನ್ನೋಣವೇ.
ಜೀವಿಗೆ ತನ್ನ ಜೀವಿತದ ಅವಸ್ಥೆ ಆರು. ಅಸ್ತಿ, ಜಾಯತೇ, ವರ್ಧತೇ, ಪರಿಣಮತೇ, ಪರಿಕ್ಷೀಯತೇ, ಪ್ರಣಶ್ಯತಿ ಎಂದು. ನಿತ್ಯವಾದ ಆತ್ಮದ ಇರುವಿಕೆಯನ್ನು ಅಸ್ತಿ ಅಂದರೆ ಇದೆ ಅನ್ನುತ್ತಾರೆ. ಇದರಲ್ಲಿ ಯಾರ ಅತ್ರವೂ ಇರಲಾರದು. ಮೊದಲೇ ಹೇಳಿದಂತೆ ಶುಕ್ಲಶೋಣಿತದ ಸಂಯೋಗದಲ್ಲಿ ನಿರ್ಮಿತವಾದ ಪಾತ್ರೆಯಲ್ಲಿ ಇದ್ದ ಜೀವಿಯ ಸೇರುವಿಕೆಯು ಜಾಯತೇ ಎನ್ನುವ ಅವಸ್ಥೆಯನ್ನು ಪಡೆದುಕೊಳ್ಳುತ್ತದೆ. ಇದನ್ನೇ ಸೃಷ್ಟಿ ಅನ್ನಬಹುದು. ಜೀವಿಯು ಗರ್ಭದಲ್ಲಿ ಬೆಳೆಯುತ್ತ ಹಾಗೂ ಗರ್ಭಾ ನಂತರದಲ್ಲಿ ಅಚೇತನಾತ್ಮಕ ವಸ್ತುಗಳ ಸೇರ್ಪಡೆಯಾಗಿ ಅದರ ದೇಹವು ಬೆಳೆಯುವುದನ್ನು ವರ್ಧತೇ ಅನ್ನುತ್ತಾರೆ. ಬೆಳವಣಿಗೆಯು ಸ್ತಬ್ಧವಾಗುವುದನ್ನು ಪರಿಣಮತೇ ಎನ್ನಬೇಕು. ನಂತರ ಅಚೇತನಾತ್ಮಕ ವಸ್ತುಗಳ ಅದರ್ಶನ ಯಾ ಲೋಪವಾಗುತ್ತಾ ಬರುವುದನ್ನು ಪರಿಕ್ಷೀಯತೇ ಅನ್ನುವುದು. ಜೀವಿಯ ಜನ್ಮದ ಆಯುಷ್ಯ ಮುಗಿಯಿತು ಎಂದಾದಾಗ ದೇಹವನ್ನು ಬಿಟ್ಟು ಹೊರಟ ಜೀವಿಯು ಪುನಃ ಅಸ್ತಿ ಎನ್ನುವುದನ್ನು ಪಡೆಯುವ ಕ್ಷಣಕ್ಕೆ ಪ್ರಣಶ್ಯತಿ ಎನ್ನುವುದು ಅರ್ಥ. ಅಸ್ತಿ ಎನ್ನುವುದು ಸಾರ್ವಕಾಲಿಕ. ಜಾಯತೇ ಅನ್ನುವಲ್ಲಿ ಶುಕ್ಲಶೋಣಿತ ಸಂಯೋಗವು ಅಚೇತನಾತ್ಮಕ ವಸ್ತುಗಳ ಕೂಡುವಿಕೆಯಿಂದ ಸಿದ್ಧವಾದದ್ದು. ಅದು ಸ್ಥಿತಿಯ ಕೆಲಸ. ಮುಂದೆಯೂ ಅದನ್ನೇ ವರ್ಧತೇ ಎನ್ನುವ ಅವಸ್ಥೆಗೂ ಮುಂದುವರಿಸುವುದೂ ನಾನು ಇದನ್ನೇ. ನನ್ನ ಸ್ಥಿತಿಯ ಕೆಲಸದ ಪಾತ್ರೆಯಲ್ಲಿ ಕರ್ಮಾನುಬಂಧವಾಗಿ ಜೀವಿಯನ್ನು ಸೇರಿಸುವ ಸಣ್ಣ ಕಾಯಕ ನಿನ್ನದು. ಇದರ ನಂತರ ವರ್ಧತೇ, ಪರಿಣಮತೇ, ಪರಿಕ್ಷೀಯತೇ ಎನ್ನುವ ಮೂರು ಅವಸ್ಥೆಗಳನ್ನು ಸ್ಥಿತಿಯ ಹೊಣೆಹೊತ್ತ ನಾನು ನಿರ್ವಹಿಸಬೇಕು. ಕೊನೆಯ ಅವಸ್ಥೆಯಲ್ಲಿ ಸೃಷ್ಟಿಯಲ್ಲು ಅಚೇತನಾತ್ಮಕ ವಸ್ತುವಿನೊಡನೆ ಸಂಯೋಜನೆಯನ್ನು ಹೊಂದಿದ್ದ ಚೇತನಾತ್ಮಕ ವಸ್ತುವನ್ನು ವಿಯೋಜಿಸುವ ಕೆಲಸವನ್ನು ಲಯಕರ್ತೃವಾದ ಶಿವ ಎಸಗುತ್ತಾನೆ. ಸೃಷ್ಟಿ ಹಾಗೂ ಲಯ ಎನ್ನುವುದರಲ್ಲಿ ಕ್ಷಣಕಾಲದ ಕೆಲಸವಿರುವುದರಿಂದ ಮಹತ್ವವನ್ನು ಹೇಗೆ ಕಾಣಲಾದೀತು ಹೇಳು. ಕೆಲಸಗಳೂ ಕರ್ಮಾನುಬಂಧಿಯಾಗಿರುವುದರಿಂದ ನಿಮಗೆ ಅದರಲ್ಲಿ ಸ್ವಾತಂತ್ರ್ಯವೂ ಇಲ್ಲ.
