Sunday 22 November 2015

ಯಕ್ಷಗಾನದಲ್ಲಿ ಮಾಲಿನಿ

ಮಾಲಿನಿ ಪ್ರಕರಣದಲ್ಲೂ ಅವಳು ಸುಂದರಿ ಎನ್ನುವುದು ಪ್ರಸಂಗದ ಪದ್ಯದಿಂದಲೇ ಗೊತ್ತಾಗುತ್ತದೆ. ಸಾಧಕಿಯಾದ ಅವಳು ವಿಜಯಿಯಾಗುವ ಮಗನನ್ನು ಪಡೆಯುತ್ತಾಳೆ. ತಾಯಿಯಿಂದ ಬಳುವಳಿಯಾಗಿ ಬಂದ, ಸುರರ ಮೇಲಿನ ಕೋಪ ವಿದ್ಯುನ್ಮಾಲಿನಿಯನ್ನು ಸ್ವರ್ಗಲೋಕದ ಆಕ್ರಮಣಕ್ಕೆ ತಡೆ ಒಡ್ಡುವ ಬದಲು ಉತ್ತೇಜನಕ್ಕೆ ಕಾರಣವಾಗುತ್ತದೆ. ಆದರೆ ಫಲಿತಾಂಶದಲ್ಲಿ ಗಂಡನ ಸಾವು ದುಃಖವನ್ನು ನೀಡಿ ಕಣ್ಣೀರಿಳಿಸುತ್ತದೆ. ಸಂದರ್ಭದಲ್ಲಿ ಬುದ್ಧಿವಂತೆಯಾದ ಅವಳ ಬುದ್ಧಿವಂತಿಕೆ ಜಾಗೃತ್ ಸ್ವರೂಪಕ್ಕೆ ಬಂದು ಅತ್ತು ಫಲವೇನು ಎಂದು ಯೋಚಿಸ ತೊಡಗುತ್ತಾಳೆ. ಅದಕ್ಕೆ ಉತ್ತರವಾಗಿ ಸಿಗುವುದು ಅವಳ ಮಗ ಮಹಿಷ. ಅವನನ್ನು ಕರೆಯುವ ಅವಳಲ್ಲಿರುವುದು ಭಯ. ಕ್ರೋಧವಲ್ಲ. ಗಂಡನ ಮರಣದ ದುಗುಡವನ್ನು ಸರಿಪಡಿಸಲು ಬುದ್ಧಿಯನ್ನೇ ಉಪಯೋಗಿಸುವ ಚಾಣಾಕ್ಷೆ ಅವಳು. ದೇವತೆಗಳನ್ನು ನಾಶಪಡಿಸುವುದೇ ಅವಳ ಲಕ್ಷ್ಯ. ಬ್ರಹ್ಮನ ವರದಂತೆಯೇ ತ್ರಿಲೋಕವಿಜಯಿಯಾದ ಮಗನೆನ್ನುವಲ್ಲಿ ಸಂಶಯ ಇಲ್ಲದಿದ್ದರೂ, ಅವ ಅವರನ್ನು ಸದೆಬಡಿಯುವ ಅನ್ನುವ ವಿಶ್ವಾಸವಿದ್ದರೂ ವನಜಾಕ್ಷ ಬಿಡನೆಂಬ ಸತ್ಯದ ಅರಿವಿದೆ ಅವಳಿಗೆ. ಇಷ್ಟು ಬುದ್ಧಿ ಓಡಿಸಿ ಮಹಿಷನನ್ನೂ ತಪಸ್ಸಿಗೆ ಕಳುಹಿಸುತ್ತಾಳೆ.
ಆಟ ನೋಡುವವರಿಗೆ ಬ್ರಹ್ಮ ವರ ಕೊಟ್ಟದ್ದೇ ಗೊತ್ತಾಗುವುದಿಲ್ಲ. ರಂಗಸ್ಥಳದಲ್ಲಿ ಭಾಗವತರ ಬಲಬದಿಯಿಂದ ಹೊರತೆರಳಿದ ಮಹಿಷ ಎಡಬಲದಿಂದ ಒಳಬಂದು ಭಾಗವತರ ಪದ್ಯಕ್ಕೆ ಕುಣಿದು ವರಪಡೆದೆನೆನ್ನುತ್ತಾನೆ. ಆದರೆ ವರಕ್ಕೆ ಎಷ್ಟು ವರ್ಷ ತಗುಲಿರಬಹುದು ಹೇಳಿ. ಇದಾದ ಮೇಲೆ ಶಂಖದುರ್ಗರ ಆಗಮನಕ್ಕಾಗಿ ಕಾದು ಬಲಗಳನ್ನು ಒಗ್ಗೂಡಿಸಿ ನಂತರ ಮಹಿಷನ ಸ್ವರ್ಗದ ಆಕ್ರಮಣ ನಡೆಯುತ್ತದೆ. .... ಇಷ್ಟು ವರುಷ ಕಾದವಳು ಮಾಲಿನಿ.... ಈಗ ಹೇಳಿ. ಮಾಲಿನಿಯ ಸಹನಾಶಕ್ತಿ ಎಷ್ಟಿರಬಹುದೆಂದು. ಕ್ರೋಧ ಸಹನಾಶಕ್ತಿಯನ್ನು ಇಲ್ಲವಾಗಿಸುತ್ತದೆ. ಆದ್ದರಿಂದ ಕ್ರೋಧವೇ ಇಲ್ಲಿ ಅಸಂಗತ. ಹೀಗಿರುವಾಗ ಕ್ರೋಧದ ಅಸಹನೆಯ ಸೂಚಕವಾದ ಕೋರೆ ಹಲ್ಲು ಎಲ್ಲಿಂದ ಬರಲು ಸಾಧ್ಯ. ಅವಳ ಬಟ್ಟೆಯ ಬಣ್ಣದ ಬದಲಾಗುವಿಕೆಯೂ ಹೇಗೆ ಸಂಗತ ಎನ್ನಲು ಬರುತ್ತದೆ?
