Thursday 4 February 2016

ಪರಿಮಿತ ಭೂಭಾಗದಲ್ಲಿ ಅಪರಿಮಿತ ಕಲೋತ್ಸಾಹ

ಕರ್ನಾಟಕದಲ್ಲಿ ದಕ್ಷಿಣಕನ್ನಡ ಒಂದು ಜಿಲ್ಲೆ ಮಾತ್ರ. ಇಲ್ಲಿ ತೌಳವರು ಸ್ವಲ್ಪಾಂಶ ಮತ್ತು ಕನ್ನಡಿಗರು ಸ್ವಲ್ಪಾಂಶ ಇದ್ದಾರೆ ಎನ್ನಬಹುದು. ಇದಕ್ಕೆ ತಾಗಿ ಅದೇ ರೀತಿ ಕಾಸರಗೋಡಿನಲ್ಲೂ ಮಲಯಾಳಂ ಮಾತನಾಡುವ ಜನರೊಂದಿಗೆ, ಸರಕಾರದೊಂದಿಗೆ ಸೇರಿದ್ದಾರೆ. ಇದರ ಗಡಿ ಲೆಕ್ಕ ಹಾಕಿದರೆ ಪರಿಮಿತ ಭೂಪ್ರದೇಶವೇ. ಇದರಲ್ಲಿ ಅರಳಿದ ಸುಂದರ ಕಲೆಯೇ ತೆಂಕುತಿಟ್ಟು ಎಂದು ಪ್ರತ್ಯೇಕತೆಯನ್ನು ಹೊಂದಿದ ಯಕ್ಷಗಾನದ ಒಂದು ಪ್ರಾಕಾರ. ಅದೂ ಪರಿಮಿತವೇ ಎಂದು ಯೋಚಿಸೋಣವೇ? ಇಲ್ಲಪ್ಪಾ. ಅದು ಅಸಾಧ್ಯದ ಮಾತು. ಅದರ ಬೇರು ಮಾತ್ರ ಇಲ್ಲಿದೆ. ಶಾಖೆ ಕರ್ನಾಟಕದಲ್ಲಿ ಹಾಗೂ ಇತರ ರಾಜ್ಯಗಳಲ್ಲೂ ಹರಡಿದೆ. ಒಂದರ್ಥದಲ್ಲಿ ಆಲದಮರ ಅನ್ನಬಹುದು.
ಇದೇನೂ ಅತಿಶಯೋಕ್ತಿಯ ಮಾತಲ್ಲ ಬಿಡಿ. ಪರಿಮಿತ ಭೂಪ್ರದೇಶವನ್ನೇ ತೆಗೆದುಕೊಳ್ಳೋಣ. ಆಲದಮರದ ಬೇರುಗಳು ನಿಮಗೆ ಕಾಣಸಿಗುತ್ತವೆ. ಮೇಳಗಳನ್ನು ಆಲದಮರದ ದೊಡ್ಡಬೇರುಗಳೆಂದರೆ ಸಂಘಸಂಸ್ಥೆಗಳನ್ನು ಚಿಕ್ಕಬೇರುಗಳೆನ್ನಬೇಕು. ಅಷ್ಟೂ ಬೇರುಗಳಿವೆಯೇ ಎಂದು ಆಶ್ಚರ್ಯಪಡಬೇಕಾದ್ದೇ. ಆದರೂ ನಿಜವೇ. ನನಗೇ ಇಂದು ಯೋಚನೆಗೆ ಬಂದ ಮೇಳಗಳು ಬರೋಬ್ಬರಿ ಹದಿನೆಂಟು. ಕಟೀಲಿನದ್ದೇಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ’ ಎಂಬ ಆರು ಮೇಳಗಳಿವೆ. ಇದಲ್ಲದೆ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ, ಅಂಬಿಕಾ ಅನ್ನಪೂರ್ಣೇಶ್ವರೀ ಯಕ್ಷಗಾನ ಮಂಡಳಿ, ಬಪ್ಪನಾಡು ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಶ್ರೀ ಭಗವತೀ ದಶಾವತಾರ ಯಕ್ಷಗಾನ ಮಂಡಳಿ, ತಲಕಳ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿ, ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿ, ಚಿರುಂಬಿ ಭಗವತೀ ಯಕ್ಷಗಾನ ಮಂಡಳಿ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಕೊಲ್ಲಂಗಾನ ಯಕ್ಷಗಾನ ಮಂಡಳಿ, ಮಲ್ಲದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹೊಸನಗರ; ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ, ಎಡನೀರು, ಹೀಗೆ. ಇದಲ್ಲದೆ ಮಳೆಗಾಲದಲ್ಲಿ ತಿರುಗುವ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿ, ಪುತ್ತೂರು ಯಕ್ಷಗಾನ ಮಂಡಳಿ ಹೀಗೆ ಕೆಲವು ಮೇಳಗಳು ಗಜಮೇಳಗಳ ರಜೆಯಲ್ಲಿ ಹೊರಡುತ್ತವೆ. ಇನ್ನು ಹಲವಾರು ಚಿಕ್ಕಮೇಳಗಳೆಂದು ಕರೆಸಿಕೊಳ್ಳುವ ದಿನವೊಂದಕ್ಕೆ ಹತ್ತಿಪ್ಪತ್ತೈದು ಮನೆಗಳಿಗೆ ತೆರಳುವ ಮೇಳಗಳು ಆಯಾ ಊರಿನ ದೇವರ ಹೆಸರಲ್ಲಿ ಮಳೆಗಾಲದಲ್ಲಿ ತಲೆ ಎತ್ತುತ್ತವೆ. ಇದಿಷ್ಟು ಗಟ್ಟಿಬೇರು ಅನ್ನಿ. ಇನ್ನು ಸಂಘ ಸಂಸ್ಥೆಗಳು; ಮೇಳಗಳ ಇಪ್ಪತ್ತು ಪಟ್ಟು ಹೆಚ್ಚು ಎಂದು ಹೇಳಲೇಬೇಕು. ಇನ್ನು ತಾಳಮದ್ದಲೆ ಸಂಘ ಸಂಸ್ಥೆಗಳೂ  ಕೆಲವಷ್ಟು ಇವೆ ಅನ್ನಿ.
ಇದು ಪರಿಮಿತ ಭೂಪ್ರದೇಶಕ್ಕಷ್ಟೇ ಹೇಳಿದ್ದು. ಇನ್ನು ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಹೀಗೆ ಬೇರೆ ಕಡೆಗಳಲ್ಲೂ ಇಂತಹ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ದೂರದ ಮುಂಬೈ ಪುಣೆಯಲ್ಲೂ ಇವುಗಳ ಸಂಖ್ಯೆ ಸಾಕಷ್ಟಿದೆ. ಪ್ರದರ್ಶನಗಳೆಂಬ ಶಾಖೆಗಳನ್ನು ತೆಗೆದುಕೊಂಡರೆ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕಾಸರಗೋಡುಗಳಲ್ಲಿ ಮೇಳಗಳದ್ದು ಸಾಮಾನ್ಯ. ಬೆಂಗಳೂರು ಮುಂಬೈಗಳಲ್ಲೂ ಕೆಲವು ಮೇಳಗಳು ಪ್ರದರ್ಶನಗಳನ್ನು ನೀಡುತ್ತವೆ. ಸಂಘ ಸಂಸ್ಥೆಗಳಂತೂ ಕರ್ನಾಟಕ, ಮುಂಬೈ, ಆಂದ್ರ, ಕಲ್ಕತ್ತಾ, ದೆಲ್ಲಿವರೆಗೂ ಹೋಗುತ್ತವೆ. ಹೆಚ್ಚೇಕೆ ಅಮೇರಿಕಾ, ಲಂಡನ್ ಗಳಲ್ಲೂ ಪ್ರದರ್ಶನಗಳನ್ನು ಕೊಟ್ಟಿವೆ. ಗಲ್ಫ್ ರಾಷ್ಟ್ರಗಳಲ್ಲಂತೂ ಸಾಮಾನ್ಯ ಬಿಡಿ.
