Thursday, 4 February 2016

ಯಕ್ಷಗಾನದಲ್ಲಿ ದೇವಿ ಭಾಗ 1

ಚಂಡಮುಂಡರ ಪಾತ್ರ ಗೌರವದ ಕುರಿತು ಆಡುವಾಗ ದೇವಿಗೆ ಕಾಯಕಲ್ಪ ಆಗಬೇಕು ಅನ್ನುವ ಅಭಿಪ್ರಾಯ ಬಂತು. ಇಂದೇನೋ ಇದಕ್ಕೆ ಸ್ವಲ್ಪ ಬರವಣಿಗೆಯ ಸ್ವರೂಪ ಕೊಡೋಣ ಅನ್ನಿಸಿತುಅದಕ್ಕೊಂದು ಮಾತು.
ದೇವೀ ಮಾಹಾತ್ಮ್ಯೆ ಯಕ್ಷಗಾನದಲ್ಲಿ ವಿಜೃಂಭಿಸುವುದು ಮಧ್ಯಮಚರಿತೆ ಅಂದರೆ ಮಹಿಷಾಸುರನನ್ನು ಕೊಲ್ಲುವ ದೇವಿಯ ಕಥೆ. ಆದಿಮಾಯೆಯ ಪ್ರಕರಣದ ದೇವಿಯ ಕಲ್ಪನೆಗೆ ಯಕ್ಷಗಾನದಲ್ಲಿ ಅಂತಹ ಮಹತ್ತ್ವವನ್ನು ನೀಡಿಲ್ಲ. ಅವಳನ್ನು ಆದಿಮಾಯೆ ಎಂದೇ ಕರೆದು ಮುಗಿಸುತ್ತಾರೆ. ಇರಲಿ ಬಿಡಿ, ಆದರೆ ಮಹಿಷಾಸುರನನ್ನು ಕೊಲ್ಲುವ ದೇವಿಯ ಬಗ್ಗೆ ಹಲವಾರು ಕಲ್ಪನೆಗಳಿವೆ. ಅದು ಪಾತ್ರವನ್ನು ಹಿರಿದುಗೊಳಿಸಿ ಅಲೌಕಿಕವನ್ನಾಗಿಸುತ್ತಿದೆ ಎನ್ನುವುದು ನಿಸ್ಸಂಶಯ. ದೇವಿಯೂ ಅಲೌಕಿಕಳೇ ಅನ್ನಿ. ಆದರೂ ಅಲೌಕಿಕ ಶಕ್ತಿಯ ಕಲ್ಪನೆ ಹೇಗಿರಬೇಕು. ಅವಳು ಕೋಪಿಷ್ಟಳಾಗಿಯೇ ಕಾಣಬೇಕೇ? ಅದಕ್ಕಿಂತ ಹೆಚ್ಚಾಗಿ ದರ್ಶನ ಎಂದು ರೂಢಿಯಲ್ಲಿ ಕರೆಯಲಾಗುವ ದೈಹಿಕ ಕಂಪನ ಉಂಟಾಗುವುದು ಪಾತ್ರಕ್ಕೆ ಅನಿವಾರ್ಯವೇ ? ದರ್ಶನವೂ  ಕೋಪದ ಉಚ್ಛ್ರಾಯ ಸ್ಥಿತಿಯೇ? ವಿಮರ್ಶೆಗೆ ಒಡ್ಡಬೇಕಾದ ವಿಷಯವೇ.
ಯಾರು ದೇವಿ? ಅವಳ ಸ್ವರೂಪವಾದರೂ ಹೇಗೆ? ಕೋಪ ಯಾವ ತೆರನದ್ದು ಎನ್ನುವುದನ್ನು ಯಕ್ಷಗಾನದ ಆಧಾರವಾದ ಪ್ರಸಂಗದಲ್ಲಿ ನೋಡಿದರೆ ಬಗ್ಗೆ ಹೆಚ್ಚಿನ ವಿಚಾರ ಸಿಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮೂಲವನ್ನೇ ಆಧಾರವಾಗಿರಿಸಿ ಪಾತ್ರ ಚಿತ್ರಣಮಾಡುವುದು ಶಿಷ್ಟಾಚಾರವೂ ಹೌದು, ಯುಕ್ತವೂ ಹೌದು. ಆದ್ದರಿಂದ ಇದಕ್ಕೆ ಮೂಲವಾದ ಮಾರ್ಕಂಡೇಯ ಪುರಾಣಕ್ಕೊಮ್ಮೆ ಕಣ್ಣು ಹಾಯಿಸೋಣ.
