Saturday, 6 February 2016

ಕಲೆಯೇ ವಿಸ್ಮಯವೆಂಬ ಸ್ಥಾಯೀಭಾವ

ಈ ಕಲೆಯೇ ವಿಸ್ಮಯವೆಂಬ ಸ್ಥಾಯೀಭಾವದ ಅಭಿಪ್ರಾಯವೊಂದಿದೆ. ಯಕ್ಷಗಾನವನ್ನು ರಾಜ್ಯದ ಕಲೆ ಎಂಬುದಾಗಿ ಘೋಷಿಸಬೇಕೆಂದು. ಎಂತಹ ವಿಪರ್ಯಾಸ ನೋಡಿ. ಅಂತಾರಾಷ್ಟ್ರೀಯ ಕಲೆಯಾಗಬೇಕಾದ ನಮ್ಮ ಕರಾವಳಿಯ ಗಂಡುಕಲೆ ರಾಜ್ಯ ಕಲೆಯಾಗುವುದಕ್ಕೇ ಆಗ್ರಹಿಸಬೇಕಾದ ಪ್ರಸಂಗ. ಪ್ರಶ್ನೆ ಎತ್ತುತ್ತಾರೆ ಕೆಲವರು, ಅದು ಒಂದು ಪ್ರಾದೇಶಿಕ ಕಲೆ; ಕರಾವಳಿಗೆ ಸೀಮಿತವಾದದ್ದು; ಆ ಸಣ್ಣ ಪ್ರದೇಶದಲ್ಲೂ ಮೂರು ತಿಟ್ಟಿನದ್ದಾಗಿ ವಿಭಾಗಿಸಲ್ಪಟ್ಟ ಕಲೆ ಅದು. ಹೇಗೆ ರಾಜ್ಯದ ಕಲೆಯಾಗಲು ಸಾಧ್ಯ? ಎಂದು. ಒಳ್ಳೆಯದನ್ನು ಒಪ್ಪಿದಲ್ಲಿ ಅದಕ್ಕೆ ಪ್ರಾದೇಶಿಕ ಗಡಿ ಅನ್ನುವ ಪರದೆ ತನ್ನಿಂದ ತಾನೇ ಬದಿಗೆ ಸರಿಯುತ್ತದೆ; ಗಂಡನಿಗೆ ಮಾಲೆ ಹಾಕಲು ಅಂತರ್ಪಟದ ಹಿಂದೆ ಕಾದು ಕುಳಿತ ಮದುಮಗಳಂತೆ.
ಪ್ರಾದೇಶಿಕ ಸೀಮಿತತೆಯು ಪೂರ್ವಾಗ್ರಹದಿಂದ ಉಳಿದುಕೊಂಡದ್ದು. ಯಕ್ಷಗಾನ ಎಂಬುದು ಸಾಮಾನ್ಯ ಕಲೆ ಅನ್ನಲಾದೀತೇ? ಪೌರಾಣಿಕ ಪ್ರಸಂಗಗಳನ್ನು ಮತ್ತು ಇತ್ತೀಚೆಗೆ ಅನ್ಯ ವಸ್ತುಗಳನ್ನೂ ಕಥೆಯಾಗಿ ಇರಿಸಿ ಪ್ರಸಂಗಗಳನ್ನು ಬರೆಯಲಾಗುತ್ತದೆ. ಪ್ರಸಂಗಕರ್ತನೇ ಇಲ್ಲಿ ಆದಿಕವಿ. ಅಂದರೆ ವಾಲ್ಮೀಕಿಯಂತೆ. ಅವನ ಕಾವ್ಯವೇ ಉಪಜೀವ್ಯ. ಹೇಗೆಂದು ವಿಮರ್ಶಿಸೋಣ. ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದ. ಅದು ಆದಿಕಾವ್ಯ ಅನ್ನಲ್ಪಟ್ಟಿತು. ಅದೇ ರಾಮಾಯಣವೆಂಬ ಕನ್ನಡಿಯಲ್ಲಿ ಮತ್ತೆ ಹಲವರು ತಮ್ಮ ಮನೋಧರ್ಮವೆಂಬ ಮುಖವನ್ನು ಹಿಡಿದು ಇಣುಕಿದರು. ಅವರಿಗನಿಸಿದ ಅನಿಸಿಕೆಗಳನ್ನು ತೂರಿಸಿ ತಮ್ಮ ತಮ್ಮ ರಾಮಾಯಣಗಳನ್ನು ಬರೆದರು. ಕಾಳಿದಾಸನ ರಘುವಂಶಾಂತರ್ಗತ ರಾಮಾಯಣ, ಜೈಮಿನಿಯ ಭಾರತಾಂತರ್ಗತ ರಾಮಾಯಣ, ಭವಭೂತಿಯ ಉತ್ತರ ರಾಮಚರಿತೆ, ಚಂಪೂ ರಾಮಾಯಣ, ಹಿಂದಿಯಲ್ಲಿ ತುಳಸೀ ರಾಮಾಯಣವೇ ಮೊದಲಾದವುಗಳು, ಕನ್ನಡದಲ್ಲಿ ಲಕ್ಷ್ಮೀಶನ ಜೈಮಿನೀಭಾರತದೊಳಗಿನ ರಾಮಾಯಣ, ತೊರವೆ ರಾಮಾಯಣ, ಕುವೆಂಪುವಿನ ರಾಮಾಯಣ ದರ್ಶನ ಹೀಗೆ ಅಸಂಖ್ಯಾತ. ಹಾಗೆಯೇ ಪಾರ್ತಿಸುಬ್ಬನೆಂಬವ ಛಂದೋವೈವಿಧ್ಯಗಳುಳ್ಳ ರಾಮಾಯಣ ಬರೆದ. ಅದು ಪ್ರಸಂಗಗಳೆನಿಸಲ್ಪಟ್ಟವು. ಅದು ದೃಶ್ಯಕಾವ್ಯವಾಗಿ ‘ಆಟ’ವೆಂಬ ಹೆಸರಿನಿಂದ ಯಾ ‘ಯಕ್ಷಗಾನ’ ವೆಂಬ ಹೆಸರಿನಿಂದ ರಂಗಕ್ಕೆ ಬಂತು. ರಂಗದಲ್ಲಿ ವಾಗ್ವಾಪಾರದಿಂದ ಗದ್ಯಕವಿಗಳು, ದೃಶ್ಯದಲ್ಲಿ ನಟನೆಯಿಂದ ಚೇಷ್ಟಾಕವಿಗಳಾಗಿ ಆ ಪ್ರಸಂಗಕಾವ್ಯವೆಂಬ ಕನ್ನಡಿಯ ಧೂಳನ್ನು ಪ್ರತಿಭೆಯಿಂದ ಒರೆಸಿ ಸ್ವಚ್ಛವಾಗಿರಿಸಿ ತಮ್ಮ ಮನೋಧರ್ಮವನ್ನು ಹೊಕ್ಕಿಸಿದರು. ಪ್ರೇಕ್ಷಕರಿಗೆ ಒಂದೊಂದು ಪ್ರದರ್ಶನವೂ ಮತ್ತೊಂದು ರಾಮಾಯಣವಾಯಿತು. ಪಾರ್ತಿಸುಬ್ಬನ ರಾಮಾಯಣ ಪ್ರತಿಯೊಂದು ಪ್ರದರ್ಶನದ ಕಾವ್ಯಕ್ಕೂ ಉಪಜೀವ್ಯವಾಯಿತು. ಹೀಗೆ ಪಾರ್ತಿಸುಬ್ಬನ ರಾಮಾಯಣದ ದೃಶ್ಯಕಾವ್ಯವು ದಿನದಿಂದ ದಿನಕ್ಕೆ ಪ್ರತ್ಯೇಕ ಕಾವ್ಯವಾಗಿ ಸಹೃದಯರ ಹೃದಯಮಿಡಿತದ ಮರ್ಮವನ್ನು ಅರಿತು ಅಲ್ಲೇ ಚಿರಸ್ಥಾಯಿಯಾಗುತ್ತದೆ. ದಿವಾಚರಿಯಾಗಿ ರಾತ್ರಿಯ ಹೊತ್ತು ಮಲಗುವ ಮನುಷ್ಯನ ನಿದ್ದೆಯನ್ನೂ ಇಲ್ಲವಾಗಿಸಿ ನೋಡುವಂತೆ ಮಾಡುತ್ತದೆ. ನೀವೇ ಹೇಳಿ. ರಾತ್ರಿಯ ಹೊತ್ತು ಮನುಷ್ಯರನ್ನು ಸತ್ ಸ್ವರೂಪದಲ್ಲಿದ್ದುಕೊಂಡೇ ಜಾಗರಣೆಯಲ್ಲಿರಿಸುವ ಬೇರೆ ಕಲೆ ಇದೆಯೇ? ಇಲ್ಲವೆಂದಲ್ಲಿ ಜಗತ್ತಿನ ಏಕಮಾತ್ರ ಕಲೆ ನಮ್ಮ ಯಕ್ಷಗಾನವನ್ನು ಪ್ರಾದೇಶಿಕವೆನ್ನುವುದು ಎಷ್ಟರಮಟ್ಟಿಗೆ ಸಮಂಜಸ.
ಭಗವದ್ಗೀತೆಯ ಬಗ್ಗೆ ಒಂದು ಮಾತಿದೆ. "ಸರ್ವೋಪನಿಷದೋ ಗಾವಃ ದೋಗ್ಧಾ ಗೋಪಾಲ ನಂದನಃ, ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಮ್ ಮಹತ್" ಎಂದು. ಎಲ್ಲಾ ಉಪನಿಷತ್ತುಗಳೇ ದನಗಳಾಗಿ ಕೃಷ್ಣನೆಂಬ ಕರೆಯುವವನಿಂದ ಕರುವಿನಂತಿರುವ ಪಾರ್ಥನಿಗಾಗಿ ಕರೆಯಲ್ಪಟ್ಟ ಹಾಲು ಜಿಜ್ಞಾಸುಗಳಿಗೆ ಕುಡಿಯಲು ನೀಡಲ್ಪಟ್ಟ ಗೀತಾಮೃತವೆನ್ನಲ್ಪಟ್ಟಿತು. ಅದು ಲೋಕಮಾನ್ಯವಾಯಿತು. ಹಾಗೆಯೇ ಎಲ್ಲಾ ಕಲೆಗಳ ಸಾರವನ್ನು ಸಹೃದಯರಿಗಾಗಿ ಕರಾವಳಿಗರೆಂಬ ಕರುಗಳಿಗಾಗಿ ಪುಣ್ಯಾತ್ಮರಿಂದ ಕರೆದು ಜಗತ್ತಿಗೇನೇ ಕುಡಿಸಲ್ಪಟ್ಟ ಕಲಾಮೃತವೇ ಈ ಯಕ್ಷಗಾನ.
