Thursday, 4 February 2016

ಯಕ್ಷಗಾನದಲ್ಲಿ ದೇವಿ ಭಾಗ 2


ನಿನ್ನೆಯ ದಿನ ದೇವೀ ಪಾತ್ರದ ಬಗ್ಗೆ ಒಂದಿಷ್ಟು ಅಂದಿದ್ದೆ. ಅದಕ್ಕೆ ಹಲವಾರು ಧನಾತ್ಮಕ ಪ್ರತಿಕ್ರಿಯೆ ಬಂದಿತ್ತು. ಅದರೊಂದಿಗೆ ಕೆಲವು ಪೂರ್ವಪಕ್ಷಗಳೂ ಬಂದಿದ್ದವು. ಇದೂ ಧನಾತ್ಮಕಗಳೆ ಅನ್ನಿ. ಅವುಗಳಲ್ಲಿ ಕೆಲವು ವೇದಿಕೆ ಸದಸ್ಯರಿಂದ ಬಂದದ್ದಿದ್ದರೆ ಕೆಲವು ಬೇರೆ ವೇದಿಕೆಗೆ ಹೋಗಿ ಅಲ್ಲಿಂದ ಪುನಃ ಅನಿಸಿಕೆಗಳು ಬಂದವು. ನನ್ನ ಅಣ್ಣ ಪ್ರಸಾದ ಆಸ್ರಣ್ಣರೂ ಬಗ್ಗೆ ಪೂರ್ವಪಕ್ಷವನ್ನು ಮಂಡಿಸಿ ಹರಸಿದ್ದಾರೆ. ಸಹೃದಯ ಕಲಾವಿದ ಶಶಿಕಾಂತ ಶೆಟ್ಟರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೆಳೆಯರಾದ ನಟೇಶರೂ ಕೂಡ. ಬೊಟ್ಟಿಕೆರೆ ಪೂಂಜರು, ಅಂಡಾಲರು ಸಹಮತವನ್ನೂ ವ್ಯಕ್ತಪಡಿಸಿದ್ದಾರೆ. ಹೀಗೆ ಪರ ವಿರೋಧಗಳಿಗೆ ನನ್ನ ಮತಿಯ ಸಾಮರ್ಥ್ಯಕ್ಕನುಸಾರವಾಗಿ ಉತ್ತರಿಸಲು ಪ್ರಯತ್ನಿಸುತ್ತೇನೆ.
ಯಾವುದೇ ಕಾವ್ಯವು ನವರಸಗಳಿಂದ ಕೂಡಿದಲ್ಲಿ ಅದು ಸಹೃದಯರ ಮನ್ನಣೆಗೆ ಪಾತ್ರವಾಗುತ್ತದೆ. ಯಾಕೆಂದರೆ ಕಾವ್ಯವು ರಸೈ ಕನಿಷ್ಟವಾದುದು. ಅದು ಬರೀ ವೀರರಸದ ಕಾವ್ಯವಲ್ಲ, ರೌದ್ರದ್ದೂ ಅಲ್ಲ. ಹಾಗಿದ್ದಲ್ಲಿ ಅದು ಕಾವ್ಯವಾಗಿ ಅಹ್ಲಾದಕಾರಿ ಆಗಿ ಉಳಿಯುವುದೂ ಇಲ್ಲ. ಹಾಗೆಂದು ನವರಸಗಳೂ ಪ್ರಧಾನವಾದವುಗಳು ಅಲ್ಲ; ಒಂದೊಂದು ಕಾವ್ಯಕ್ಕೂ ಒಂದು ಪ್ರಧಾನ ರಸ ಇರುತ್ತದೆ. ಅದನ್ನು ಅಂಗೀರಸ ಎನಿಸಲ್ಪಡುತ್ತದೆ. ಉಳಿದವುಗಳು ಅಂಗರಸಗಳು. ಅಂಗರಸಗಳು ಆಯಾ ಸಂದರ್ಭಕ್ಕೆ ಯಥೋಚಿತವಾಗಿ ವೇದ್ಯವಾಗುವವುಗಳು. ನಂತರ ಅವುಗಳ ಸ್ಪರ್ಶ ಇರುವುದಿಲ್ಲ. ಅಂಗೀರಸ ಹಾಗಲ್ಲ; ಇಡೀ ಕಾವ್ಯದ ರಸವಾಗಿರುವುದು. ಉದಾಹರಣೆಗೆ ಪಾಂಡವಾಶ್ವಮೇಧ ಪ್ರಸಂಗದಲ್ಲಿ ಪ್ರಧಾನರಸ ವೀರ. ರಸಕ್ಕೆ ಅರ್ಜುನನು ಆಲಂಬನ ವಿಭಾವ. ಅವನಲ್ಲಿ ಯುದ್ಧಾಂತ್ಯದಲ್ಲಿ ಪ್ರಮೀಳೆಯಲ್ಲಿ ಕರುಣೆ ಹುಟ್ಟುತ್ತದೆ. ಸುಧನ್ವಾರ್ಜುನದಲ್ಲಿ "ದೇವ ಕೃಷ್ಣ ನೀನು ಎಮ್ಮ ಭಾವ ಎಂದು......." ಎಂಬಲ್ಲಿ ಕರುಣಾರಸ ಸ್ಫುರಿಸುತ್ತದೆ; ಸುಧನ್ವನ ಕುರಿತಾಗಿ ಪ್ರತಿಜ್ಞೆಯ ಸಂದರ್ಭ ರೌದ್ರವೂ ಇರುತ್ತದೆ. ಆದರೆ ಪ್ರಧಾನರಸ ವೀರವೇ ಆಗಿದ್ದು ಉಳಿದ ರಸಗಳು ವೀರರಸದ ಅಂಗಗಳಾಗಿರುತ್ತವೆ.
ಪ್ರಸಂಗತ್ವೇನ ದೇವೀ ಮಾಹಾತ್ಮ್ಯೆಯನ್ನೇ ತೆಗೆದುಕೊಳ್ಳೋಣ. ಅಲ್ಲಿ ಅಲೌಕಿಕಶಕ್ತಿ  ಕಾಣುವ ಕಾವ್ಯವಾದ್ದರಿಂದ ಅದ್ಭುತರಸವೇ ಪ್ರಧಾನ ಯಾ ಅಂಗೀರಸ. ಮಧುಕೈಟಭರು ಬ್ರಹ್ಮನನ್ನು ತಿನ್ನಲು ಹೋಗುವಲ್ಲಿ ಭಯಾನಕ ರಸ ಇದ್ದರೆ ಮಹಿಷಾಸುರನ ದೇವತೆಗಳೊಂದಿಗಿನ ಯುದ್ಧದ ಸಂದರ್ಭವೂ ಅದೇ. ಚಂಡಮುಂಡರು ದೇವಿಯನ್ನು ನೋಡುವಲ್ಲಿ ಶೃಂಗಾರವಿದ್ದರೆ ದೇವತೆಗಳು ಮೊರೆಹೋಗುವಲ್ಲಿ ಕರುಣ ರಸ ಇದೆ. ಆದರೆ ಇಡೀ ಪ್ರಸಂಗವು ಅದ್ಭುತ ರಸ ಪ್ರಧಾನವಾದದ್ದು. ಆದ್ದರಿಂದಲೇ ಕಥೆಗೆ ದೇವೀ ಮಾಹಾತ್ಮ್ಯ ಎನ್ನುವ ಹೆಸರು ಬಂತು. ಇಲ್ಲದಿದ್ದರೆ ದೇವೀ ಕಥಾ ಎಂದಾಗುತ್ತಿತ್ತು.