ಇನ್ನು ಭಾಷೆಯ ಒಡನಾಟ. ಯಕ್ಷಗಾನ ಸಂಸ್ಕೃತವನ್ನು ಯಾವುದಕ್ಕೂ ಸ್ವೀಕರಿಸುತ್ತದೆ. ಯಾಕೆಂದರೆ ಅದು ತಾಯಿಬೇರು. ಅದನ್ನು ಹೊರತುಪಡಿಸಿದರೆ ಆಯಾ ಭಾಷೆಯೇ ಅದಕ್ಕೆ ಮಾಧ್ಯಮ. ಕನ್ನಡದಲ್ಲೇ ಪ್ರಧಾನವಾಗಿ ಪ್ರದರ್ಶನಗೊಳ್ಳುತ್ತಿದ್ದ ಕಲೆ ಸುಮಾರು ನಾಲ್ಕು ದಶಕಗಳಿಂದ ತುಳುವಿನಲ್ಲೂ ನಡೆಯುತ್ತದೆ. ಕಟೀಲು, ಹೊಸನಗರ, ಎಡನೀರು ಮೇಳಗಳು ಇನ್ನೂ ಕನ್ನಡದ ಪರಂಪರೆಯನ್ನು ಮುಂದುವರಿಸುತ್ತಿವೆ. ಪಣಂಬೂರಿನ ಶಾಸಕರಾಗಿದ್ದ ದಿ. ಪಿ.ವಿ. ಐತಾಳರು ಇಂಗ್ಲಿಷ್ ಯಕ್ಷಗಾನದ ಪರಂಪರೆಯನ್ನೂ ಆರಂಭಿಸಿದ ಶಕಪುರುಷ. ವಿದ್ಯಾಕೋಳ್ಯೂರು ಅನ್ನುವ ಮಹಿಳೆಗೆ ತನ್ನ ಕಾರ್ಯಕ್ಷೇತ್ರ ದಿಲ್ಲಿಯಲ್ಲಿ ತಡೆಯಲಾರದ ಯಕ್ಷಗಾನದ ವ್ಯಾಮೋಹವು ಹಿಂದೀ ಯಕ್ಷಗಾನಕ್ಕೂ ನಾಂದಿಯಾಯಿತು. ದೇಶವಿಡೀ ತೆಂಕುತಿಟ್ಟಿನ ಯಕ್ಷಗಾನದ ಯಾತ್ರೆ ಆರಂಭವಾಯಿತು. ಹೀಗೆ ದೇಶದಲ್ಲಿ ಹಿಂದಿ, ಪರದೇಶದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ತೆಂಕುತಿಟ್ಟಿನ ಯಕ್ಷಗಾನ ಸೀಮೋಲ್ಲಂಘನೆಯನ್ನು ಸಾಧಿಸಿದೆ ಅನ್ನಬಹುದು.
ಯಕ್ಷಗಾನಕ್ಕೆ ಹಿಂದಿನ ಬಿರುದು ಗಂಡುಕಲೆ ಎಂದು. ಅಂದರೆ ಗಂಡಸರೇ ಭಾಗವಹಿಸುವ ಕಲೆಯಾಗಿದ್ದರಿಂದ. ಆದರೆ ಈಗ ಹಾಗನ್ನುವಂತಿಲ್ಲ. ಮಹಿಳೆಯರೂ ಸಕ್ರಿಯರಾಗಿದ್ದಾರೆ ಕ್ಷೇತ್ರದಲ್ಲಿ. ಮಕ್ಕಳಂತೂ ಹೇರಳವಾಗಿ ಕಲಿಯುತ್ತಿದ್ದಾರೆ. ಹಾಗಾಗಿ ಸಾರ್ವತ್ರಿಕ ಕಲೆ.
ಈಗ ಹೇಳಿ. ಪರಿಮಿತವಾದ ಭೂಪ್ರದೇಶದ ನಡುವೆ ಹುಟ್ಟಿ ಬೆಳೆದ ತೆಂಕುತಿಟ್ಟು ಯಕ್ಷಗಾನವು ತನ್ನ ಕಲಾಪ್ರಾಬಲ್ಯದಿಂದ ಅಪರಿಮಿತವಾದ ಕಲೋತ್ಸಾಹವನ್ನು ಇಲ್ಲಿನ ಜನರಲ್ಲಿ ಹುಟ್ಟಿಸಿ ಸಾಮಂತವೆನಿಸದೆ ಚಕ್ರವರ್ತಿಯೋ ಎಂದು ಕಾಣುವ ಕಲಾ ಸಾಮ್ರಾಟನಾಗಿ ಕಾಣುತ್ತದೆ. ಇದನ್ನೇ ತಿಳಿದವರು ಅಂದದ್ದೇನೋ "ಸ್ವಯಮೇವ ಮೃಗೇಂದ್ರತಾ" ಎಂಬಂತೆ ಎಂದು ಉಪಮೆಗೆ ಬಳಸಿದ್ದು. ತೆಂಕುತಿಟ್ಟು ಯಕ್ಷಗಾನಕ್ಕೆ ನಮೋ ಎನ್ನೋಣ.


-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
            Vidwan Sriharinarayanadasa Asranna, Kateelu

No comments:

Post a Comment