ಏನಿಲ್ಲ ಇದರಲ್ಲಿ ಹೇಳಿ. ಪುರಾಣಗಳಿಂದ ಸುಂದರ ಕಥಾವಸ್ತುವನ್ನು, ಸ್ಮೃತಿಗಳಿಂದ ಯುಕ್ತಾಯುಕ್ತ ವಿವೇಚನೆಯನ್ನು, ವೇದದಿಂದ ಅದರ ನಿರ್ದಿಷ್ಟವಾದ ಛಂದಸ್ಸನ್ನೂ, ಅದೇ ಛಂದಸ್ಸಿನೊಳಗಿರುವ ಎಲ್ಲಾ ವೃತ್ತಗಳನ್ನೂ ಸಾಹಿತ್ಯ ಶಾಸ್ತ್ರದ ಜೀವಾಳವಾದ ರಸಗಳನ್ನೂ ಹಾಗೂ ಗುಣ, ಅಲಂಕಾರ, ರೀತಿಗಳನ್ನೂ, ಸಂಗೀತ ಶಾಸ್ತ್ರದಿಂದ ರಾಗಗಳನ್ನೂ, ನಾಟ್ಯಶಾಸ್ತ್ರದಿಂದ ಅಭಿನಯ ಹಾಗೂ ನೃತ್ಯವನ್ನೂ, ವೇದಾಂಗವಾದ ವ್ಯಾಕರಣದಿಂದ ಶುದ್ಧವಾದ ಭಾಷೆಯನ್ನೂ ಕೊಡುವ ಕಲೆಯಾಗಿ ಕಾವ್ಯಕ್ಷೀರವನ್ನು ಸಿದ್ಧಪಡಿಸಿ ನೀಡುವ ಕಲೆ ಈ ಯಕ್ಷಗಾನ. ಇನ್ನೂ ಮುಂದೆ ಹೋಗೋಣ.
ಯುಕ್ತಾಯುಕ್ತ ವಿವೇಚನೆಯನ್ನು ತಿಳಿಸುವುದೇ ಪ್ರಭುಸಂಹಿತೆ. ಅದಕ್ಕೊಂದೇ ಕೆಲಸ; ವಿಧಿ ಅಥವಾ ನಿಷೇಧವನ್ನು ತಿಳಿಸುವುದು. ಆದರೆ ಅದು ಸರ್ವದಾ ಶುಷ್ಕ. ಅದನ್ನು ಕಾಂತಾಸಂಹಿತೆಗೆ ಪರಿವರ್ತಿಸಿ ನೀಡುವ ಕ್ರಮ ಹೃದ್ಯ. ಯಕ್ಷಗಾನದಲ್ಲಿ ಇದನ್ನು ಸುಂದರವಾಗಿ ಕಾಣಬಹುದು. ಉದಾಹರಣೆಗೆ ದಮಯಂತೀಪುನಃ ಸ್ವಯಂವರದಲ್ಲಿ ಋತುಪರ್ಣರಾಜ ಬಾಹುಕನನ್ನು ಕಂಡಾಗ ತಾನೇ ತಿಳಿಯದಂತೆ ಎದ್ದುನಿಲ್ಲುವ ಸಂದರ್ಭ; ಮತ್ತೆ ಅದನ್ನು ವಿಮರ್ಶಿಸುವ ಮೂಲಕ ಸಹೃದಯರಿಗೆ ಯುಕ್ತಾಯುಕ್ತ ಉಪದೇಶವನ್ನು ನೀಡುವ ಸಂದರ್ಭ. ಯೇಕೇಚಾಸ್ಮಚ್ಛ್ರೇಯಾಂಸೋ ಬ್ರಾಹ್ಮಣಾಃ ತೇಷಾಂ ತ್ವಯಾಸನೇನ ಪ್ರಶ್ವಸಿತವ್ಯಮ್ ಎನ್ನುವ ಉಪನಿಷದ್ ವಾಕ್ಯದಂತೆ ತಮ್ಮ ಶ್ರೇಯೋಕಾಂಕ್ಷಿಗಳು ತಮ್ಮಿಂದ ಅದಿಮರಾಗಿ ಬಂದಲ್ಲಿ ತನ್ನ ಆಸನವನ್ನು ಬಿಟ್ಟುಕೊಡಬೇಕು ಎಂಬುದನ್ನು ಋತುಪರ್ಣನ ಅಂತರಂಗ ಒಪ್ಪುತ್ತದೆಯಾದ್ದರಿಂದ ಅವ ನಳನೆಂದು ಅವನ ಅಂತರಂಗ ತಿಳಿಯುತ್ತದೆ ಎನ್ನುವುದನ್ನು ತೋರ್ಪಡಿಸುತ್ತಾ ಹೇಳುತ್ತದೆ. ಜನಸಾಮಾನ್ಯನಿಗೂ ಈ ಉಪನಿಷದ್ವಾಕ್ಯದ ಸಾರದ ಅರಿವು ಸುಲಭವಾಗುತ್ತದೆ.
