Thursday, 4 February 2016

ಯಕ್ಷಗಾನದಲ್ಲಿ ಭಾಷೆ


ಭಾಷೆ ಅಂದರೆ ಜನರಿಗೆ ನೆನಪಾಗುವುದು ಅದರ ಪ್ರಬೇಧಗಳು ಮಾತ್ರ. ಸಂಸ್ಕೃತಭಾಷೆ, ಕನ್ನಡಭಾಷೆ, ತುಳುಭಾಷೆ.... ಹೀಗೆ. ಇವುಗಳಿಗೆ ಅರ್ಥವಿಷ್ಟೇ. ಸಂಸ್ಕೃತವೆಂಬ ಭಾಷೆ ಇತ್ಯಾದಿ ಬೇಧಗಳ ಕುರಿತು. ಇನ್ನೊಂದು ಬೈಗಳಲ್ಲಿ; ‘ನಿನಗೆ ಭಾಷೆ ಬರುವುದಿಲ್ವ, ಎಷ್ಟು ಸಲ ಹೇಳುವುದು?’ ಇಲ್ಲಿ ಹೇಳುವುದನ್ನು ಅರ್ಥವಾಗದ ಜಾತಿ ಎಂದು ಅರ್ಥೈಸಬೇಕು. ಅವುಗಳಿಗೆ ಭಾಷೆಯ ಸಂತಾನವೇ ಇಲ್ಲ ಅನ್ನುವ ಮತ್ತೊಂದು ಬೈಗಳಿನ ಪ್ರಬೇಧ. ಇಲ್ಲಿ ಸಂಸ್ಕಾರವೇ ಇಲ್ಲ ಅನ್ನುವ ಅರ್ಥ. ಅರ್ಥವಾಗದ ಭಾಷೆ ಎನ್ನುವ ಅರ್ಥದಲ್ಲಿ ಹೇಳುತ್ತಾರೆ, ಅವನದ್ದು ಸಂಸ್ಕೃತ ಭಾಷೆ ಎಂದು. ಅವ್ಯವಸ್ಥಿತವಾಗಿ ಒಬ್ಬ ಮಾತನಾಡಿದರೆ ಅವ ಇಂಗ್ಲೀಷ್ ಶುರು ಮಾಡಿದ ಅನ್ನುತ್ತಾರೆ. ಹಿಂದು ಮುಂದು ಮಾಡಿ ಮಾತನಾಡಿದರೆ ಅವನ ಉರ್ದು ಕೇಳಿ ಅನ್ನುತ್ತಾರೆ. ಹೀಗೆ ಬಹಳವಾಗಿ ಭಾಷೆ ಅನ್ನುವ ಪದ ಪ್ರಯೋಗದಲ್ಲಿದೆ. ಒಂದು ಅದರ ಅರ್ಥವನ್ನು ಹೇಳುವುದಲ್ಲ. ಧ್ವನಿಗರ್ಭಿತವಾದದ್ದು; ಸಾಂದರ್ಭಿಕವಾದದ್ದು.
ಏನಪ್ಪಾ ಭಾಷೆ ಅಂದರೆ? ಅಂದರೆ ಮಾತನಾಡಲು ಇರುವುದು ಅನ್ನುವುದು ಸರಳವಾದ ವಿವರಣೆ. ಸಂಸ್ಕೃತದಲ್ಲಿ "ಭಾಷೃ ವ್ಯಕ್ತಾಯಮ್ ವಾಚಿ" ಅನ್ನುವ ಧಾತುವಿನಿಂದ ನಿಷ್ಪನ್ನವಾದುದು ಭಾಷೆ ಅನ್ನುವ ಪದ. ಒಬ್ಬ ಮತ್ತೊಬ್ಬನಿಗೆ ಅರ್ಥವಾಗುವಂತೆ ಮಾತಿನಲ್ಲಿ ಹೇಳುವುದಕ್ಕೆ ಭಾಷೆ ಎಂದು ಹೆಸರು. ಒಟ್ಟು ಭಾವನೆಗಳ ವಿನಿಮಯಕ್ಕಾಗಿ ಮನುಷ್ಯನಿಂದ ಮಾತ್ರ ಉಪಜೀವ್ಯವಾದ ಮಾತನ್ನು ಅವಲಂಬಿಸುವ ಮಾಧ್ಯಮವನ್ನೇ ಭಾಷೆ ಅನ್ನುವುದು.
ಭಾವಗಳ ವಿನಿಮಯದ ಮಾಧ್ಯಮ ವಾಗ್ರೂಪದಲ್ಲಿರುತ್ತದೆಯಾದ್ದರಿಂದ ಮಾಧ್ಯಮದ ವ್ವವಸ್ಥಿತ ರೂಪದ ಅರಿವು ಇಬ್ಬರಿಗೂ ಇರಬೇಕಾದದ್ದು ಅನಿವಾರ್ಯ. ಅಂತಹ ಅರಿವಿಗಾಗಿ ಶಬ್ದಪ್ರಪಂಚವನ್ನು ವ್ಯವಸ್ಥಿತವಾಗಿ ಜೋಡಿಸುವ ಪರಿಪಾಠ ಹೊಂದಿರಬೇಕು. ಅಂತಹ ಪರಿಪಾಠ ಏಕಪ್ರಕಾರವಾಗಬೇಕು. ಆವಾಗ ಭಾವದ ಅಭಿವ್ಯಕ್ತಿ ಮಾತಿನಲ್ಲಿ ಹೊರಬಂದರೆ ಅದು ಭಾಷೆ ಅನ್ನಿಸುತ್ತದೆ. ಇದಕ್ಕೆ ಒಬ್ಬನ ಪರಿಶ್ರಮ ಸಾಕಾಗದು. ಒಂದು ದಿನದ ಬದುಕೂ ಪರ್ಯಾಪ್ತ ಎನಿಸದು. ಹಲವು ಕಾಲದ ಪರಿಶ್ರಮ, ಹಲವು ಜೀವಗಳ ಆಲೋಚನೆ, ಏಕಪ್ರಕಾರದ ಬುದ್ಧಿಶಕ್ತಿ, ಏಕತಾನತೆ, ಶಬ್ದಾರ್ಥಗಳ ಸಂಘಟನೆ ತುಂಬಿಕೊಳ್ಳಬೇಕು, ಅದೇ ಬೆಳೆಯಬೇಕು. ಅದರ ಅನುಭವ ಉತ್ತರಿಸಿದ್ದನ್ನು, ಉತ್ತೇಜಿಸಿದ್ದನ್ನು, ಪ್ರೇರೇಪಿಸಿದ್ದನ್ನು ಮತ್ತಷ್ಟು ನಿಯೋಜಿಸಿಕೊಳ್ಳಬೇಕು. ಆವಾಗ ಭಾಷೆ ಬೆಳೆಯುತ್ತದೆ. ಸೌಂದರ್ಯವನ್ನು ವರ್ಧಿಸಿಕೊಳ್ಳುತ್ತದೆ.
ಭಾಷಾಸೌಂದರ್ಯದ ವರ್ಧನೆ ಹಳಿತಪ್ಪಲೂ ಹೊರಡುವುದುಂಟು. ಹಾಗೆ ಹೊರಟಾಗ ಇದ್ದ ವ್ಯವಸ್ಥೆ ಸರಿಯೆನ್ನಲು, ವಿಸ್ತಾರತೆಯನ್ನು ನಿರ್ಧರಿಸಲು, ಮುಂದಾಗಬೇಕಾದ ಅಭಿವೃದ್ಧಿಗಳು ಹಳಿಯಲ್ಲೇ ಇರುವಂತೆ ನಿಬಂಧನೆ ಹೇರಲು ವ್ಯಾಕರಣ ಅನ್ನುವ ಪರಿಕಲ್ಪನೆ ಹೊರಟಿತು. ‘ವಿಶಿಷ್ಟಮ್ ಆಕರಣಮ್ ಯಸ್ಮಿನ್ ತತ್ ವ್ಯಾಕರಣಮ್ಅಂದರೆ ವಿಶೇಷವಾದ ಆಕಾರ ಇರುವ ಯಾವುದೋ ಒಂದು ಸೊತ್ತು ಅಂದರ್ಥ. ವ್ಯಾಕರಣವು ಅಪಶಬ್ದಗಳನ್ನು ನಿರಾಕರಿಸುತ್ತದೆ, ಸುಶಬ್ದಗಳನ್ನು, ವಿಶಿಷ್ಟಾರ್ಥ ಶಬ್ದಗಳನ್ನು ಪ್ರೋತ್ಸಾಹಿಸುತ್ತದೆ. ಹೀಗಾದಾಗ ಭಾಷೆ ಶಾಸ್ತ್ರೀಯವೆನಿಸುತ್ತದೆ. ಇಂತಹ ಶಾಸ್ತ್ರೀಯವಾದ ಶಬ್ದಗಳನ್ನು ತಿಳಿದು ಪ್ರಯೋಗಿಸಿದಲ್ಲಿ ಅದು ಸ್ವರ್ಗದಲ್ಲೂ ಬೇಕಾದದ್ದನ್ನು ನೀಡುತ್ತದೆ.(ಏಕಃ ಶಬ್ದಃ ಸುಪ್ರಯುಕ್ತಃ ಸಮ್ಯಗ್ಜ್ಞಾತಃ ಸ್ವರ್ಗೇ ಲೋಕೇ ಕಾಮದುಗ್ಭವತಿ) ಎಂದು ಶಾಸ್ತ್ರದ ಮುದ್ರೆ ಬೀಳುತ್ತದೆ.
ಸಂಸ್ಕೃತ ಭಾಷೆಯಂತೂ ಹೊರಟಿದ್ದೇ ಹೀಗೆ ಅನ್ನುವುದು ನಿಸ್ಸಂಶಯ. ಆದ್ದರಿಂದಲೇ ಅದು ಸಂಸ್ಕೃತ ಅನ್ನಿಸಲ್ಪಟ್ಟಿದೆ. ‘ಸಮ್ಯಕ್ ಕೃತಮ್ ಯೇನ ತತ್ ಸಮ್ಸ್ಕೃತಮ್ (ಸಂಸ್ಕೃತಮ್)’ ಎನ್ನುವುದೇ ಸಂಸ್ಕೃತದ ಅರ್ಥ. ಯಾವುದರಿಂದ ಚೆನ್ನಾಗಿ ಮಾಡಲ್ಪಟ್ಟಿದೆಯೋ ಅದು ಎಂದರ್ಥ. ಸಂಸ್ಕೃತದಲ್ಲಿ ಪ್ರತಿಯೊಂದು ಪದವೂ ಒಂದು ಅರ್ಥದೊಂದಿಗೆ ಶಾಸ್ತ್ರೀಯವಾಗಿ ಜೋಡಿಸಲ್ಪಟ್ಟದ್ದು. ಭಾಷೆಯಲ್ಲಿ ಅರ್ಥ್ತೈಸಿ ಹೇಳುವುದಾದರೆ ಭಾಷೆ ಅನ್ನುವ ಪದದಿಂದ ಹೇಳಲ್ಪಡುವ  ವಸ್ತುವು ಒಂದು ಸಾಮಗ್ರಿ. ಅದರಿಂದ ವ್ಯಕ್ತವಾಗುವಂತೆ ಅಂದರೆ ತಿಳಿಯುವಂತೆ ಮಾಡುವ ಮಾತು ಏನಿದೆಯೋ ಅದರಿಂದ ವ್ಯವಹಾರ ನಡೆಯುವುದರಿಂದ ಅದು ವ್ಯವಹಾರಕ್ಕೆ ಸಾಮಗ್ರಿ ಯಾ ಕರಣ ಯಾ ಉಪಕರಣ ಎಂದು ತಿಳಿದುಕೊಳ್ಳಬೇಕು. ಆದ್ದರಿಂದ ಭಾಷೆಯಲ್ಲೇ ಹೇಳುವುದಾದರೆ ನಾನು ಸಂಸ್ಕೃತ ಭಾಷೆಯಿಂದ ಮಾತನಾಡುತ್ತೇನೆ ಅನ್ನಬೇಕು; ಭಾಷೆಯಲ್ಲಿ ಅನ್ನುವ ಹಾಗಿಲ್ಲ. ತೃತೀಯಾ ವಿಭಕ್ತಿಯೇ ಇಲ್ಲಿ ಪ್ರಯೋಜ್ಯ. ರಾಮನು ಬಾಣದಿಂದ ರಾವಣನನ್ನು ಕೊಂದನು ಎಂದು ಹೇಳಿದ ಹಾಗೆ.