ಅದ್ಭುತ ರಸಕ್ಕೆ ಆಶ್ಚರ್ಯವೇ ಸ್ಥಾಯೀಭಾವವಾಗಿದೆ. ರಸದ ಬೋಧೆಗೆ ದೇವಿಯೇ ಕಾರಣವಾದ್ದರಿಂದ ಅವಳನ್ನು ಅದ್ಭುತರಸದ ಆಲಂಬನ ವಿಭಾವ ಅನ್ನುತ್ತೇವೆ. ಅವಳ ಪ್ರತ್ಯಕ್ಷ ಸಂದರ್ಭ ಅವಳ ಕುರಿತು ದೇವಾಧಿದೇವತೆಗಳ ಸ್ತುತಿ ಇತ್ಯಾದಿಗಳು ಉದ್ದೀಪನವಿಭಾವ ಅನ್ನಿಸಲ್ಪಡುತ್ತದೆ. ಸ್ತಂಭ, ಸ್ವೇದ, ರೋಮಾಂಚ, ಗದ್ಗದಸ್ವರ, ಸಂಭ್ರಮ (ಅವಸರ), ನೇತ್ರವಿಕಾಸಾದಿಗಳು ಅನುಭಾವಗಳು; ವಿತರ್ಕ (ವಿವಿಧ ತರ್ಕಗಳು), ಆವೇಗ (ವೇಗಾತಿಶಯ), ಸಂಭ್ರಾಂತಿ (ಭ್ರಮೆ), ಆನಂದ ಇತ್ಯಾದಿಗಳು ವ್ಯಭಿಚಾರೀಭಾವಗಳು ಯಾ ಸಂಚಾರೀಭಾವಗಳು. ಇವುಗಳ ಸಂಯೋಗದಿಂದ ಉಂಟಾಗುವ ವಿಸ್ಮಯವೆನ್ನುವ ಸ್ಥಾಯೀಭಾವವು ಅದ್ಭುತರಸಕ್ಕೆ ಸ್ಥಾನವಾಗುತ್ತದೆ. ಅದ್ಭುತರಸ ಪ್ರಧಾನವಾದ ದೇವಿಯ ನುಡಿಗಳನ್ನೂ ಗದ್ಗದವಾಗಿಯೇ ಈಗಲೂ ಕಾಣುತ್ತೇವೆ. ಆದರೆ ಆಂಗಿಕದಲ್ಲಿ ಮಾತ್ರ ತಪ್ಪಿದ್ದೇವೆ. ಅದು ಅವಳ ಲೀಲೆ ಎಂದು ಒಪ್ಪದವರಾಗಿದ್ದೇವೆ. ಹೇಗೆ ನಾರಾಯಣ ನರಸಿಂಹನಾಗಿ ಯಾವತ್ತೋ ಹಿರಣ್ಯಕಶಿಪುವನ್ನು ಕೊಲ್ಲಬಹುದಾಗಿದ್ದರೂ ಪ್ರಹ್ಲಾದನಂತಹ ಭಾಗವತನ ಹುಟ್ಟಾಗಿ ಅವನ ನೆಪದಿಂದ ಕೊಲ್ಲಲು ಸಂಕಲ್ಪಿಸಿದನೋ ಅದರಂತೆ ದೇವಿಯೂ ಮಹಿಷಾಸುರನನ್ನು ಕೊಲ್ಲುತ್ತೇನೆ ಎಂದು ಮೊದಲೇ ನಿಶ್ಚೈಸಿದಂತಯೇ ಕೊಲ್ಲುತ್ತಾಳೆ. ಇದೇ ವಿತರ್ಕ ಯಾ ವಿವಿಧ ತರ್ಕದಿಂದ ಸಿದ್ಧಿಸಿದ ವಿಚಾರ. ಅಂತಹಆತ್ತರುಕ್ಅಂದರೆ ಅತೀವ ಕೋಪದಿಂದ ಕೂಡಿದ ಮಹಿಷಾಸುರನ ಮುಖವನ್ನು ಕಂಡು ದೇವಿ ಮಂದಹಾಸವುಳ್ಳವಳು ಅಂದರೆ ಅದೇ ವಿಸ್ಮಯವಲ್ಲವೇ. ಯಾಕೆಂದರೆ ಇಡೀ ಜಗತ್ತಿಗೆ ಭಯಕಾರಕ ಮಹಿಷಾಸುರ. ಅಲ್ಲೂ ಇವಳು ಸದಾನಂದೆಯಾಗಿಯೇ ಇದ್ದಳು ಅನ್ನುವುದೇ ಆಶ್ಚರ್ಯಕ್ಕೆ ಕಾರಣ.
