Thursday, 4 February 2016

ಕೊರ್ಗಿ ವೇಙ್ಕಟೇಶ ಉಪಾಧ್ಯಾಯರು

ಯಕ್ಷಗಾನ ಪ್ರಪಂಚದಲ್ಲಿ ಅದರಲ್ಲೂ ತಾಳಮದ್ದಳೆಯ ಲೋಕದಲ್ಲಿ ಕಟೀಲು ಅಂದರೆ ನೆನಪಾಗುವ ವ್ಯಕ್ತಿ ಇದ್ದರೆ ಅದು ವಿದ್ವಾನ್ ಕೊರ್ಗಿ ವೇಙ್ಕಟೇಶ ಉಪಾಧ್ಯಾಯ ದ್ವಿವೇದೀ ಇವರು. ಇವರ ಹೆಸರನ್ನು ನಾನು ಅವರ ಮುಂದೆ ಹೀಗೆಯೇ ಬರೆಯುತ್ತಿದ್ದದ್ದು. ಇಲ್ಲದಿದ್ದರೆ ಹೇಳುತ್ತಿದ್ದರು ತನ್ನ ಗಡಸು ದನಿಯಿಂದ "ಉಡುಪಿಯಲ್ಲಿ ಇದೇನೋ ಕಲಿತದ್ದು; ಏಕಾರಕ್ಕೆ ಹ್ರಸ್ವ ಇಲ್ಲ ಅಲ್ವ; ಅನುನಾಸಿಕಕ್ಕೆ ಪರರೂಪ ಬರುವುದರಿಂದ ಕಾರ ಬರುವುದು ಅಲ್ವ?" ಅಂಥ. ಮುಂದುವರಿಸುವವರು, ಏಕಃ ಶಬ್ದಃ ಸುಪ್ರಯುಕ್ತಃ ಸಮ್ಯಕ್ ಜ್ಞಾತಃ ಸ್ವರ್ಗೇ ಲೋಕೇ ಕಾಮದುಕ್ ಭವತಿ" ಎಂದು.(ಒಂದು ಶಬ್ದವು ಪ್ರಯೋಗಿಸಲ್ಪಟ್ಟರೆ, ಚೆನ್ನಾಗಿ ತಿಳಿಯಲ್ಪಟ್ಟರೆ ಸ್ವರ್ಗಲೋಕದಲ್ಲಿ ಅದು ಕಾಮಧೇನುವಾಗುತ್ತದೆ). ಹಾಗಾಗಿ ತಪ್ಪು ಬರದಂತೆ ಎಚ್ಚರವಹಿಸಬೇಕು ಎಂದು. ಯಾವಾಗಲೂ ಮೊದಲಾಗಿ ಬೈಗುಳಲ್ಲೇ ಆರಂಭವಾಗುವ ಅವರ ಮಾತನ್ನು ಅರಗಿಸಿಕೊಂಡರೆ ಮತ್ತೆ ಸಿಗುವುದು ಅಮೃತದ ಭಾಂಡಗಳೇ; ವಿಷದ ನಂತರ ಅಮೃತ ಬಂದಂತೆ.
ದತ್ತಾತ್ರೇಯರು ಅವರ ಬಳಿಗೆ ಶಿಷ್ಯತ್ತ್ವಕ್ಕಾಗಿ ಬಂದವರಿಗೆ ಮೊದಲು ಬೈಯುತ್ತಿದ್ದರಂತೆ; ಇಲ್ಲಿಗೆ ಯಾಕೆ ಬಂದದ್ದು, ನೀನಿದ್ದಲ್ಲೇ ವಿದ್ವಾಂಸರು ಇರಲಿಲ್ಲವೇನು? ಎಂಬುದಾಗಿ. ಅನಂತರ ಪ್ರಶ್ನೆ ಕೇಳುವಾಗಲೂ ಮೊದಲು ಬೈಗುಳಿನಿಂದಲೇ ಪ್ರಾರಂಭವಾಗಿ ನಿಜವಾದ ವಿವರಣೆ ನೀಡುತ್ತಿದ್ದರಂತೆ. ನನ್ನ ಅಣ್ಣ ಹೇಳಿದ ಪುರಾಣದ ಮಾತು ಯಾವಾಗಲೂ ನನಗೆ ನೆನಪಾಗುವುದು ಗುರುಗಳಾದ ವೇಙ್ಕಟೇಶ ಉಪಾಧ್ಯಾಯರು ನೆನಪಾಗುವಾಗ. ನನ್ನ ಪ್ರೌಢಶಾಲೆಯ ಕನ್ನಡದ ಗುರುಗಳಾಗಿದ್ದವರು; ಅದೇ ಶಾಲೆಯಲ್ಲಿ ನನ್ನ ತಂದೆ ಕನ್ನಡ ಪ್ರಾಧ್ಯಾಪಕರಾಗಿ ಇದ್ದಾಗ ಇವರು ಸಂಸ್ಕೃತ ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದರು. ಅವರ ಪಾಂಡಿತ್ಯವನ್ನು ತಿಳಿದುಕೊಂಡ ಸಂಸ್ಕೃತ ಪಂಡಿತರೂ ಆದ ನನ್ನ ತಂದೆ ನನ್ನನ್ನು ಸಂಸ್ಕೃತ ಬಾಲಪಾಠಕ್ಕಾಗಿ ಅವರ ಮನೆಗೆ ಕಳುಹಿಸುತ್ತಿದ್ದರು. ಮನೆಗೆ ಅವರ ಸೈಕಲಿನಲ್ಲೇ ಹೋಗುವುದು; ಬರುವಾಗ ಮಾತ್ರ ಬಸ್ಸು. ಇದು ನನಗೆ ತಂದೆಯ ಆಜ್ಞೆ. ಹೀಗೆ ಅವರೊಂದಿಗೆ ಹೊರಡುವಾಗಲೇ ಬೈಗಳು ಆರಂಭ. ‘ನೀನೇ ಸೈಕಲ್ ಕಲಿತಿದ್ದರೆ ನಿನಗೆ ಎಷ್ಟು ಸುಲಭ ಆಗುತ್ತಿತ್ತು, ಸೋಮಾರಿಅನ್ನುವುದರಿಂದ ನನ್ನ ಬಾಲಪಾಠ ಆರಂಭ. ಇವರಲ್ಲಿ ಹೇಗಪ್ಪಾ ಪಾಠ ಕಲಿಯುವುದು ಎಂದು ಬೇಸರದಿಂದಲೇ ಅವರ ಮನೆಗೆ ಹೋದೆ. ನನ್ನ ತಂದೆಯ ಭಯದಿಂದಾಗಿ ಬೇರೆ ವಿಧಿ ಇಲ್ಲವಲ್ಲ. ನಂತರ ಗೊತ್ತಾಯಿತು ಅವರ ವಾತ್ಸಲ್ಯ. ಲಕ್ಷ್ಮೀ ಅಮ್ಮನಿಂದ ಹೊಟ್ಟೆ ತುಂಬಾ ತಿಂಡಿಯೊಂದಿಗೆ ಹಾಲು ಕುಡಿದು ಕೂತ ಮೇಲೆ ಪಾಠ ಆರಂಭ. ಸಂಸ್ಕೃತ, ಕನ್ನಡ ಪಾಠದೊಂದಿಗೆ ಜೀವನಪಾಠವನ್ನೂ ಅಕ್ಕರೆಯಿಂದ ಹೇಳಿಕೊಡುತ್ತಿದ್ದರು. ಪಾಠದ ಮಹತ್ವ ಗೊತ್ತಾದದ್ದು ಈಗ. ಅವರ ಶಿಷ್ಯವಾತ್ಸಲ್ಯದಿಂದಾಗಿ ಅವರಲ್ಲಿ ಪ್ರೀತಿ, ಗೌರವ ಬೆಳೆಯಿತು. ಅವರ ಮಗನೇನೋ ಅನ್ನುವಷ್ಟು ಮಮತೆಯನ್ನು ತೋರಿಸಿದ್ದರು ನನ್ನಲ್ಲಿ. ಆಗ ಎಣಿಸಿದ್ದು ನನಗೆ, ಅವರಿಗೆ ಗಂಡು ಮಕ್ಕಳಿಲ್ಲದ್ದರಿಂದ ನನ್ನನ್ನು ಪ್ರೀತಿಸುತ್ತಿದ್ದಾರೆ ಎಂದು. ಅದರಿಂದ ಇಬ್ಬರು ತಂಗಿಯಂದಿರೂ ಸಿಕ್ಕಿದರು ನನಗೆ ಬಿಡಿ. (ನಾನೇ ನನ್ನ ತಂದೆಗೆ ಕೊನೆಯವನಾದ್ದರಿಂದ ಅದರ ಕೊರತೆ ಇದೆ ನನ್ನಲ್ಲಿ) ಆಮೇಲೆ ಗೊತ್ತಾಯಿತು ಅವರಿಗೆ ನನ್ನಲ್ಲಿ ಮಾತ್ರ ಪ್ರೀತಿಯಲ್ಲ; ಎಲ್ಲ ಶಿಷ್ಯರಲ್ಲೂ ಇದೇ ಪ್ರೀತಿ ನಮ್ಮ ಗುರುಗಳದ್ದು ಎಂದು. ಇದರಿಂದ ಅವರಲ್ಲಿ ಗೌರವ ಮತ್ತಷ್ಟು ಹೆಚ್ಚಿತು; ಎಂತಹ ಉದಾರತೆ ನಮ್ಮ ಗುರುಗಳದ್ದು ಎಂದು. ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ತಾರಾನಾಥ ವರ್ಕಾಡಿ, ಸೀತಾರಾಮ್ ಕುಮಾರ್, ವಾಸುದೇವ ರಂಗಾ ಭಟ್ಟ, ವಾದಿರಾಜ ಕಲ್ಲೂರಾಯ ಇವರು ಪ್ರಸಿದ್ಧರಾದ ಶಿಷ್ಯರು. ಹೇಳಿದರೆ ಇನ್ನೂ ಪಟ್ಟಿ ಉದ್ದವೇ ಇದೆ ಅನ್ನಿ.