ಇನ್ನೊಂದು ವಿಚಾರ.
ಭಾರತೀಯ ರಂಗಧರ್ಮದಲ್ಲಿ ಲಜ್ಜಾಕರವಾದ ವಿಚಾರವು ನಿಷೇಧಿಸಲ್ಪಟ್ಟಿದೆ. ಇದು ಸರ್ವಸಮ್ಮತ ತತ್ತ್ವ. ಅಂತಹ ಭಾವಗಳೇನಾದರೂ ಬರಬೇಕಾದಲ್ಲಿ ಅದನ್ನು ಸಾಂಕೇತಿಕವಾಗಿಯೇ ತೋರಿಸಬೇಕು. ನೇರವಾಗಿ ಕಾಣಿಸಕೂಡದು. ಧರ್ಮ ನಮ್ಮ ಸಿನಿಮಾಗಳಲ್ಲಿ ಇಲ್ಲದಿರಬಹುದು. ಅದು ಬೇರೆ ವಿಚಾರ. ಪಾಶ್ಚಾತ್ಯ ಸಿನಿಮಾಗಳ ಹಾವಳಿಯಿಂದ ಹಣದ ಗಳಿಕೆಗಾಗಿ ಬದಲಾದದ್ದು ಅದು. ಇತ್ತೀಚೆಗೆ ನಾಟಕಗಳಲ್ಲೂ ಇದೇ ಹಾವಳಿ ಆರಂಭವಾಗಿದೆ. ಆದರೆ ಯಕ್ಷಗಾನ ಇವತ್ತಿಗೂ ಸುಸಂಸ್ಕೃತವಾಗಿಯೇ ಇದೆ. ಇಲ್ಲಿ ಈವರೆಗೆ ಇಂತಹ ಹಾವಳಿ ಇಲ್ಲ. ಕೋಳ್ಯೂರರಂದಂತೆ ವಿಶ್ವಾಮಿತ್ರ ಮೇನಕೆಯ ಪ್ರಸಂಗದಲ್ಲಿ ಸೆರಗು ಜಾರಿದ ಮೇನಕೆಯ ಪ್ರಯೋಗ ನಡೆಯಿತಾದರೂ ಅದು ಅವರಿಂದಲೂ ಮತ್ತೆ ಮುಂದುವರಿಯಲಿಲ್ಲ ಅನ್ನುವಲ್ಲಿಗೆ; ಅದನ್ನು ಸರಿ ಎಂದು ಅವರೂ ಸೇರಿ ಬೇರೆ ಯಾರೂ ಈವರೆಗೂ ಅನ್ನಲಿಲ್ಲ ಅನ್ನುವಲ್ಲಿಗೆ; ಅವರಂದದ್ದನ್ನು ಬಿಟ್ಟರೆ ಈಗಿನ ಮೇನಕೆ ಪಾತ್ರಧಾರಿಗಳೂ ಸಹ ಅದನ್ನು ಮಾಡಲು ಮುಂದುವರಿದಿಲ್ಲ ಅನ್ನುವಲ್ಲಿಗೂ ಒಂದರ್ಥದಲ್ಲಿ ಅದು ಸರಿಯಲ್ಲ ಎಂದು ಸರ್ವವಿದಿತವಾದದ್ದು ಎಂದೇ ಊಹಿಸಬೇಕಾದದ್ದು.
ಸಮರ್ಥನೆಗಾಗಿ ವಾದಗಳು ಬಂದದ್ದಾದರೂ ವಾದದಲ್ಲೂ ಪ್ರಯೋಗವು ಜೋಡಾಟಕ್ಕೆ ಮಾತ್ರ ಸೀಮಿತವಾಗಬೇಕೆಂದೇ ಇರುವುದಾಗಿದೆ. ಇದು ನನ್ನ ವಾದಕ್ಕೆ ಪೂರಕವೇ ಆದದ್ದು.