ಮಾರ್ಕಂಡೇಯ ಪುರಾಣಾಂತರ್ಗತವಾದ ಸಪ್ತಶತಿಯೆಂದು ಕರೆಯುವ ದೇವೀ ಮಾಹಾತ್ಮ್ಯೆಯ ಎರಡು, ಮೂರು, ನಾಲ್ಕನೇ ಅಧ್ಯಾಯಗಳು ಮಹಿಷಾಸುರನ ವಧಾ ಪ್ರಕರಣದ್ದು. ಎರಡನೇ ಅಧ್ಯಾಯವು; ವಿಷ್ಣುವೇ ಮೊದಲಾದ ದೇವತೆಗಳ ತೇಜಸ್ಸಿನಿಂದ  ಸಾನ್ನಿಧ್ಯದ ಸೃಷ್ಟಿಯೊಂದಿಗೆ ಅವಳ ಪ್ರತ್ಯಕ್ಷ, ದಿವ್ಯಶಕ್ತಿಗಳಿಂದಲೇ ಆಯುಧಗಳ ಪರಿಗ್ರಹಣ, ಮಹಿಷಾಸುರನ ಸೈನ್ಯದ ವಧೆಗಳು ಹೇಳಲ್ಪಟ್ಟರೆ ಮೂರನೇ ಅಧ್ಯಾಯವು ಮಹಿಷಾಸುರನ ವಧೆಗಾಗಿ ಮೀಸಲು. ಎರಡೂ ಅಧ್ಯಾಯದಲ್ಲೂ ದೇವಿಯು ಲೀಲೆಯಿಂದಲೇ ಕಾರ್ಯವನ್ನು ನೆರವೇರಿಸಿದಳು ಎಂದು ಹೇಳಲ್ಪಟ್ಟಿದೆ. (ಲೀಲಯೈವ ಪ್ರಚಿಚ್ಛೇದ ನಿಜಶಸ್ತ್ರಾಸ್ತ್ರ ವರ್ಷಿಣೀ - ಎರಡನೇ ಅಧ್ಯಾಯ, ತಸ್ಯ ಛಿತ್ವಾ ತತೋ ದೇವೀ ಲೀಲಯೈವ ಶರೋತ್ಕರಾನ್ - ಮೂರನೆಯ ಅಧ್ಯಾಯ). ಅವಳಿಗೆ ಮಹಿಷಾಸುರನಂತಹ ರಾಕ್ಷಸರೂ ನಗಣ್ಯ. ಹಾಗಾಗಿ ಪಟಹ, ಶಂಖ, ಮೃದಂಗ ಇತ್ಯಾದಿಗಳನ್ನು ಯುದ್ಧಮಹೋತ್ಸವದಲ್ಲಿ ನುಡಿಸುತ್ತಿದ್ದರು ಎಂದು ಎರಡನೇ ಅಧ್ಯಾಯದಲ್ಲಿ ಹೇಳಲ್ಪಟ್ಟಿದೆ. ಹಾಗಿರುವಾಗ ಅತಿಯಾದ ಕೋಪ ಇಲ್ಲವೆಂದಾಯಿತು.