ನನ್ನಂತೆ ಅವರಿಗೂ ಹಿಂದೆ ಉಡುಪಿಯ ಸಂಸ್ಕೃತ ಮಹಾಪಾಠಶಾಲೆಯೇ ವಿದ್ಯಾಭ್ಯಾಸದ ಕೇಂದ್ರ. ಅವರದ್ದು ತರ್ಕ ವಿಭಾಗದಲ್ಲಿ ವಿದ್ವತ್ ಆದರೆ ನನ್ನದ್ದು ಅಲಂಕಾರ. ಇವರ ಗುರುಗಳಾದ ಕಾಪು ಹಯಗ್ರೀವ ಆಚಾರ್ಯರು, ಹರಿದಾಸ ಉಪಾಧ್ಯಾಯರು, ಪಡುಬಿದ್ರಿ ಲಕ್ಷ್ಮೀನಾರಾಯಣ ಶರ್ಮಾ ಅಂದರೆ ಇವರಿಗೆ ದೇವರಿದ್ದಂತೆ. ಅಷ್ಟು ಭಕ್ತಿ. ಕಲಿತದ್ದೂ ಅವರಂತೆಯೇ ಕೇವಲ ನಾವು ನಮ್ಮ ಶಾಸ್ತ್ರವಿಚಾರ ಮಾತ್ರ ಕಲಿತಂತೆ ಅಲ್ಲ. ಇದರೊಂದಿಗೆ ವ್ಯಾಕರಣ, ಕಾವ್ಯಗಳೂ ಇವರಿಗೆ ಕರತಲಾಮಲಕ. ಒಂದರ್ಥದಲ್ಲಿ ಅವರ ಗುರುಗಳ ಪ್ರತಿಬಿಂಬವೇ ಇವರು. ಇದರೊಂದಿಗೆ ಮೀಮಾಂಸಾ ಶಾಸ್ತ್ರದಲ್ಲಿ ಅದಮ್ಯ ಪ್ರೀತಿ, ಆದ್ದರಿಂದಲೇ ಅದರಲ್ಲಿ ಹಿಡಿತ. ಪೌರೋಹಿತ್ಯ ಕೇವಲ ಉದರಂಭರಣಕ್ಕಲ್ಲ ಬದಲಾಗಿ ಅರ್ಥಾನುಸಂಧಾನಕ್ಕಾಗಿ. ಆಗ ಮಾತ್ರ ಮಾಡಿಸಿದವನಿಗೆ ನಮ್ಮಿಂದ ಸೇವಾಕರ್ತನಿಗೆ ನಾವು ಏನಾದರೂ ಉಪಕಾರ ಮಾಡಿದಂತೆ ಆಗುವುದು. ಇಲ್ಲದಿದ್ದರೆ ಮಂತ್ರ ಹೇಳಿದ್ದಕ್ಕೆ ಅವ ಕೊಟ್ಟದ್ದನ್ನು ಪಡೆದ ವ್ಯಾಪಾರವಾಗುತ್ತದೆ. ಅವ ಹೆಚ್ಚು ಕೊಟ್ಟರೆ ನಾವು ಋಣಿಗಳಾಗುತ್ತೇವೆ ಅನ್ನುವವರು. ಹಾಗಾಗಿ ಬಗ್ಗೆ ಹುಟ್ಟಿದ ಪ್ರಶ್ನೆಗಳಿಗೆ ಉತ್ತರವನ್ನು ಪ್ರಾಮಾಣ್ಯ ಗ್ರಂಥದಿಂದ ಹುಡುಕದೇ ಇದ್ದರೆ ಅವರಿಗೆ ನಿದ್ದೆ ಬರುವುದೇ ಇಲ್ಲ. ಬೇಕಾದರೆ ಇತರರಲ್ಲಿ ಕೇಳಲು ಅವರ ಗೌರವವೂ ಅಡ್ಡಿ ಬರುತ್ತಿರಲಿಲ್ಲ. ಉದಾಹರಣೆಗೆ ವೇದಾಂತದ ಸಮಸ್ಯೆಗಳಿಗೆ ವಯಸ್ಸಿನಲ್ಲಿ ಕಿರಿಯನಾದ ನನ್ನಣ್ಣ ಪ್ರಸಾದ ಆಸ್ರಣ್ಣರಲ್ಲೂ ಕೇಳಿದ್ದಿದೆ; ಅದರಲ್ಲಿ ಯಾವ ನಾಚಿಕೆಯೂ ಇಲ್ಲದವರು ಅವರು. ಅಂತಹ ಸರಳತೆ ಅವರಲ್ಲಿ.