ಹಾಗಿದ್ದರೆ ದೇವಿಗೆ ಕೋಪವೇ ಬರಲಿಲ್ಲವೇ? ಇದು ನಿಜವಾದ ಪ್ರಶ್ನೆ. ರಾಮಕೃಷ್ಣ ಪೆಜತ್ತಾಯರು ಹೇಳಿದ್ದು. ಕೋಪ ಬಂದ ಬಗ್ಗೆಯೂ ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖ ಇದೆ ಕೂಡ. ಕೋಪವನ್ನೇ ಸಾತ್ತ್ವಿಕ ಕೋಪ ನಾನಂದದ್ದು. ಹಾಗೆಂದರೇನು ಎನ್ನುವುದೂ ಪ್ರಶ್ನೆಯೇ. ಮೂರು ಗುಣಗಳೆಂದು ಹೇಳಲ್ಪಟ್ಟ ಸತ್ತ್ವ, ರಜಸ್ಸು, ತಮಸ್ಸು ಪ್ರತ್ಯೇಕವಾಗಿದ್ದರೂ ಅವುಗಳು ಪುನಃ ಒಂದರೊಂದಿಗೆ ಇನ್ನೊಂದು ಸೇರಿಕೊಂಡಿರುವುದೂ ಉಂಟು. ಸತ್ತ್ವದೊಂದಿಗೆ ರಜಸ್ಸು, ಸತ್ತ್ವದೊಂದಿಗೆ ತಮಸ್ಸು, ರಜಸ್ಸಿನೊಂದಿಗೆ ಸತ್ತ್ವ, ತಮಸ್ಸಿನೊಂದಿಗೆ ಸತ್ತ್ವ ..... ಹೀಗೆ. ಅವುಗಳ ಅರ್ಥ ಯಾವುದು ಪ್ರಧಾನವಾಗಿರುತ್ತದೋ ಅದರ ಅಂಗವಾಗಿ ಯಾ ಅಪ್ರಧಾನವಾಗಿ ಇನ್ನೊಂದು ಗುಣ ವೇದ್ಯವಾಗುತ್ತದೆ ಎಂದು. ಕ್ರೋಧ ಯಾ ಕೋಪ ಎನ್ನುವುದು ತಾಮಸ ಗುಣ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಪ್ರಕರಣದಲ್ಲಿ ಅದು ಸತ್ತ್ವವನ್ನು ಮೀರಲಾರದು. ದೇಶದ್ರೋಹಿಯನ್ನು ಗಲ್ಲಿಗೇರಿಸುವ ನ್ಯಾಯಾಧೀಶನ ಆದೇಶದಂತೆ; ಅದನ್ನು ಪಾಲಿಸುವ ಕಟುಕನಂತೆ. ನ್ಯಾಯಾಧೀಶನಲ್ಲಿ ಯಾ ಕಟುಕನಲ್ಲಿ ಪ್ರಧಾನ ಭಾವ ದೇಶಪ್ರೇಮ ಅಂದರೆ ಸಾತ್ತ್ವಿಕ. ಅದರ ಪರಿಪಾಲನೆಗಾಗಿ ಭಯಾನಕ ಕೃತ್ಯ ಅಂದರೆ ಗಲ್ಲಿಗೇರಿಸುವುದು; ಅಂದರೆ ತಮಸ್ಸಿನ ಆಶ್ರಯ. ಇದು ಸುಳ್ಳಲ್ಲವೇ ಅಲ್ಲ; ಸತ್ಯವೇ. ಆದರೆ ಪ್ರಧಾನವಾದದ್ದು ಸಾತ್ತ್ವಿಕ. ಆದ್ದರಿಂದ ಮತಿಸ್ತಿಮಿತ ಇರುತ್ತದೆ. ಸಾತ್ತ್ವಿಕದ ಕಾರ್ಯಲಾಭಕ್ಕೆ ತಾಮಸವೆಂದಷ್ಟೇ ಅದರ ಅರ್ಥವ್ಯಾಪ್ತಿ. ದೇವಿಯ ಕೋಪವೂ ಸತ್ತ್ವಗುಣದ ಅತಿಕ್ರಮಣ ಅಲ್ಲ. ಸತ್ತ್ವದ ಹಿಡಿತದಲ್ಲಿರುವ ತಮಸ್ಸು. ಅಂತಹ ಕೋಪ ದೇಹಕಂಪನಕ್ಕೆ ಕಾರಣವಾಗುವುದಿಲ್ಲ. ದೇಹಕಂಪನದ ಕೋಪ ಎನ್ನುವುದು ತನ್ನನ್ನು ಕೋಪಕ್ಕೆ ಅಧೀನನನ್ನಾಗಿಸುವುದಾಗಿರುತ್ತದೆ ಎಂದು ನನ್ನ ಅಭಿಪ್ರಾಯ.
ಇನ್ನೊಂದು ಪೂರ್ವಪಕ್ಷ ಯಕ್ಷಗಾನವು ಅಬ್ಬರಕ್ಕಾಗಿಯೇ ಇರುವ ಕಲೆ, ಆದ್ದರಿಂದ ರೌದ್ರ ವೀರಗಳೇ ಕಾಣಬೇಕು ಎನ್ನುವುದು. ಆದರೆ ಇದಕ್ಕೆ ರೀತಿ ಅರ್ಥೈಸಬಹುದು ಎಂದು ಕಾಣುತ್ತದೆ. ಎಲ್ಲಾ ರಸಗಳೂ ಅತಿಶಯದಿಂದಲೇ ಇರುವುದೇ ಅಬ್ಬರ ಎಂದು.  ಮಾನಿಷಾದದಂತಹ ಪ್ರಸಂಗ ಕರುಣರಸದ ಅಬ್ಬರಕ್ಕೆ ಉದಾಹರಣೆಯಾಯಿತು. ಸಹೃದಯ ಹೃದಯಮಾನ್ಯವಾಯಿತು. ರಾಮಾಯಣದಂತಹ ಪ್ರಸಂಗ ಶಾಂತರಸದ ಅಬ್ಬರಕ್ಕೆ ಉದಾಹರಣೆಯಾಯಿತು. ಹೀಗೆ ಯೋಚಿಸಿದರೆ ಚಂದ ಎಂದು ನನಗನಿಸುತ್ತದೆ.
ಆದ್ದರಿಂದ ದೇವಿಯ ಕೋಪ ಸಾತ್ತ್ವಿಕವಾಗಿಯೇ ಇರುವುದರಿಂದ ದೇಹಕಂಪನ ಯಾ ದರ್ಶನ ಒಪ್ಪಲಾಗದು. ಅದು ರಸದೋಷಕ್ಕೆ ಹೇತು ಎಂದೇ ನನ್ನ ಅಭಿಪ್ರಾಯ.
(ಇದೂ ವಿಮರ್ಶೆಗಾಗಿ ಇರುವ ಲೇಖನ. ವಿಮರ್ಶಿಸೋಣ. ಎಲ್ಲರೂ ದಯವಿಟ್ಟು ಭಾಗವಹಿಸಿ)

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
     Vidwan Sriharinarayanadasa Asranna, Kateelu

No comments:

Post a Comment