ಸಂಗೀತ ಶಾಸ್ತ್ರವು ಉಪಯೋಗವಾಗುವುದು ಶಾಸ್ತ್ರೀಯ ಗಾಯನಕ್ಕೆ ಯಾ ದಾಸರ ಪದಗಳಿಗೆ. ಇದನ್ನು ಕೀರ್ತನೆ ಯಾ ದೇವರನಾಮ ಎನ್ನುತ್ತಾರೆ. ಹೇಗೆ ಬೇಕಾದರೂ ಸುಶ್ರಾವ್ಯವಾಗಿ ಹೇಳೋಣ. ತಾಳ ಹಾಕಿ ಕಣ್ಣುಮುಚ್ಚಿ ಆರಾಧಿಸೋಣ ಎಂದು ಮಾತ್ರ ನಮಗೆ ಕಾಣುತ್ತದೆ; ಬೇರೆ ಕಲ್ಪನೆ ಬಾರದು. ಆದರೆ ಸಂಗೀತ ಶಾಸ್ತ್ರದಲ್ಲಿ ಆಯಾ ರಾಗಗಳ ಬಗ್ಗೆ ಕಲಿಯಲು ಹೋದರೆ ಆಯಾ ರಾಗಗಳು ಕೆಲವು ರಸಗಳನ್ನು ಅರ್ಥೈಸುವುದಕ್ಕಾಗಿ ಇರುವಂಥದ್ದು ಅನ್ನುತ್ತಾರೆ. ಉದಾಹರಣೆಗೆ ’ಅಠಾಣ’ ಎನ್ನುವ ರಾಗವು ವೀರರಸದ ರಾಗ ಎನ್ನುವ ಪರಿಕಲ್ಪನೆ. ಆದರೆ ವಿದ್ಯಾಭೂಷಣರ "ಕೊಡುವವನು ನೀನು ಕೊಂಬುವನು ನಾನು" ಎನ್ನುವ ಪದ್ಯ ಆ ರಾಗದಲ್ಲಿದ್ದರೂ ದೇವರ ಕುರಿತಾದ ಭಕ್ತಿಯೇ ಸ್ಫುರಿಸುತ್ತದೆ. ಯಕ್ಷಗಾನದಲ್ಲಿ ಹಾಗೇ. ಇಂತಹ ಭಾವಗಳಿಗೆ ಇಂತಹ ರಾಗಗಳು ಚಂದವೆಂಬ ಕಲ್ಪನೆ ಸ್ಪಷ್ಟವಾಗಿ ಇದೆ. ಗಾಂಭೀರ್ಯಕ್ಕೆ ಕೇದಾರಗೌಳ, ಕಾಂಬೋಜಿ; ದುಃಖಕ್ಕೆ ಶಿವರಂಜನಿ, ರೇವತೀ ಹಂಸಾನಂದೀ; ಏಕಾಂತ ದುಃಖಕ್ಕೆ ಶುಭಪಂತುವರಾಳಿ; ಭಕ್ತಿಗೆ ಹಿಂದೋಳ, ಕರ್ಣರಂಜನಿ, ಮೋಹನ; ಶೃಂಗಾರಕ್ಕೆ ಅಭೇರಿ, ಕಲ್ಯಾಣಿ, ಮೋಹನ ಕಲ್ಯಾಣಿ; ವೀರಕ್ಕೆ ಘಂಟಾರವ, ಮಾರವಿ; ಹಾಸ್ಯಕ್ಕೆ ಮಾಂಡ್, ಹೀಗೆ ರಾಗ ಸಂಯೋಜನೆಯ ಕ್ರಮ. ಭಾಗವತರು ರೂಪಿಸಿಕೊಂಡಲ್ಲಿ ಸಹೃದಯರ ಆಸ್ವಾದವು ಆ ಭಾವದಲ್ಲೇ ಇರುತ್ತದೆ. ಮತ್ತೊಂದು ವಿಶೇಷವೆಂದರೆ ಕಾಲಕ್ಕೆ ಸರಿಯಾಗಿ ರಾಗಗಳ ಸಂಯೋಜನೆ; ಅಂದರೆ ಮೋಹನ, ಭೂಪಾಳಿ ರಾಗಗಳನ್ನು ಪ್ರಸಂಗಾಂತ್ಯದಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಉದಯಕಾಲ ಸನ್ನಿಹಿತವಾಗುವಾಗ ಮಂಗಳದ ಹೊತ್ತಿಗೆ ಮಧ್ಯಮಾವತಿ.... ಹೀಗೆ. ಸರಿಯಾದ ಕಲ್ಪನೆಯಲ್ಲಿ ಹಾಡಿದರೆ ಆ ಭಾವ ಸ್ಫುರಿಸಿ ರಸಸ್ಫುರಣೆಗೆ ಸಂಗೀತವೆನ್ನುವುದನ್ನು ತೋರಿಸಿಕೊಡುವುದಕ್ಕೂ ಯಕ್ಷಗಾನ ಆದರ್ಶ ಅನ್ನಬಹುದು.
