Sunday, 22 November 2015

ಬ್ರಹ್ಮ ಶಬ್ದಕ್ಕೆ brain


ಬ್ರಹ್ಮ ಶಬ್ದಕ್ಕೆ brain ಎಂದು ಅರ್ಥೈಸಿದರು. ಕಿನ್ನಿಕಂಬಳದ ಪದ್ಮನಾಭರಾಯರು. ಅವರಂದದ್ದು ಮನಕಾನಂದವಿತ್ತಿತು. ವಿಮರ್ಶೆಗೆ ವಿಷಯವನ್ನು ಹೊತ್ತು ಹಾಕಿತು. ಬ್ರಹ್ಮಕ್ಕೆ ವೃದ್ಧಿಯ ಆಸೆ ಬಂತು. ನನ್ನ ಕೈಯನ್ನು ಅಕ್ಷರಗಳನ್ನು ಪೋಣಿಸುವಂತೆ ಪ್ರೇರೇಪಿಸಿತು. ಅದಕ್ಕಾಗಿ ಬರಹವೆಂಬ ಪ್ರದರ್ಶನ.
ಬೃಹೀ ವೃದ್ಧೌಎನ್ನುವುದು ಧಾತು. ವೃದ್ಧಿಯನ್ನೇ ಅಸಾಧರಣ ಧರ್ಮವಾಗಿ ಇರುವ ಮಹತ್ತತ್ತ್ವಕ್ಕೆ ಬ್ರಹ್ಮ ಎನ್ನುವುದು. ಅಂತಹ ಬ್ರಹ್ಮತತ್ತ್ವ ವೈದಾಂತಿಕವಾಗಿಯೇ ಉಳಿದುಕೊಂಡುಬಿಟ್ಟಿತು. ಭಾಷಾ ವಿಚಾರದಲ್ಲಿ ಕಲ್ಪಿಸಲ್ಪಡಲೇ ಇಲ್ಲ. ಜ್ಞಾನಕ್ಕಾಗಿ ಅದರ ಮಹತ್ತಿಕೆ ಹೇಳಲ್ಪಟ್ಟಿತು. ಅಲ್ಲೂ ಜ್ಞಾನವನ್ನು ವೈದಾಂತಿಕವಾಗಿಯೇ ಅರ್ಥೈಸಲಾಯಿತು. ಈಗ ಆಲೋಚಿಸಿದರೆ ಭಾಷೆಗೂ ಬ್ರಹ್ಮಕ್ಕೂ ಏನು ಸಂಬಂಧ ಎನ್ನುವುದು ನಿಜಕ್ಕೂ ಆಶ್ಚರ್ಯವನ್ನೇ ಕಲ್ಪಿಸಿತು.
ಒಬ್ಬಾತ ಯಾ ಒಬ್ಬಾಕೆ ಹುಟ್ಟುತ್ತಾನೆ/ಹುಟ್ಟುತ್ತಾಳೆ. ಹುಟ್ಟುವಾಗಲೇ ಉತ್ತಮಾಂಗವೆಂಬ (ತಲೆ) ಪಾತ್ರೆಯೊಳಗೆ ಒಂದು ಯಂತ್ರದ ಉದಯವಾಗುತ್ತದೆ. ಯಾವತ್ತೂ ಅದರೊಳಗಿಂದ ಹೊರಬರಲಾರದು. ಬಂದರೆ ಜೀವ ಉಳಿಯಲಾರದು. ಅದುವೇ ಸರ್ವತಂತ್ರ ಸ್ವತಂತ್ರ. ಜೀವಿಯನ್ನು ಚೇಷ್ಟೆ ಮಾಡಿಸುವಲ್ಲಿ ಅದೇ ಸಾರಥಿ. ಅದು ಹೌದೆಂದರೆ ತಲೆ ಮೇಲೆ ಕೆಳಗೆ ಅಲ್ಲಾಡುತ್ತದೆ. ಅಲ್ಲವೆಂದರೆ ಅತ್ತಿಂದತ್ತ ತಿರುಗುತ್ತದೆ. ಹೊಡಿಯೆಂದರೆ ಕೈ ಪ್ರಹಾರಕ್ಕಾಗಿ ಮುನ್ನಡೆಯುತ್ತದೆ. ಪೆಟ್ಟು ತಿನ್ನು ಅಂದರೆ ನೋವನ್ನು ಸಹಿಸಿಕೊಳ್ಳುತ್ತದೆ. ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅವ ಮೇಧಾವಿ ಅನ್ನಿಸಿಕೊಳ್ಳುತ್ತಾನೆ. ಇಲ್ಲದಿದ್ದಲ್ಲಿ ಜೀವಿ ಹುಚ್ಚನೆಂದು ತುಚ್ಛೀಕಾರವನ್ನು ಹೊಂದುತ್ತಾನೆ. ಎಲ್ಲವೂ ಅದೇ ಎಂಬಲ್ಲಿತೇನ ವಿನಾ ತೃಣಮಪಿ ಚಲತಿಎನ್ನುವ ಅರ್ಥದಲ್ಲಿ ಬ್ರಹ್ಮತತ್ತ್ವದ ಪ್ರತಿಬಿಂಬವಾಗಿ ಕಾಣಲ್ಪಡುತ್ತಾ,  ವೃದ್ಧಿಯ ಸಂಕೇತಕ್ಕೆ ತಾನೇ ಅಧಿಪತಿ ಎಂದು ಹೇಳುವಂತಹ ಬ್ರಹ್ಮನೆನ್ನುವ ಅರ್ಥದ ಪ್ರತಿಬಿಂಬವಾದ ಶರೀರವನ್ನಾಳುವ ಬ್ರಹ್ಮ ಇದು. ಅದೇ ಇಂಗ್ಲೀಷಿನ brain.