ಒಂದಂತೂ ನಿಜವೇ. ಮಹಿಷಾಸುರನನ್ನು ಕರೆದ ಮಾಲಿನಿ ಚೌಕಿಗೆ ತೆರಳಿ ಬಿಳಿ ಬಟ್ಟೆ ಉಟ್ಟು ಬರುವುದೂ ಇಷ್ಟೇ ಅಸಂಗತ. ಅದೂ ತ್ಯಾಜ್ಯವೇ. ಆಟದಲ್ಲಿ ಮಹಿಷಾಸುರನ ಆಗಮನಕ್ಕಾಗಿ ಅರ್ಧ ಗಂಟೆಯೇ ವ್ಯಯವಾಗಬಹುದು; ಆದರೆ ಮಹಿಷಾಸುರ ಆಟದ ಅಂಗಳದಿಂದ ಬರುವುದು. ನಿಜವಾಗಿ ಅಷ್ಟು ಹೊತ್ತು ಬೇಡ. ಅದು ಆಟದ ಕ್ರಮ ಅಷ್ಟೇ. ಶೃಂಗಾರಕ್ಕಾಗಿ ನೇಪಥ್ಯಕ್ಕೆ ತೆರಳಿ ಬಟ್ಟೆ ಬದಲಿಸುವ ಕ್ರಮ ಇದೆ. ಹೊತ್ತಿಗೆ ಸೀರೆ ಬದಲಿಸಲು ಬದಲಾವಣೆ ಶೃಂಗಾರಕ್ಕಾಗಿ ಅಲ್ಲ. ದುಃಖದ ಸಂಕೇತವಾಗಿ ಅನ್ನೋಣವೇ ಎಲ್ಲವೂ ಬೇಡವಾದದ್ದೇ ಅನ್ನುವ ಆಂಗಿಕ ಅಭಿನಯವೇ ಸಂದರ್ಭದಲ್ಲಿ ರಂಗವನ್ನು ತುಂಬಿಸುತ್ತದೆ. ದುಃಖ ಯಾವ ಮಹಿಳೆಯಿಂದಲೂ ಹೇಗೆ ಅಪೇಕ್ಷಣೀಯ ಅಲ್ಲವೋ ಹಾಗೆಯೇ ಅದರ ಸಂಕೇತಗಳೂ ಅಷ್ಟೇ ಅನಪೇಕ್ಷತಗಳು. ಸಂಕೇತ ಬೇಕೇ ಬೇಕಾದಲ್ಲಿ ವಾಚಿಕಾಭಿನಯವನ್ನೂ ಸೇರಿಸಿ ಅವಳ ಆಭರಣಗಳನ್ನು ಕಳಚುವ ಆಂಗಿಕವನ್ನು ಪ್ರದರ್ಶಿಸಬಹುದು. ಅಷ್ಟಕ್ಕೂ ಬಿಳಿ ಸೀರೆ ವೈಧವ್ಯದ ಸಂಕೇತ ಎಂದು ಯಾರು ಹೇಳಿದರೋ? ಸರಸ್ವತೀ ದೇವಿಯು ಬಿಳಿವಸ್ತುವನ್ನುಡುವವಳು ಎಂದು ಅವಳ ಧ್ಯಾನಶ್ಲೋಕಗಳು ಹೇಳುತ್ತವೆ. ಏನು ಅವಳು ವಿಧವೆಯೇ? ಇಂತಹ ತಪ್ಪು ಕಲ್ಪನೆಯೇ ಯಕ್ಷಗಾನವನ್ನಾಳುವುದು ವಿಷಾದನೀಯ. ನಿಜ ಜೀವನದಲ್ಲೂ ಪುರಾತನದಲ್ಲಿ ವಿಧವೆಯರುಡುವ ಸೀರೆಗಳು ನೀಲಿ ಅಥವಾ ಹಳದಿ ಬಣ್ಣದ ನಾರುಮಡಿಯದ್ದು. ಅದನ್ನು ಉಡುವ ಕ್ರಮವೂ ಬೇರೆ. ಅದಕ್ಕಿಂತ ಹೆಚ್ಚಾಗಿ ವಿಧವೆಯು ಕೇಶವತಿಯಾಗಿರುವುದಿಲ್ಲ. ಹೀಗಿರುವಾಗ ಮಾಲಿನಿಯು ರಂಗಸ್ಥಳಕ್ಕಿಂತ ಹೊರಹೋಗುವುದೇ ಸರಿಯಾದ ಕ್ರಮವಲ್ಲ. ಬಿಳಿಸೀರೆ ಉಟ್ಟು ಬರುವುದಂತೂ ಖಂಡನೀಯವೇ.
ಜೋಡಾಟವನ್ನು ಬದಿಗಿಡೋಣ. ವಿಮರ್ಶಾದೃಷ್ಟಿಯಿಂದ ನೋಡಿದಲ್ಲಿ ಶಶಿಕಾಂತ ಶೆಟ್ಟರ ಕ್ರಮವಾಗಲೀ, ಬಿಳಿ ಸೀರೆಯನ್ನುಟ್ಟ ಮಾಲಿನೀ ಪಾತ್ರಧಾರಿಗಳ ಕ್ರಮವಾಗಲೀ ರಂಗದಲ್ಲಿ ಕಾಣಕೂಡದೆಂದೇ ನನ್ನ ಅಭಿಪ್ರಾಯ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
          Vidwan Sriharinarayanadasa Asranna, Kateelu

No comments:

Post a Comment