ವೇದಗಳಲ್ಲಿ ಋಗ್ವೇದ, ಯಜುರ್ವೇದಗಳೆರಡೂ ಪಾಠವಾಗಿದೆಯಾದ್ದರಿಂದಲೇ ಇವರು ದ್ವಿವೇದೀ, ವಿದ್ವತ್ ಪದವೀಧರರಾದ್ದರಿಂದ ವಿದ್ವಾನ್ ಎಂದು ಇವರನ್ನು ಹೇಳಲಾಗದು. ಇವೆರಡೂ ಇವರಿಗೆ ಕರತಲಾಮಲಕವಾದ್ದರಿಂದ ಅದು ಅವರ ಹೆಸರಿಗೆ ಅಲಂಕಾರಗಳು. ಬನ್ನಂಜೆ ಗೋವಿಂದ ಆಚಾರ್ಯರೂ ಮೀಮಾಂಸಾ ಶಾಸ್ತ್ರದ ವಿಚಾರವಾಗಿ ಚರ್ಚಿಸಲು ಅವರಲ್ಲಿಗೆ ಬಂದವರು. ಆರ್.ಗಣೇಶರೇ ಅಂದಂತೆ ಅವರ ಅಷ್ಟಾವಧಾನಕ್ಕೆ ಇವರಿಂದ ಶ್ರೇಷ್ಠ ನಿಷೇಧಾಕ್ಷರಿಗಳಿಲ್ಲವಂತೆ. ಇಷ್ಟು ಸಾಕಲ್ಲವೇ ಅವರ ಪ್ರೌಢಿಮೆ ಅಳೆಯಲು.
ಒಂದು ಕಾಲದ ಅವರ ಅಸ್ವಸ್ತತೆ ಅಂದರೆ ಹೃದಯ ಸಂಬಂಧೀ ಕಾಯಿಲೆ ಅವರನ್ನು ಅಧ್ಯಾಪಕ ವೃತ್ತಿಯಿಂದ ಅನಿವಾರ್ಯ ನಿವೃತ್ತಿಗೆ ಕಾರಣವಾಯಿತಾದರೂ ಧೃತಿಕೆಡದ ಅವರು ಮನೆಯಲ್ಲೇ ಅನುಷ್ಠಾನಾದಿಗಳಿಂದ ಮಾನಸಿಕ ಸ್ಥೈರ್ಯ ಕಂಡುಕೊಂಡವರು. ಅನಂತರ ಪೌರೋಹಿತ್ಯವೇ ಅವರ ಜೀವನ, ಉದರಂಭರಣಕ್ಕೆ ದಾರಿ. ತಾಳಮದ್ದಲೆಯೇ ಅವರ ಆರೋಗ್ಯಕ್ಕಾಗಿ ಔಷಧೀ. ಶಾಸ್ತ್ರಗಳ ಅಧ್ಯಯನವೇ ಅವರ ಮನೋರಂಜನೆಗೆ ದಾರಿ. ಪುಸ್ತಕ ಪ್ರಕಟಣೆಯೇ ಅವರ ಸಾಮಾಜಿಕ ಕೆಲಸ, ಅಮರತ್ವಕ್ಕೆ ಸೋಪಾನ... ನಡೆಯಿತು ಹೀಗೆ ಸುಮಾರು ಹತ್ತು ಹನ್ನೆರಡು ವರ್ಷ. ನಾನು ಅವರ ವೈದ್ಯರಲ್ಲಿ ಮಾತನಾಡಿದಂತೆ ಕೆಲವೇ ತಿಂಗಳಲ್ಲಿ ಇಹಲೋಕವನ್ನು ತ್ಯಜಿಸಲೇಬೇಕಿದ್ದ ಅವರು ಅಷ್ಟು ದೀರ್ಘವಲ್ಲದಿದ್ದರೂ ಕೆಲವು ವರ್ಷ ತನ್ನ ದೇಹರಥವನ್ನು ಎಳೆದೇಬಿಟ್ಟರು.