ಕನ್ನಡವು ನಮ್ಮದು. ನನ್ನ ವಿಚಾರದ ಬರವಣಿಗೆಗೆ ಯಾ ನನ್ನ ಯಕ್ಷಗಾನದ ಬದುಕಿಗೆ ಕನ್ನಡವೇ ನನಗೆ ಭಾಷೆ/ಮಾಧ್ಯಮ. ಆದ್ದರಿಂದ ಕನ್ನಡವೇ ನನ್ನ ಒಲವಿನ ಭಾಷೆ. ಇದನ್ನು ಭಾಷೆಯಾಗಿ ಉಪಯೋಗಿಸುವಲ್ಲಿ ನಾನು ಸಂಸ್ಕೃತದ ನೆರವನ್ನು ಪಡೆಯುತ್ತೇನೆ ಅನ್ನುವುದೂ ಅಷ್ಟೇ ಸತ್ಯ. ಇದನ್ನು ಹೊರತಾಗಿ ಬೇರೆ ಭಾಷೆಯನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಅನ್ನುವ ಸಂಕಲ್ಪಬದ್ಧನಾಗಿದ್ದೇನೆ ಅನ್ನುವುದೂ ಸತ್ಯ. ನನ್ನ ಕನಸು ನನಸಾಗಿಸುವುದು ವಾಗ್ದೇವಿಗೆ ಬಿಟ್ಟ ವಿಚಾರ ಬಿಡಿ. ಆದರೆ ಸಂಕಲ್ಪಕ್ಕೆ ಬದ್ಧತೆ ಬರಲು ಕಾರಣ ಬೇಡವೇ ಅನ್ನಿಸಬಹುದು ಕೆಲವರಿಗೆ. ಕೆಲವರು ನನಗೆ ಸಂಸ್ಕೃತ ವ್ಯಾಮೋಹ ಅಧಿಕ ಅಂತಲೂ ಅನ್ನುವವರಿದ್ದಾರೆ; ಅಂದಿದ್ದಾರೆ ಕೂಡ. ಸ್ವಲ್ಪ ಯೋಚಿಸೋಣ.
ಕನ್ನಡಭಾಷೆಗೆ ಮೂಲ ಯಾವುದು? ಸಂಸ್ಕೃತವಲ್ಲದೆ ಬೇರೇನನ್ನಬೇಕು ಹೇಳಿ. ಕನ್ನಡದ ಎಂಭತ್ತು ಪ್ರತಿಶತ(ಶೇಕಡಾ)ಶಬ್ದಗಳು ಸಂಸ್ಕೃತದಿಂದ ಹುಟ್ಟಿದವುಗಳು. ನಾವು ಕುಡಿಯುವ ನೀರು ಅನ್ನುವಲ್ಲಿ ನೀರು ಎನ್ನುವುದು ನೀರ ಎಂಬ ಸಂಸ್ಕೃತ ಪದಕ್ಕೆ ಎನ್ನುವ ವಿಭಕ್ತಿ ಮಾತ್ರ ಸೇರಿಸಲ್ಪಟ್ಟದ್ದು. ಅನ್ನ ಅನ್ನುವ ಶಬ್ದ ಇದ್ದ ರೂಪದಲ್ಲೇ ಕನ್ನಡಕ್ಕೆ ಬಂದದ್ದು. ಪಾನೀಯ, ಆಹಾರ, ವಸತಿ.... ಹೀಗೆ ಸಾವಿರಾರು. "ನೋಡಿ ನಿರ್ಮಲಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ" ಅನ್ನುವ ಕವಿವಾಣಿಯಲ್ಲಿ ಕನ್ನಡ ಶಬ್ದಗಳು ಎಷ್ಟು ನೋಡೋಣ! ನೋಡಿ ಮತ್ತು ಮಾಡಿಕೊಂಡರು ಅನ್ನುವ ಎರಡು ಪದಗಳು ಮಾತ್ರ. ಉಳಿದಂತೆ ಸಂಸ್ಕೃತ ಪದಗಳಿಗೆ ಕನ್ನಡದ ವಿಭಕ್ತಿಗಳ ಅಳವಡಿಕೆ ಮಾತ್ರ. ಇದನ್ನು ಪುಷ್ಟೀಕರಿಸುವುದಕ್ಕೇನೇ ಕೇಶೀರಾಜ ಶಬ್ದಮಣಿದರ್ಪಣ ಬರೆದ. ತತ್ಸಮ ತದ್ಭವ ಎನ್ನುವ ಎರಡು ಪದ ಬಳಕೆ ಮಾಡಿದ. (ಎರಡೂ ಸಂಸ್ಕೃತ ಪದಗಳು). ಸಂಸ್ಕೃತ ಛಂದಸ್ಸು ಶಾರ್ದೂಲವಿಕ್ರೀಡಿತಾದಿಗಳು ಕನ್ನಡದಲ್ಲೂ ಪ್ರಮುಖಗಳಾಗಿವೆ. ಹೀಗೆ ಎಷ್ಟೂ ಹೇಳಬಹುದು ಬಿಡಿ. ಮುಗಿಯದ್ದು ಇದು.