ನಾಲ್ಕನೇ ಅಧ್ಯಾಯದಲ್ಲಿ ದೇವತೆಗಳ ಸ್ತುತಿ ಇದೆ. ಅದನ್ನು ಗಮನಿಸಿದರೂ ಇದೇ ಸ್ಪಷ್ಟವಾಗುತ್ತದೆ. "ಷತ್ಸಹಾಸಮಮಲಮ್ ಪರಿಪೂರ್ಣಚಂದ್ರಬಿಂಬಾನುಕಾರಿ ಕನಕೋತ್ತಮಕಾಂತಿ ಕಾಂತಮ್ ಅತ್ಯದ್ಭುತಮ್ ಪ್ರಹೃತಮಾತ್ತರುಷಾ ತಥಾಪಿ ವಕ್ತ್ರಮ್ ವಿಲೋಕ್ಯ ಸಹಸಾ ಮಹಿಷಾಸುರೇಣ" ಎನ್ನುವ ದೇವತೆಗಳ ವಾಕ್ಯ ಇದನ್ನು ತಿಳಿಸುತ್ತದೆ. ಅತೀಹೆಚ್ಚಿನ ಕೋಪವುಳ್ಳ ಮಹಿಷಾಸುರನ ಮುಖವನ್ನು ನೋಡಿಯೂ ಪರಿಪೂರ್ಣವಾದ ಚಂದ್ರನ ಬಿಂಬವನ್ನು ಅನುಸರಿಸುವ ಬಂಗಾರದ ಕಾಂತಿಯಿಂದ ಆಕರ್ಷಣೀಯವಾದ ಸ್ವಲ್ಪ ಮಾತ್ರ ನಗುವುಳ್ಳವಳು ಆಗಬೇಕಾದರೆ ಅವಳ ಮಹಿಷಾಸುರನ ಬಗೆಗಿನ ನಗಣ್ಯ ಭಾವವನ್ನು ನಮಗೇನೇ ಊಹಿಸಲು ಸಾಧ್ಯ. ಕಠಿಣವೆನಿಸಿದ ಸಂದರ್ಭದಲ್ಲಿ ಮಂದಹಾಸವು ಅಂತಹ ಸಂದರ್ಭಗಳಲ್ಲಿ ಮಾತ್ರವಲ್ಲವೇ ಹೊರಹೊಮ್ಮುವುದು. ಅಂತಹ ದೇವಿಗೆ ಮಹಿಷಾಸುರನನ್ನು ಕೊಲ್ಲುವಾಗಲೂ ದಯೆ ಎನ್ನುವುದು ಸ್ಥಾಯಿಯಾಗಿ ಇದ್ದು ಅವನಿಗೂ ಅನುಗ್ರಹಿಸುವವಳು . ಅದನ್ನೇ ದೇವತೆಗಳುವೈರಿಷ್ವಪಿ ಪ್ರಕಟಿತೈವ ದಯಾ ತ್ವಯೇತ್ಥಮ್ (ವೈರಿಗಳಲ್ಲೂ ಇಂತಹ ದಯೆಯು ನಿನ್ನಿಂದ ಪ್ರಕಟಿಸಲ್ಪಟ್ಟಿತು)’ ಎಂದು ಅಚ್ಚರಿಯಿಂದ ಅಂದರು.
ಇಂತಹ ಸರ್ವತಂತ್ರ ಸ್ವತಂತ್ರೆಯಾದ ದೇವಿಗೆ ಬರುವ ಕೋಪವಾದರೂ ಹೇಗಿರಬಹುದು ಎಂದು ನಾವೇ ಊಹಿಸಬಹುದು. ಲೌಕಿಕವಾಗಿಯೇ ನೋಡೋಣ. ಆರಕ್ಷಕರಿಗೆ (police) ಕಳ್ಳನಲ್ಲಿ ಕೋಪವೇ ಬರುವುದಾದರೂ ಅದು ಸಾತ್ವಿಕವಾದದ್ದು. ಕಳ್ಳ ನನಗಿಂತ ಸಾಮರ್ಥ್ಯವಂತನೆಂಬ ಭಾವದಿಂದಲೂ ಅಲ್ಲ, ಅವನಲ್ಲಿ ಕೋಪದಿಂದಲೂ ಅಲ್ಲ, ಅವನ ಕಳ್ಳತನದ ಮೇಲಿರುವ ವೈರದಿಂದ. ಆರಕ್ಷಕನೇ ಮತ್ತೊಬ್ಬ ಸಾತ್ವಿಕನಲ್ಲಿ ಅಷ್ಟೇ ಶಾಂತನಾಗಿ ವ್ಯವಹರಿಸುವುದಿಲ್ಲವೇ? ಅದರಂತೆ, ಅದು ಕಳ್ಳನಲ್ಲಿ ಕೋಪ ವ್ಯಕ್ತಪಡಿಸುವುದು, ಕೋಪ ಅವನಿಗೆ ಬರುವುದಲ್ಲ. ಇದನ್ನೇ ಸಾತ್ವಿಕ ಕೋಪ ಅನ್ನುವುದು. ಇದು ದೋಷವಲ್ಲ, ಗುಣ (merit).  ದೇವಿ ಅನಂತ ಕಲ್ಯಾಣಗುಣ ಪರಿಪೂರ್ಣೆ. ಅಂತಹ ಯಾವ ದೊಡ್ಡ ಅರ್ಹತೆಯೂ ಇಲ್ಲದ ಆರಕ್ಷನಿಗೇನೇ ರೀತಿ ವ್ಯಕ್ತಪಡಿಸಲಾಗುತ್ತದೆಯಾದರೆ ದೇವಿಗೆ ಇದು ಸ್ವಾಭಾವಿಕ ಎಂದೇ ತಿಳಿಯಬೇಕು.
