Saturday, 6 February 2016

ಬ್ರಹ್ಮಾನಂದ ಸಹೋದರಃ

ಸಾಹಿತ್ಯ ಮತ್ತು ಸಂಗೀತದ ಆನಂದ ಹೇಳತೀರದ್ದು. ಇದು ಎಷ್ಟು ಎಂದು ಮಾಪನ ಮಾಡಲು ಸಾಹಿತ್ಯಶಾಸ್ತ್ರಜ್ಞರಿಗೆ ಆಗಲೇ ಇಲ್ಲ. ಅತ್ಯುತ್ಕೃಷ್ಟವಾದ ಸಾತ್ವಿಕ ಆನಂದ ಸಿಗುತ್ತದೆ ಎಂದು ಮಾತ್ರ ವಿವಾದಾತೀತ ಎಂದು ತಿಳಿದುಕೊಂಡರು. ಕೊನೆಗೆ "ಬ್ರಹ್ಮಾನಂದಸಹೋದರಃ" ಅಂದರು.
ಎಂತಹ ವಿಚಿತ್ರ ನೋಡಿ. ಬ್ರಹ್ಮಾನಂದ ಎಂಬುದು ಏಕಾಂತಿಕ. ತಾನೊಬ್ಬನೇ ಏಕಾಂತದಲ್ಲಿ ಸಾಧಿಸಿ ತಾನೊಬ್ಬನೇ ಏಕಾಂತದಿಂದ ಅನುಭವಿಸುವುದು. ಇಲ್ಲಿ ಬಹುಮಂದಿಗಳಾದಲ್ಲಿ ಅವರೇ ಏಕಾಂತಕ್ಕೆ ಭಂಗತರುವವರಾಗುತ್ತಾರೆ. ಬ್ರಹ್ಮಾನಂದ ದೊರಕದಾಗುತ್ತದೆ. ಸಿಕ್ಕಿದಲ್ಲಿ; ಇಲ್ಲಿ ಸಿಕ್ಕ ಆನಂದ ಎಲ್ಲವನ್ನೂ ಮೀರಿಸುವಂಥದ್ದು. ಅದಕ್ಕಾಗಿ ಋಷಿಮನೀಷಿಗಳು ಇದರ ಉದ್ದೇಶದಿಂದ ತಮ್ಮನ್ನೇ ಅದಕ್ಕಾಗಿ ಅರ್ಪಿಸಿಕೊಳ್ಳುತ್ತಾರೆ.
ಸಂಗೀತಗಳ ಸಾಹಿತ್ಯಗಳ ಆನಂದ ಹಾಗಲ್ಲ. ಇದು ಅನೇಕಾಂತಿಕ. ತಾನೇ ಮಾಡಿದ ಸಾಧನೆಯಿಂದ ಸಂತೋಷ ಅಲ್ಲ. ಅದಕ್ಕೆ ಸಾಂಘಿಕ ಸಾಧನೆ ಅಗತ್ಯ ಇದೆ. ಸಂಗೀತಕ್ಕೆ ಒಳ್ಳೆಯ ಸಾಹಿತ್ಯ ಬೇಕು. ಹಾಡುವಲ್ಲಿ ರಾಗದ ಅಭ್ಯಾಸ ಬೇಕು. ಒಳ್ಳೆಯ ಸ್ವರ ಬೇಕು. ಅದು ಶ್ರುತಿಗೆ ಸೇರಬೇಕು. ಹಾಡುವಲ್ಲಿ ಲಯ, ತಾಳಗಳ ಶುದ್ಧತೆ ಬೇಕು. ಇಷ್ಟಿದ್ದರೆ ಸಾಕೇ? ಪಕ್ಕ ವಾದ್ಯದವರು ಬೇಕು. ಇದಕ್ಕಾಗಿ ಕೆಲವು ಪರಿಕರಗಳು ಬೇಕು. ಎಲ್ಲವೂ ಸೇರಿ ಒಟ್ಟಂದದಿಂದ ಆನಂದದಾಯಕವಾಗುತ್ತದೆ. ಆದರೆ ಈ ಆನಂದ ಪೂರ್ಣವಾಗಿ ಹಾಡುವವನಿಗೆ ಯಾ ಪಕ್ಕವಾದ್ಯ ನುಡಿಸುವವನಿಗೆ ಲಭ್ಯವಲ್ಲ. ಅವರಿಗೆ ದೈಹಿಕವಾಗಿ ಆಯಾಸವೇ ಆಗುವುದು. ಆದರೆ ಇದನ್ನು ಕೇಳುವವರು ಆನಂದ ತುಂದಿಲರಾಗುತ್ತಾರೆ. ಸಹಸ್ರಾರು ಜನರ ನಡುವೆ ಉಳಿದರೂ ಆನಂದದಲ್ಲಿ ಏಕಾಂತವೇ ಅವರಲ್ಲಿ ವಿಜೃಂಭಿಸುತ್ತದೆ.
ಸಾಹಿತ್ಯದಲ್ಲೂ ಹಾಗೆಯೇ. ಬರೆಯುವವನೊಬ್ಬ. ಅವ ಆ ಕಾವ್ಯಕ್ಕಾಗಿ ಪ್ರವರ್ತಿಸುವ ಮೊದಲು ಲೋಕಾನುಭವ ಪಡೆದಿರಬೇಕು. ಶೃಂಗಾರ ರಸದ ಕಾವ್ಯಕ್ಕಾಗಿ ಅವ ಆ ರಸದ ರಸಜ್ಞ ಆಗಿರಬೇಕು. ಲೌಕಿಕವಾಗಿ ಹೇಳುವುದಾದರೆ ಮಹಾ ರಸಿಕನಾಗಿರಬೇಕು. ಅದಕ್ಕೆ ಆಲಂಬನವಿಭಾವವೆನಿಸಿದ ನಾಯಕ ನಾಯಿಕೆಯ ವರ್ಣನೆಯಲ್ಲಿ ನೈಪುಣ್ಯವನ್ನು ಪಡೆದಿರಬೇಕು. ಅದಕ್ಕಾಗಿ ಉಪಯೋಗವಾಗುವ ಉದ್ದೀಪನವಿಭಾವವೆನಿಸಿದ ಪ್ರಕೃತಿಯ ತಂಪುಗಾಳಿ, ಮಳೆ ಇತ್ಯಾದಿಗಳನ್ನೂ ಹೃದ್ಯವಾಗಿ ವರ್ಣಿಸಬೇಕು. ಆ ಸಂದರ್ಭದಲ್ಲಿ ಸ್ವೇದ, ರೋಮಾಂಚ, ದಂತಕ್ಷತನಖಕ್ಷತಾದಿಗಳ ಜ್ಞಾನ ಹೊಂದಿಬೇಕು. ಆಗ ರತಿಯೆಂಬ ಸ್ಥಾಯೀಭಾವದಲ್ಲಿ ಶೃಂಗಾರರಸದ ಉತ್ಪತ್ತಿಯಾಗುತ್ತದೆ. ಇವಿಷ್ಟನ್ನು ಸಾಧಿಸಲು ಅವನ ಅನೇಕಾಂತ ಅನಿವಾರ್ಯ. ಏಕಾಂತದ ಸುಳಿವೂ ಇರಕೂಡದು. ಆದರೆ ಇದರಿಂದ ಆಗುವ ಆನಂದದ ಸವಿ ಮಾತ್ರ ಏಕಾಂತಿಕ ಅನ್ನುವುದೇ ವಿಚಿತ್ರ. ಈ ಆನಂದ ಕವಿಗೆ ಸಿಗುತ್ತದೆ ಎಂದು ಸಾರ್ವತ್ರಿಕವಾಗಿ ಅನ್ನಲಾಗದು. ಉದಾಹರಣೆಗೆ ಯಕ್ಷಗಾನದ ಗದ್ಯಕವಿಗಳೆನಿಸಿದ ಮುಮ್ಮೇಳದ ಕಲಾವಿದರಿಗೆ ಆಗುವುದು ಆಯಾಸವೇ. ಆದರೆ ರಸಿಕನಿಗೆ ಮಾತ್ರ ರಸದೌತಣವೇ. ರಸಾಸ್ವಾದಕ್ಕಾಗಿ ಎಲ್ಲಿಂದಲಾದರೂ ರಾತ್ರಿಯ ಹೊತ್ತು ಹಳ್ಳಿಹಳ್ಳಿಗೂ ಕೆಟ್ಟರಸ್ತೆಯಲ್ಲಿ ಹೋಗಿ ನಿದ್ದೆಬಿಡುವಲ್ಲಿಗೂ ಯಾವುದೇ ಹಿಂಜರಿಕೆ ಅವರಿಗೆ ಇರಲಾರದು. ಆದರೆ ಅಲ್ಲಿ ಬಹುಮಂದಿಯ ನಡುವೆ ಏಕಾಂತರಾಗಿ ಆನಂದತುಂದಿಲರಾಗಿ ರಸಾಸ್ವಾದದಲ್ಲೇ ಇಹಲೋಕವನ್ನು ಮರೆಯುತ್ತಾರೆ. ಅದೇ ಆನಂದವನ್ನು ಅಳೆಯಲಾಗದೆ ಬ್ರಹ್ಮಾನಂದ ಸಹೋದರ ಅಂದದ್ದು ಪ್ರಾಚೀನಸಾಹಿತ್ಯಶಾಸ್ತ್ರಜ್ಞರು.
ಈ ಆನಂದಗಳ ಬಗ್ಗೆ  ಹೇಳುವುದಾದರೆ ಒಂದೇ ಶಬ್ದ ಎರಡರಲ್ಲೂ ಏಕತರವಾಗಿ ಕಾಣುತ್ತದೆ. ಅದುವೇ "ಸ್ವಾನುಭೂತ್ಯೈಕಮಾನ" ವಾದದ್ದು. ಆದ್ದರಿಂದಲ್ಲವೇ ಪ್ರಾಚೀನರು ಈ ಸಾಹಿತ್ಯ ಹಾಗೂ ಸಂಗೀತದ ಆನಂದವನ್ನು ಬ್ರಹ್ಮಾನಂದ ಸಹೋದರಃ ಅಂದದ್ದು.
-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
            Vidwan Sriharinarayanadasa Asranna, Kateelu

No comments:

Post a Comment