ಹಿಂದೆ ಹೇಳಿದ ಕೆಲವರು ಎಲ್ಲಾ ವಿಚಾರವನ್ನರಿಯದೇ ಹಾಗನ್ನುತ್ತಾರೋ ಅಥವಾ ಬೇರೆ ಉದ್ದೇಶವಿದೆಯೋ ನನಗಂತೂ ಗೊತ್ತಿಲ್ಲ. ಅವರು ನಿರ್ವಹಿಸುವುದು ಅಂದರೆ ಪ್ರಬುದ್ಧ ಅನ್ನುತ್ತಾರೆ; ದೋಷ ಎಂಬಂತೆ ಮಾತನಾಡುತ್ತಾರೆ. ಬದಲಾಗಿ ನಿಭಾಯಿಸುವುದು ಎಂದು ಪ್ರಯೋಗಿಸಿದ್ದನ್ನು ಸರಳ ಅನ್ನುತ್ತಾರೆ. ಆದರೆ ಅದು ಹಿಂದೀ ಭಾಷೆಯ ಶಬ್ದ ಕನ್ನಡದ್ದಲ್ಲ. ಹೊಣೆಗಾರಿಕೆ ಅನ್ನುವ ಶುದ್ಧಕನ್ನಡ ಪ್ರಬುದ್ಧಭಾಷೆ ಅನ್ನುತ್ತಾರೆ ಜವಾಬ್ದಾರಿ ಅನ್ನುವ ಅನ್ಯಭಾಷೆಯ ಶಬ್ದದ ಉಪಯೋಗ ಭಾಷಾ ಬೆಳವಣಿಗೆ ಅನ್ನುತ್ತಾರೆ. ಏನನ್ನೋಣ ಇವರಿಗೆ.