ಅವರ ಶಿಷ್ಯವಾತ್ಸಲ್ಯಕ್ಕೆ ಒಂದು ಉದಾಹರಣೆ ಹೇಳಲೇಬೇಕು. ಅಂದು ವಾಮನ ಚರಿತ್ರೆ ತಾಳಮದ್ದಲೆ. ನನಗೆ ನೆನಪೇ ಇರಲಿಲ್ಲ. ಅಂದು ಮಿತ್ರ ವಾದಿರಾಜ ಕಲ್ಲೂರಾಯರು ನೆನಪಿಸಿದಾಗ ಮೈ ನಡುಗಿತು. ಏನೂ ತೋಚಲಿಲ್ಲ. ಗುರುಗಳಿಗೆ ಕರೆ ಮಾಡಿದೆ. ಹೇಳು ಅಂದರು. ‘ಎಲ್ಲಿದ್ದೀರಿ ಗುರುಗಳೇ?’ ಅಂದೆ. ‘ಕುಂದಾಪುರದಿಂದ ಮನೆಗೆ ಬರುತ್ತಿದ್ದೇನೆಅಂದರು. ‘ಮನೆಗೆ ಬಂದ ಮೇಲೆ ಬರಲೇ?’ ಎಂದು ಕೇಳಿದೆ, ‘ಯಾಕೆ?, ನನಗೆ ಅರ್ಧ ಗಂಟೆ ಮಲಗಬೇಕು, ಏನೂ ಕೂಡುವುದಿಲ್ಲ; ಅಷ್ಟು ಹೊತ್ತಿಗೆ ಬೆಂಗಳೂರಿಗೆ ಹೋಗಲು ಕಾರು ಬರುತ್ತದೆ. ಅಲ್ಲಿಯ ಕಾರ್ಯಕ್ರಮಕ್ಕೆ ಹೋಗಲು (ಪೌರೋಹಿತ್ಯಕ್ಕೆ ಹೋಗಬೇಕು)’ ಅಂದರು. ‘ಆಯಿತು ಗುರುಗಳೇಅನ್ನುವಾಗಲೇಯಾಕೆ ಹೇಳುಅಂದರು. ವಿಷಯ ತಿಳಿಸಿದೆ. ಎಂದಿನಂತೆ ಬೈಗಳೂ ತಿಂದೆ. ನಮಸ್ಕಾರ ಹೇಳಿ ಕರೆ ಸ್ಥಗಿತಗೊಳಿಸಿದೆ. ಅವರ ಮನೆಗೆ ಬಂದ ಮೇಲೆ ಅವರೇ ಪುನಃ ಕರೆ ಮಾಡಿ ಬರಲು ಹೇಳಿದರು. ಹೋದಾಗ ಅವರು ಬರೆದಿಟ್ಟಿದ್ದ ಕೆಲವು ಶ್ಲೋಕಗಳನ್ನು ಕೊಟ್ಟುನನಗೆ ಹೇಳಲು ಸಮಯವಿಲ್ಲ. ನಿನಗೆ ಇದು ಸಾಕುಅಂದರು. ಅಂದು ಜಯಭೇರಿ ಭಾರಿಸಿದ ತಾಳಮದ್ದಲೆಯದು, ಅದೂ ಪ್ರಸಿದ್ಧ ಅರ್ಥಧಾರಿಗಳ ಮುಂದೆ. ಹೀಗೆ ನನಗೆ ಶಾಸ್ತ್ರೀಯ ಅರ್ಥದ ದಾರಿ ಹೇಳಿಕೊಟ್ಟವರೇ ಅವರು.