ನೀನು ಪ್ರಶ್ನಿಸಬಹುದು. ಸ್ಥಿತಿಯೂ ಕರ್ಮಾನುಬಂಧಿಯಲ್ಲವೇ ಎಂದು. ಜೀವಿಗೆದತ್ತ ಸ್ವಾತಂತ್ರ್ಯಎಂಬ ಮನೋಧರ್ಮ ಪ್ರತಿಯೊಂದು ಜನ್ಮದಲ್ಲೂ ಇರುತ್ತದೆ. ಅದರಂತೆ ಜನ್ಮದಲ್ಲಿ ಸುಕೃತವನ್ನೋ ದುಷ್ಕೃತವನ್ನೋ ಮಾಡಬಲ್ಲವನಾಗುತ್ತಾನೆ. ಅದರಿಂದ ನಂತರದ ಜನ್ಮದ ಅವನ ಯೋನಿ ನಿರ್ಧಾರವಾಗುತ್ತದೆ ಎನ್ನುವುದು ನಿರ್ವಿವಾದ. ಅಂತಹ ಅವನ ದತ್ತ ಸ್ವಾತಂತ್ರ್ಯಕ್ಕೆ ಅಗತ್ಯವೆನಿಸಬಹುದಾದ ಉಚಿತ ಸಂದರ್ಭವನ್ನೂ ಒದಗಿಸಿಕೊಡುವ ಹೊಣೆಗಾರಿಕೆಯೂ ಸ್ಥಿತಿಯ ಕಾರ್ಯವಾದ ಕಾರಣ ನಾನು ಕರ್ಮಾಧ್ಯಕ್ಷ ಎನಿಸಿಕೊಂಡಿದ್ದೇನೆ.
ಆದ್ದರಿಂದಲೇ... ಅಮ್ಮ ಹೇಳಿದ್ದು. ’ಹೋದ ಕಲ್ಪದಿ ಲಯವಾದ ಪ್ರಪಂಚವ ಮೋದದಿ ಸೃಜಿಸುವರೇಎಂದು. ಪ್ರಪಂಚ ಸಾರ್ವಕಾಲಿಕ. ಅದು ಮೋದವಾಗಿರಬೇಕಾದರೆ ಅದರಲ್ಲಿ ಎಂಭತ್ತನಾಲ್ಕು ಲಕ್ಷ ಜೀವರಾಶಿಗಳಿರಬೇಕು. ಜೊತೆಯಲ್ಲಿ ಇದಕ್ಕೆ ಪೂರಕವಾಗಿ ಸಸ್ಯರಾಶಿಗಳು ಇನ್ನಿತರ ಪರಿಸರ ಬೇಕು ಎಂದು. ಇನ್ನೊಂದು. ಮೋದ ಎನ್ನುವುದು ಸಾತ್ವಿಕವಾದದ್ದು. ಅದು ನನ್ನ ಗುಣ. ಮೋದದಿ ಅಂದರೆ ಮೋದದ ದೆಸೆಯಿಂದ ಎನ್ನುವ ಅರ್ಥ. ನನ್ನ ಸಹಕಾರದಿಂದಲೇ ಸೃಷ್ಟಿಯಾಗಬೇಕು ಎಂದು. ಹಾಗಿರುವಾಗ ಅಹಮಿಕೆ ಯಾಕೆ?
-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
          Vidwan Sriharinarayanadasa Asranna, Kateelu

No comments:

Post a Comment