ಮತ್ತೊಬ್ಬ ಬ್ರಹ್ಮ ಚತುರ್ಮುಖ ಬ್ರಹ್ಮ. ಅವನೇ ಪ್ರಜಾಪತಿ. ಸಂಸ್ಕೃತದಲ್ಲಿ ಇವ ಪುಲ್ಲಿಂಗ ವಾಚ್ಯ. ಬ್ರಹ್ಮಾ ಎನ್ನುತ್ತಾರೆ ಅವನನ್ನು. ಬ್ರಹ್ಮನಿಗೆ ಮಡದಿಯಾದವಳು ಬ್ರಹ್ಮಾಣೀ. ಅವಳೇ ಬ್ರಹ್ಮನ ಮಗಳೂ ಹೌದು ಅನ್ನಿ. ಆದ್ದರಿಂದ ಬ್ರಾಹ್ಮೀ ಅನ್ನಲ್ಪಡುವವಳೂ ಅವಳೇ. ಇದು ಹೇಗೆಂದು ಒಂದೊಮ್ಮೆ ನಾವು ಆಲೋಚಿಸೋಣ. ನಾವಾಡುವ ನುಡಿ ಸುಂದರವಾಗಿದ್ದರೆ; ಅಥವಾ ನಲ್ನುಡಿಯೊಂದು ನಮ್ಮಿಂದ ಹೊರಬಂದರೆ ನಮಗಾಗುವ ಸಂತೋಷವು ಹೇಳತೀರದು. ಒಂದು ರೀತಿಯ ಆತ್ಮರತಿ. ಅಂತಹ ನುಡಿ ಇನ್ನೊಬ್ಬರಿಂದ ಪ್ರಶಂಸೆಗೆ ಪಾತ್ರವಾದರೆ ನಮ್ಮ ಸಂತೋಷಕ್ಕೆ ಎಣೆಯೇ ಇಲ್ಲ. ಇದೇ ರೀತಿ ಬ್ರಹ್ಮನ ವಾಕ್ ಅವನ ಮನಸ್ಸಿಗೆ ಸಂತೋಷವನ್ನಿತ್ತವಳು. ಒಂದು ರೀತಿಯ ಆತ್ಮರತಿ ಅಲ್ಲಿಯೂ ಕಾಣಿಸಿತು. ಹಾಗಾಗಿ ಅವನಿಂದಲೇ ಹೊರಟವಳು ಅವನ ಅರಗಿಣಿ ಆದಳು. ವಾಕ್ಯಾರ್ಥಗೋಷ್ಟಿಗಳಿಂದಲೇ ಸಂತುಷ್ಟನಾಗುವ ಅಜನು ನಿತ್ಯವೂ ವಾಣಿಯಿಂದ ಸದ್ವಿದ್ಯೆಗಳನ್ನು ಆಲಿಸಿ ಆತ್ಮಾನಂದವನ್ನು ಪಡೆಯುತ್ತಲೇ ಇದ್ದಾನೆ.
ಹೀಗೆ ದಿನೇ ದಿನೇ ವರ್ಧಿಸುವ ಬ್ರಹ್ಮ ಯಾ brain ನಿಂದ ಆಲೋಚಿಸಲ್ಪಟ್ಟದ್ದು ಬ್ರಾಹ್ಮೀ. ಅದಕ್ಕೆ ಬೆಉವ ಮೂರ್ತ ಸ್ವರೂಪ ಭಾರತೀ. ಅದರ ಸಂವಹನವು ಇನ್ನೊಂದು ವ್ಯಕ್ತಿಗೆ ಸಂವಹನವಾಗುವ ಕ್ರಿಯೆಗೆ ಭಾಷಾ ಎಂದೂ ಇದು ಸ್ವರಯುಕ್ತವಾದರೆಗೀಃಎಂದೂ ಮಾತಿನಲ್ಲಿ ಪ್ರಕಟವಾದರೆ ವಾಕ್ ಎಂದೂ, ಸಾಹಿತ್ಯಿಕವಾಗಿದ್ದಲ್ಲಿ ವಾಣೀ ಎಂದೂ  ಸರಸ್ಸಿನಂತೆ ನಿರರ್ಗಳವಾದರೆ ಸರಸ್ವತೀ ಎಂದೂ ಕರೆಯಬಹುದಾಗಿದೆ.
ಆಹಾ ಎಂತಹ ಕಲ್ಪನೆ ಪ್ರಾಚೀನರದ್ದು.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
            Vidwan Sriharinarayanadasa Asranna, Kateelu

No comments:

Post a Comment