ಯಕ್ಷಗಾನದಲ್ಲಿ ಇರುವ ಅದ್ಭುತ ಪರಿಕರ ಚೆಂಡೆ: ಅದೂ ತೆಂಕುತಿಟ್ಟಿನಲ್ಲಿ. ವೀರ ರೌದ್ರ ಭಯಾನಕಗಳಿಗಾಗಿಯೇ ಆವಿಷ್ಕರಿಸಲ್ಪಟ್ಟದ್ದೇ ಅನ್ನುವಂತೆ ಇರುವಂಥದ್ದು. ಯಕ್ಷಗಾನಕ್ಕಾಗಿಯೇ ಸಿದ್ಧವಾದ ಮದ್ದಳೆ ಎಂಬ ಇನ್ನೊಂದು ಪರಿಕರ ನಮ್ಮ ವಾದ್ಯಜ್ಞಾನವನ್ನು ಎತ್ತರಕ್ಕೇರಿಸುತ್ತದೆ. ಬಿಳಿ ನಾಲ್ಕು ಯಾ ಕಪ್ಪು ಮೂರಕ್ಕಿಂತ ಕೆಳಗಿಳಿಯದ ಈ ಪರಿಕರ ಚರ್ಮವಾದ್ಯದ ರಂಗದಲ್ಲೂ ನಮ್ಮ ಪರಿಣತಿಯನ್ನು ತೋರಿಸುತ್ತದೆ.
ಇವಿಷ್ಟು ಹಿಮ್ಮೇಳದ ವಿಚಾರ. ಮುಮ್ಮೇಳದಲ್ಲಿ ಎರಡು ವಿಧ. ಯಕ್ಷಗಾನ ಪ್ರದರ್ಶನವಾದರೆ ಆಹಾರ್ಯಾದಿಗಳಿಂದ ದೃಶ್ಯಕಾವ್ಯ ಅನ್ನಿಸಲ್ಪಡುತ್ತದೆ. ಅದಿಲ್ಲದಿದ್ದರೆ ತಾಳಮದ್ದಲೆ ಎಂಬ ಹೆಸರಿನಿಂದ ಶ್ರವ್ಯ ಕಾವ್ಯ ಅನ್ನಲ್ಪಡುತ್ತದೆ. ಯಕ್ಷಗಾನದ ಆಹಾರ್ಯವೇ ಅದ್ಭುತ. ಅಲೌಕಿಕವನ್ನು ಸಾಂಕೇತಿಕವಾಗಿಯೇ ತೋರಿಸಿ ನಮ್ಮನ್ನೂ ಅಲೌಕಿಕಕ್ಕೆ ಎಳೆದೊಯ್ಯುತ್ತದೆ. ಸ್ವಲ್ಪ ಯಕ್ಷಗಾನ ಗೊತ್ತಿದ್ದವನಾದರೆ ಸಾಕು. ಪ್ರಸಂಗದ ಹೆಸರು ತಿಳಿದಲ್ಲಿ ಆಹಾರ್ಯದಿಂದಲೇ ಆಯಾ ಪಾತ್ರವನ್ನು ತಿಳಿಯಬಹುದಾಗಿದೆ. ಉದಾಹರಣೆಗೆ ಕರ್ಣಾರ್ಜುನ ಪ್ರಸಂಗ ತೆಗೆದುಕೊಂಡಲ್ಲಿ ಕಪ್ಪು ಬಾಲ್ಮುಂಡು, ಅಂಗಿ, ದಗಲೆ ಇದ್ದ ಕಿರೀಟ ವೇಷದವ ಕರ್ಣನೆಂದೂ ಅದೇ ಹಸಿರಾಗಿರುವುದಾದರೆ ಅರ್ಜುನನೆಂದೂ ಪಕ್ಕಡಿ ಕಿರೀಟದ ಹಸಿರು ಬಣ್ಣದ ಮುಖವರ್ಣಿಕೆಯಲ್ಲಿ ನೀಲಿ ಕಾಣುವವ (ಪರಂಪರೆ ಹೀಗೆ) ಕೃಷ್ಣನೆಂದೂ ಇನ್ನೊಬ್ಬ ಪಕ್ಕಡಿ ಕಿರೀಟವನ್ನುಳಿದು ಉಳಿದಂತೆ ಕಿರೀಟ ವೇಷದ ಲಕ್ಷಣಗಳನ್ನು ಹೊಂದಿದವನನ್ನು ಶಲ್ಯನೆಂದೂ ತಿಳಿಯುತ್ತಾರೆ. ಹೀಗೆ ವೈವಿಧ್ಯದ ಆಹಾರ್ಯದಿಂದ ರಂಗದಲ್ಲಿ ರಸೋತ್ಕರ್ಷೆಯನ್ನು ಝಟಿತಿ ತಿಳಿಸುವ, ಅದರಿಂದಲೇ ಸಾತ್ತ್ವಿಕವನ್ನು ಬಿಂಬಿಸುವ ಕಲೆ ನಮ್ಮ ಈ ಯಕ್ಷಗಾನ.
ಇನ್ನು ಆಂಗಿಕ. ವಾಚಿಕವೂ ಪ್ರಧಾನವಾಗಿ ಇರುವುದರಿಂದ ಅವಲಂಬಿಸಿ ಯಕ್ಷಗಾನದ ನೃತ್ಯದಲ್ಲಿ ಭರತನಾಟ್ಯದಷ್ಟು ಆಂಗಿಕವಿಲ್ಲದಿರಬಹುದು. ಆದರೆ ವೀರ, ರೌದ್ರ ಭಯಾನಕಗಳು ಆಂಗಿಕದಲ್ಲೇ ಪ್ರಾಧಾನ್ಯವನ್ನು ಕಾಣುತ್ತದೆ. ಉಳಿದಂತೆ ಆಂಗಿಕವನ್ನು ಸಾತ್ತ್ವಿಕಕ್ಕೆ ಬೇಕಾದಷ್ಟು ಇರಿಸಿಕೊಂಡದ್ದು ಯಕ್ಷಗಾನ.