ಶೇಣಿ, ಸಾಮಗರೇ ಮುಂತಾದವರೊಂದಿಗೆ ಅರ್ಥವಾದಿಯಾದ ಇವರ ಅರ್ಜುನ ಸನ್ಯಾಸಿ, ವಾಮನಚರಿತ್ರೆಯ ಶುಕ್ರನನ್ನು ಶೇಣಿಗಳು ಬಾಯ್ತುಂಬ ಹೊಗಳಿದ್ದಾರೆ. ನನ್ನ ದೊಡ್ಡಪ್ಪನ ಮನೆಯಲ್ಲಿ ರಾಮದಾಸ ಸಾಮಗರ ಜೊತೆ ಕರ್ಮಬಂಧದ ಕೃಷ್ಣ ಪ್ರಬುದ್ಧವೂ ಹೃದ್ಯವೂ ಆಗಿತ್ತು. ಇದನ್ನು ಕೇಳಲೆಂದೇ ಪ್ರಭಾಕರ ಜೋಷಿಯವರು ಪ್ರೇಕ್ಷಕನಾಗಿ ಬಂದಿದ್ದರು. ಪರ್ಕಳದಲ್ಲಿ ಕರ್ಮಬಂಧದ ತಾಳಮದ್ದಲೆಯಲ್ಲಿ ನಡೆದ ಉಮಾಕಾಂತ ಭಟ್ಟರ ಭೀಷ್ಮನಿಗೆ ಇವರು ಹೇಳಿದ ಕೃಷ್ಣನ ಅರ್ಥವನ್ನು ಕೇಳಿದ ಎಂಭತ್ತು ವರ್ಷ ಪ್ರಾಯದ ವೈದಿಕ ವಿದ್ವಾಂಸ ವೇದಿಕೆಯಿಂದ ಇಳಿದೊಡನೆಯೇ ಕಾಲುಮುಟ್ಟಿ ನಮಸ್ಕರಿಸಿದ್ದಾರೆ. ಇವರ ಯೋಗ್ಯತೆಗೆ ಇದಕ್ಕಿಂತ ದೊಡ್ಡ ಮಾನದಂಡ ಬೇಕೇ?
ಒಂದು ವಿಷಯ ಹೇಳುವುದನ್ನು ಮರೆತೆ. ಪೇಜಾವರ ಶ್ರೀಗಳ ವಿಚಾರದಲ್ಲಿ ಇವರ ಗುರುಭಕ್ತಿ. ಪೇಜಾವರ ಮಠ ತನ್ನ ವಿದ್ಯಾಭ್ಯಾಸಕ್ಕೆ ಆಶ್ರಯ ನೀಡಿದ ಮಠ. ಅಲ್ಲಿರುವಾಗ ಹತ್ತಿರದಿಂದ ಶ್ರೀಗಳನ್ನು ಕಂಡ ನಿಷ್ಠುರವಾದಿಯಾದ ಇವರು ಅವರಲ್ಲಿ ಪೂರ್ಣಪ್ರಮಾಣದ ಗುಲಾಮನಾಗಿದ್ದರು. ಅವರ ಗುಣಕ್ಕಾಗಿ ಅವರನ್ನು ಜಗದ್ಗುರುವಿನ ಸ್ಥಾನದಲ್ಲಿ ನನ್ನ ಹೃದಯದಲ್ಲಿ ಇರಿಸಿದ್ದೇನೆ ಅನ್ನುತ್ತಿದ್ದರು.
ಇಂತಹ ಶಿಷ್ಯರಲ್ಲಿ ಇರಿಸಿದ ಅತೀವ ಪ್ರೀತಿಯುಳ್ಳ ಗುರುಗಳನ್ನು ಹೇಗೆ ಮರೆಯೋಣ. ಅವರು ಇಂದಿಗೂ ನನ್ನ ಹಿತಾಕಾಂಕ್ಷಿಗಳಾಗಿ, ಅಲ್ಲ, ನಮ್ಮ ಹಿತಾಕಾಂಕ್ಷಿಗಳಾಗಿ ಇದ್ದಾರೆ;  ಅಶಿರ್ವದಿಸುತ್ತಿದ್ದಾರೆ ಎಂದು ನಂಬಿದವ ನಾನು. ಮನೋಮಯ ವಿಗ್ರಹವಾಗಿರುವ ಅವರ ಪಾದಗಳಿಗೆ ಆನತನಾಗಿ ನಮೋ ಎನ್ನುತ್ತೇನೆ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು

       Vidwan Sriharinarayanadasa Asranna, Kateelu

No comments:

Post a Comment