ಇದೇ ಸತ್ಯವೆಂದು ಒಪ್ಪಿದಲ್ಲಿ ಇಡೀ ಜಗತ್ತನ್ನೇ ಸುಡುತ್ತೇನೆಂಬ ತೆರದ ದರ್ಶನದ ಕೋಪ ದೇವಿಗೆ ಹೇಗೆ ಬರಲು ಸಾಧ್ಯ. ಅವಳು ಮಾತೃಸ್ವರೂಪಿಣಿ. ಅವಳಲ್ಲಿ ಕೋಪಕ್ಕೆ ಕಾರಣವಿಲ್ಲ, ಆಡಂಬರಗಳ ವಾಸನೆ ಕಾಣುವುದಿಲ್ಲ. ಲೀಲೆ ಅವಳ ಸ್ವಭಾವಕ್ಕಾಗಿ ಉಪಕರಣವೆನಿಸಿದ್ದು. ಇಂತಹ ಪಾತ್ರಧಾರಿ ಹೆಚ್ಚು ಕೋಪಿಷ್ಟೆಯಾಗಿ ಕಾಣಕೂಡದು, ಹೆಚ್ಚು ಕುಣಿಯಲೂ ಕೂಡದು. ಇದನ್ನು ಚೆನ್ನಾಗಿ ತಿಳಿದ ಹಿರಿಯರು ಅಂತಹ ಪಾತ್ರಗಳಿಗೆ ಏರುಪದ್ಯದಲ್ಲೂ ಧೀಂಗಿಣ ಇಲ್ಲವೆಂದು ನಿರ್ಣಯಿಸಿದರು. ಕುಣಿಯಬಾರದೆಂದೇ  ನಿರ್ದೇಶಿಸಿದರುಮಾತೂ ದೀರ್ಘವಾಗಕೂಡದು. ಸೂತ್ರಗಳಂತೆ ವಾಗ್ದೇವಿಯ ನುಡಿಗಳಿರಬೇಕು. ಪ್ರಪಂಚ ಅದಕ್ಕೆ ವ್ಯಾಖ್ಯಾನಿಸಬೇಕು.
ಹೀಗೆ ನನಗನ್ನಿಸಿತು. ಅಂದೇ ಬಿಟ್ಟೆ. ಧನಾತ್ಮಕವಾಗಿ ಯೋಚಿಸಿದೆ. ಅದನ್ನು ಬರವಣಿಗೆಗೆ ತಂದೆ. ತಪ್ಪು ಇದ್ದರೆ ತಿಳಿಹೇಳಿ. ಪ್ರಾಮಾಣಿಕವಾಗಿ ವಿಮರ್ಶಿಸಿ ತಿದ್ದಿಕೊಳ್ಳಲು ಯತ್ನಿಸುತ್ತೇನೆ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
       Vidwan Sriharinarayanadasa Asranna, Kateelu

No comments:

Post a Comment