ವಾಚಿಕವೇ ಯಕ್ಷಗಾನವನ್ನು ಪ್ರತಿ ಪ್ರದರ್ಶನದಲ್ಲೂ ಪ್ರತ್ಯೇಕ ಕಾವ್ಯವಾಗಿಸುವುದರಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಪ್ರತಿ ಪಾತ್ರದಾರಿಯೂ ಓರ್ವ ಕವಿಯಾಗುತ್ತಾನೆ; ಯಥಾಸ್ಮೈರೋಚತೇ ವಿಶ್ವಮ್ ತಥೇದಮ್ ಪರಿವರ್ತತೇ ಅನ್ನುವ ವಾಕ್ಯಾರ್ಥದ ಯಾಥಾರ್ಥ್ಯ ಕಾಣುವುದೇ ಈ ಯಕ್ಷಗಾನದಲ್ಲಿ. ಜಗತ್ತಿನ ಇತರ ಕಲೆಗಳಲ್ಲಿ ಆಶುವಾಕ್ಯಕ್ಕೆ ಕಾವ್ಯದಲ್ಲಿ ಅವಕಾಶ ಇಲ್ಲ. ಆದ್ದರಿಂದ ಎಷ್ಟೇ ಪ್ರದರ್ಶನಗಳನ್ನು ಕಂಡರೂ ಅವುಗಳ ವಾಚಿಕದಲ್ಲಿ ಬದಲಾವಣೆಯನ್ನೇ ಕಾಣಲಾಗದು. ಒಂದುವೇಳೆ ಕಂಡರೆ ಅದು ಕವಿಗೆ ಅಪಮಾನವೆಂದು ಬಿಂಬಿಸಲಾಗುತ್ತದೆ. ಆದರೆ ಅದನ್ನು ಯಕ್ಷಗಾನದಲ್ಲಿ ಅದು ಪ್ರಶಸ್ತಿಯಾಗುತ್ತದೆ.
ಕರ್ನಾಟಕ ಸರ್ಕಾರದ ದಿಟ್ಟಹೆಜ್ಜೆ ಎಂದೇ ಬಿಂಬಿಸಲಾದ ಶಿಕ್ಷಣ ಕಾಯಿದೆಯನ್ನು ಜಾರಿಗೊಳಿಸುವ ಉದ್ದೇಶದಿಂದ ವಿಧಾನಸಭೆಯಲ್ಲಿ ಮಂಡಿಸಲಾದ ಮಸೂದೆ; ಅದಕ್ಕಾಗಿ ಒಕ್ಕೊರಲಿನಿಂದ ಶಾಸಕರ ಹಾಗೂ ಸಚಿವರ ಆಗ್ರಹಗಳನ್ನು ಕಾಣುವಾಗ ನನಗಾದ ಅನುಭವ ಬೇರೆಯೇ. ಕನ್ನಡದಲ್ಲೇ ಕಲಿಯಬೇಕೆಂಬ ಹಾಗೂ ಕನ್ನಡದ ಅವಶ್ಯಕತೆಯ ಬಗ್ಗೆ ಅವರ ಭಾಷಣದಲ್ಲಿ ಇಂಗ್ಲೀಷ್ ಪದಗುಚ್ಛಗಳದ್ದೇ ದರ್ಬಾರು. ಬಿಡಿ. ಅವರೇನೋ ರಾಜಕೀಯದವರು. ಕನ್ನಡದ ಸಾಹಿತಿಗಳ ಸಾಹಿತ್ಯದಲ್ಲಿ ಅದೆಷ್ಟು ಇಂಗ್ಲೀಷ್ ಶಬ್ದಗಳನ್ನು ಕಾಣುತ್ತೇವೆ, ಅದೂ ಹಾಸ್ಯ ಕವಿಗಳದ್ದಂತೂ ಕೇಳುವುದೇ ಬೇಡ. ಅದಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ಥಾನಮಾನ ಇದೆ. ಆದರೆ ತಪ್ಪಿಯೂ ಇಂಗ್ಲೀಷ್ ಶಬ್ದಗಳನ್ನು ಬಳಸದೇ ಶುದ್ಧ ಕನ್ನಡವೇ ಜೀವಾಳವಾಗಿರುವ ಯಕ್ಷಗಾನ ಸಾಹಿತ್ಯಕ್ಕೆ ಕರಾವಳಿ ದಾಟಿದರೆ ಸಾಹಿತ್ಯ ಸಮ್ಮೇಳನಗಳಲ್ಲಿ ಅವಕಾಶ ನಿರಾಕರಿಸಲಾಗುತ್ತದೆ. ಎಂತಹ ವಿಪರ್ಯಾಸ. ಇದರಿಂದ ಯಕ್ಷಗಾನ ಕೊರಗುತ್ತಿಲ್ಲ. ಶುದ್ಧಕನ್ನಡದ ಸಾಹಿತ್ಯ ನಿರಾಕರಣೆಯಿಂದ ಕನ್ನಡ ಬಳಲುತ್ತಿದೆ ಎನ್ನುವ ಕನಿಷ್ಟ ಕಾಳಜಿಯೂ ಇಲ್ಲವಲ್ಲ ಎನ್ನುವುದೇ ಬೇಸರ.
ಯಕ್ಷಗಾನದ ದೃಶ್ಯಕಾವ್ಯ ಬಯಲಾಟವೆಂದು ಕರೆಸಿಕೊಂಡಿತು. ಇನ್ನೊಂದಿದೆಯಲ್ಲ; ತಾಳಮದ್ದಳೆ. ಇದೇ ಶ್ರವ್ಯಕಾವ್ಯ. ಭಾರತೀಯ ಪರಂಪರೆಯ ಸನಾತನ ಕ್ರಮವನ್ನು ಇಂದಿಗೂ ಉಳಿಸಿಕೊಂಡ ಏಕಮಾತ್ರ ಕಲಾಪ್ರಕಾರ ಅಂದರೆ ತಪ್ಪಾಗಲಾರದು. ಭಾರತೀಯ ಕಾವ್ಯ ಪ್ರಕಾರದಲ್ಲಿ ಪ್ರಾಚೀನರು ಒಪ್ಪಿದಂತೆ ಇದ್ದದ್ದು ಎರಡೇ ಪ್ರಕಾರ. ದೃಶ್ಯಕಾವ್ಯ, ಮತ್ತೊಂದು ಶ್ರವ್ಯಕಾವ್ಯ. ದೃಶ್ಯಕಾವ್ಯಕ್ಕೆ ಯಕ್ಷಗಾನವೂ ಸೇರಿದಂತೆ ಹಲವು ಲಕ್ಷ್ಯಗಳು ನಮಗೆ ಕಾಣಸಿಗುತ್ತವೆ. ಆದರೆ ಶ್ರವ್ಯಕಾವ್ಯವೆಂದರೆ.... ಏನಪ್ಪ ಎನ್ನುವುದರೊಂದಿಗೆ ಉಳಿಯುವ ಸ್ಥಿತಿ ನಮ್ಮದು. ಯಾಕೆಂದರೆ ಅಂತಹ ಕಾವ್ಯಗಳೇ ವರ್ತಮಾನದಲ್ಲಿ ರೂಢಿಯಲ್ಲಿಲ್ಲ ನೋಡಿ. ಕಾಳಿದಾಸನ ರಘುವಂಶವಾಗಲೀ, ಕನ್ನಡದ ತೊರವೆ ರಾಮಾಯಣವಾಗಲೀ ಅದನ್ನು ನಾವು ಓದುತ್ತೇವೆ. ಕೇಳುವುದಲ್ಲವಲ್ಲ. ಅಂದರೆ ಅದು ಪಠ್ಯಕಾವ್ಯವಾಯಿತು. ಆದರೆ ಅಂತಹ ಪ್ರಬೇಧವೇ ಪ್ರಾಚೀನರಿಂದ ಹೇಳಲ್ಪಡಲಿಲ್ಲ. ಕಾರಣ ಹೀಗಿರಬಹುದೇನೋ. ಈಗಿನಂತೆ ಗ್ರಂಥಗಳ ಮುದ್ರಣದ ತಂತ್ರಜ್ಞಾನವಿಲ್ಲದ್ದರಿಂದ ಆ ಕಾಲದಲ್ಲಿ ಬಹುಪ್ರತಿಗಳ ಅಲಭ್ಯತೆಯೇ ಅವುಗಳನ್ನು ಶ್ರವ್ಯಕಾವ್ಯವಾಗಿಸಿರಬಹುದು. ಅದಲ್ಲ ವಿಚಾರ. ಈಗ ಮಾತ್ರ ಅವುಗಳು ಶ್ರವ್ಯಕಾವ್ಯಗಳಾಗಿ ಉಳಿದಿಲ್ಲ ಅನ್ನುವುದಂತೂ ಅಕ್ಷರಶಃ ಸತ್ಯ. ಇಲ್ಲವೆನ್ನುವುದಕ್ಕೆ ಗಮಕ ಸಾಹಿತ್ಯ, ಹರಿಕಥಾ ಸಾಹಿತ್ಯ, ಪ್ರವಚನ ಸಾಹಿತ್ಯಗಳು ಒಂದರ್ಥದಲ್ಲಿ ಶ್ರವ್ಯಕಾವ್ಯಗಳಾಗಿ ಕಾಣುತ್ತವೆ. ಆದರೆ ಆ ಸಾಹಿತ್ಯದ ಪ್ರಯೋಗಗಳಲ್ಲಿ ಪ್ರಥಮ ಪುರುಷವೇ (Third Person) ಇರುವುದು. ರಾಮ ಹೇಳಿದ, ರಾವಣ ಗರ್ಜಿಸಿದ ಎಂದೇ ಅಲ್ಲಿ ಅನ್ನುವುದು. ಆದರೆ ತಾಳಮದ್ದಳೆಯಲ್ಲಿ ಹಾಗಲ್ಲವಲ್ಲ. ಎಲ್ಲವೂ ಉತ್ತಮ ಪುರುಷದಲ್ಲೇ (First Person) ಇರುತ್ತದೆ. ನಾನು ರಾಮ, ರಾವಣ ಅನ್ನುವುದೇ ಪ್ರಯೋಗ. ಈ ರೀತಿ ಪೂರ್ಣ ಪ್ರಮಾಣದಲ್ಲಿ ಶ್ರವ್ಯ ಕಾವ್ಯವೆನ್ನುವ ಸಂಪ್ರದಾಯವನ್ನು ಉಳಿಸಿಕೊಂಡದ್ದು ಯಕ್ಷಗಾನದ ತಾಳಮದ್ದಲೆ ಮಾತ್ರ. ಒಂದರ್ಥದಲ್ಲಿ ಇಡೀ ಭಾರತಕ್ಕೆ ಇದೊಂದೇ ಕಲೆ ಶ್ರವ್ಯಕಾವ್ಯವಾಗಿ ಉಳಿದದ್ದು ಅನ್ನಬಹುದು; ಹೆಚ್ಚೇಕೆ ಜಗತ್ತಿನಲ್ಲೇ ಇದೊಂದೇ ಕಲಾಪ್ರಕಾರ ಇದನ್ನು ಕಾಣಿಸುವ ಕಲೆ ಎಂದೂ ಅನ್ನಬಹುದು.