ಕನ್ನಡದ ಯಕ್ಷಗಾನವನ್ನು, ಅದರಲ್ಲೂ ತಾಳಮದ್ದಲೆಯ ವಿಚಾರದಲ್ಲಿ ಯೋಚಿಸಿದಲ್ಲಿ ಪ್ರೇಕ್ಷಕರ ಹಾಗೂ ಶ್ರೋತೃಗಳ ಮನಃಪಟಲವನ್ನು ಕೆದಕೋಣ. ಆವಾಗ ನೆನಪಿಗೆ ಬರುವ ಹೆಸೆರುಗಳನ್ನೂ ಮೆಲುಕುಹಾಕೋಣ. ಶೇಣಿ, ಸಾಮಗ, ಸಿದ್ಧಕಟ್ಟೆ ಚೆನ್ಬಪ್ಪ ಶೆಟ್ಟಿ ಮುಂತಾದವರು. ಅವರೆಲ್ಲ ಪ್ರಬುದ್ಧ ಎಂದು ಹೇಳುವ ಸಂಸ್ಕೃತಭಾಷೆಯನ್ನು ಉಪಯೋಗಿಸಿ ಇತರ ಭಾಷೆಗಳ ಸ್ಪರ್ಶವನ್ನೂ ಮಾಡದೆ ಶುದ್ಧಕನ್ನಡದ ಅರ್ಥಧಾರಿಗಳು ಅನ್ನಿಸಿಕೊಂಡವರು. ಈಗಿನ ಪ್ರಸಿದ್ಧ ಜನಪ್ರಿಯ ಅರ್ಥಧಾರಿಗಳನ್ನು ನೋಡೋಣ. ಮೂಡಂಬೈಲು, ಕೆರೆಕೈ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್ ಮತ್ತಿತರರು. ಇವರ ಭಾಷೆ ಪ್ರಬುದ್ಧವಲ್ಲವೇ? ಹಾಗಿದ್ದರೆ ಇವರು ಜನಪ್ರಿಯರಾದ ಬಗೆ ಹೇಗೆ? ಯೋಚಿಸೋಣ. ಕೆಲವರನ್ನಬಹುದು; ಅದು ಅವರ ವಿಷಯ ಪ್ರತಿಪಾದನೆಯ ವೈಖರಿಯಿಂದಲೇ ಹೊರತು ಭಾಷೆಯಿಂದ ಅಲ್ಲವೆಂದು. ಒಪ್ಪತಕ್ಕ ಮಾತೇ; ನಿರಾಕರಿಸಲಾಗದ್ದು. ಆದರೆ ವಿಷಯ ಪ್ರತಿಪಾದನೆಯು ಪ್ರಬುದ್ಧ ಭಾಷೆಯಲ್ಲಿರುವಾಗ ಜನರಿಗೆ ಅರ್ಥವಾಗುವುದೆಂತು? ಪ್ರೇಕ್ಷಕರೂ ಪ್ರಬುದ್ಧರಾಗಿರುವುದರಿಂದಲ್ಲವೇ?
ಅಂದರೆ ಭಾಷೆ ಪ್ರಬುದ್ಧವಾಗಿರಬೇಕೆಂಬುದನ್ನು ಸರಿಯಲ್ಲ ಅನ್ನುವವರು ಯಾರು? ಪ್ರೇಕ್ಷಕರಲ್ಲ ಅನ್ನುವುದು ಭಾಷೆಯನ್ನು ಉಪಕರಣವಾಗಿ ಆರಿಸಿದ ಕಲಾವಿದರನ್ನು ಜನಪ್ರಿಯ ಕಲಾವಿದರೆನಿಸುವಲ್ಲಿ ಪುರಸ್ಕರಿಸಿದ್ದರಿಂದಲೇ ತರ್ಕಿಸಬಹುದಾಗಿದೆ. ಸಂಘಟಕರಿಂದ ಅಲ್ಲವೇ ಅಲ್ಲ; ಯಾಕೆಂದರೆ ಅವರು ಶೈಲಿಯ ಕಲಾವಿದರನ್ನೇ ಹೆಚ್ಚಾಗಿ ಆಮಂತ್ರಿಸುವುದರಿಂದ. ಹಾಗಾದರೆ... ಸಂಸ್ಕೃತದ್ವೇಷಿಗಳೇ? ಅಥವಾ ಪ್ರಬುದ್ಧಶೈಲಿಯ ಬಗ್ಗೆ ಅಸಡ್ಡೆ ಯಾ ಕಲಿಯುವ ಬಗ್ಗೆ ಔದಾಸೀನ್ಯವಿರುವ ಕಲಾವಿದರ ವ್ಯವಸ್ಥಿತ ಹುನ್ನಾರವೇ? ಅಥವಾ ಇನ್ನಾವುದೋ ಬುದ್ಧಿಜೀವಿಗಳಿಂದಲೋ? ಬಿಡಿ. ಇಲ್ಲಿ ವಿಮರ್ಶೆ ಬೇಡ. ನಮ್ಮ ನಮ್ಮಲ್ಲಿಯೇ ಇದನ್ನು ವಿಮರ್ಶಿಸೋಣ. ಉತ್ತರ ಪ್ರಾಮಾಣಿಕವಾಗಿ ಮಥಿಸಿ ಪಡೆಯೋಣ.
-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
       Vidwan Sriharinarayanadasa Asranna, Kateelu

No comments:

Post a Comment