ಇಷ್ಟು ಸಾಕಲ್ಲವೇ ಇದನ್ನು ವಿಶ್ವಕಲೆ ಅನ್ನಲು. ಆದರೆ ಇದನ್ನು ರಾಜ್ಯಕಲೆಯೆಂದು ಮಾಡುವಲ್ಲಿ ಆಗ್ರಹಿಸುವ ಪರಿಸ್ಥಿತಿ ವರ್ತಮಾನ ಕಾಲದಲ್ಲಿ ಇದೆ. ಎಂತಹ ವಿಚಿತ್ರ ನೋಡಿ. ಬಿಡಿ; ಅದು ಹಾಗೆಯೇ ಇರಲಿ ಅನ್ನುವುದೇ ಸೂಕ್ತ. ಹಿಂದೊಮ್ಮೆ ಭವಭೂತಿ ಅನ್ನುವ ಕವಿ ಅಂದನಂತೆ; "ಕಾಲೋಹ್ಯಯಮ್ ನಿರವಧಿರ್ವಿಫುಲಾಚ ಪೃಥ್ವೀ" ಎಂದು. ನಾವೂ ಹೇಳೋಣ. ಈ ಕಾಲವೇ ನಿರವಧಿಯಾದದ್ದು, ಪೃಥ್ವಿಯೂ ವಿಶಾಲವಾದದ್ದು. ಇಂದಲ್ಲ ನಾಳೆ ಇಲ್ಲಲ್ಲದೆ ಇದ್ದರೆ ಇನ್ನೊಂದೆಡೆ ಆ ಯೋಗ್ಯತೆಯನ್ನು ಪೂರ್ವಾಗ್ರಹವನ್ನು ತೊರೆದು ಕಂಡುಕೊಂಡಾರು. ಆದರೆ ಒಂದಂತೂ ಸತ್ಯ. "ನಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ" ಅನ್ನುವಂತೆ ಅದು ಯಾರಿಂದಲೂ ದೊಡ್ಡಕಲೆಯೆಂದು ಘೋಷಿಸಲ್ಪಡಬೇಕಾದ ಅಗತ್ಯವೇ ಇಲ್ಲ. ಸಹೃದಯರಿಂದ ಈಗಾಗಲೇ ಘೋಷಿಸಲ್ಪಟ್ಟ ಕಲೆ ಇದು. ಸುಮಾರು ನಲುವತ್ತು ಯಕ್ಷಗಾನ ಮೇಳಗಳಿಂದ ಒಂದು ಸಾವಿರ ವೃತ್ತಿಪರ ಕಲಾವಿದರಿಂದ ಉಪಜೀವ್ಯವಾದದ್ದು. ನಾಲ್ಕು ಸಾವಿರ ಹವ್ಯಾಸಿಗಳಿಂದಲೂ, ವ್ಯವಸಾಯಿಗಳಿಂದಲೂ ಕೂಡ. ಸುಮಾರು ಸರಾಸರಿ ಇಪ್ಪತ್ತೈದು ಸಾವಿರ ಪ್ರೇಕ್ಷಕ ಸಹೃದಯರ ಅಕ್ಷಿಪಟಲವನ್ನು ಆಹ್ಲಾದಿಸುವ ಕಲೆಯಾಗಿ ರಾರಾಜಿಸುತ್ತಿದೆ. ಅದೂ ಕೇವಲ ನಿಯಮಿತ ಭೂಭಾಗದಲ್ಲಿ ಕರಾವಳಿಯ ನೆಲದಲ್ಲಿಯೂ ಅಲ್ಲದೆ ದೂರದ ಮುಂಬೈಯಲ್ಲೂ ಇದರ ಆರಾಧನೆ ನಡೆಯುತ್ತಿದೆ. ಈಗ ಅಮೇರಿಕಾದಲ್ಲೂ ಇದೆಯಂತೆ. ಪ್ರಸ್ತುತ ಕನ್ನಡವಲ್ಲದೆ ಇತರ ಭಾಷೆಗಳಿಂದಲೂ ಪ್ರದರ್ಶನಗಳನ್ನು ಕಂಡು ತನ್ನ ಬಾಹುಗಳನ್ನು ವಿಸ್ತರಿಸಿದೆ. ಹಾಗಿದ್ದರೆ ಎಲ್ಲರೂ ವಿಶ್ವಕಲೆ ಎಂದು ಒಪ್ಪಿದ್ದಾರೆ. ಆರಾಧಿಸಿದ್ದಾರೆ. ಆರಾಧಿಸುತ್ತಿದ್ದಾರೆ ಎಂದಾಯಿತು. ಇನ್ನು ಘೋಷಣೆ ಯಾಕೆ ಹೇಳಿ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು

    Vidwan Sriharinarayanadasa Asranna, KateeluNo comments:

Post a Comment