Friday, 3 July 2015

ಯಕ್ಷಗಾನವೆಂದರೆ ಅದ್ಭುತ

ಯಕ್ಷಗಾನವೆಂದರೆ ಅದ್ಭುತ. ಎಲ್ಲವೂ ನಿತ್ಯನೂತನ. ಸಮಗ್ರಕಾವ್ಯ. ಎಲ್ಲರೂ ಕವಿಗಳು. ಇಂತಹ ಕಾವ್ಯ ಜನಮನ್ನಣೆ ಪಡೆಯದೇ ಮತ್ತೆ ಯಾವುದು ಪಡೆದೀತು. ಇದರ ಅಗಾಧತೆಯನ್ನು ಮೆಲುಕು ಹಾಕೋಣ. ಅದರಿಂದ ಸಂತಸವನ್ನು ನೋಡೋಣ.
ಯಕ್ಷಗಾನದ ಪ್ರಸಂಗಕರ್ತ ಒಬ್ಬ ಯಾವುದೋ ಕಥೆಯನ್ನಾಧರಿಸಿ ಛಂದಸ್ಸಿನ ರಾಶಿಗಳನ್ನು ಹುಡುಕಿ, ಹೆಕ್ಕಿ, ಕವನಗಳನ್ನು ಬರೆಯುತ್ತಾನೆ. ಅವನ ಮನಃಸ್ಥಿತಿಯೇ ಉಳಿದವರಿಗಿಂತ ಪ್ರತ್ಯೇಕ. ಕವಿಗಳು ಸಾಮಾನ್ಯವಾಗಿ  ಕಾವ್ಯಗಳಲ್ಲಿ ಒಂದೇ ವೃತ್ತ ಯಾನೆ ಛಂದಸ್ಸನ್ನು ಬಳಸುತ್ತಾರೆ. ರಘುವಂಶ ಅನುಷ್ಟುಬ್ನಲ್ಲಿ ಇದ್ದರೆ ಇಂದ್ರವಜ್ರಾದಲ್ಲಿ ಕುಮಾರಸಂಭವ... ಹೀಗೆ ಸಂಸ್ಕೃತದಲ್ಲಿ ಕಂಡರೆ ಕುಮಾರವ್ಯಾಸ ಭಾಮಿನಿ ಷಟ್ಪದಿಯಲ್ಲಿ ಬರೆದರೆ ಹರಿಶ್ಚಂದ್ರ ತನ್ನ ಒಂದು ಕಾವ್ಯವನ್ನು ವಾರ್ಧಿಕ ಷಟ್ಪದಿಯಲ್ಲಿ...... ಹೀಗೆ ಕನ್ನಡದಲ್ಲಿ ಒಟ್ಟು ಕವಿಯ ಬರವಣಿಗೆಯ ಓಘ ಒಂದೇ ರೀತಿ ಇರುವುದು ಅವನಿಗೆ ರಸೋತ್ಕರ್ಷಕ್ಕೆ   ಸಹಕಾರಿ ಅನ್ನಬಹುದು. ಆದರೆ ಯಕ್ಷಗಾನದಲ್ಲಿಛಂದಸ್ಸು ಕ್ಷಣಕ್ಷಣಕ್ಕೆ ಬೇರೆಯೇ. ಅದರಲ್ಲೂ ಪೂರ್ಣವಾಗಿ ಸ್ವಾತಂತ್ರ್ಯ ಅವನಿಗಿಲ್ಲ. ರಸಗಳ ಬದಲಾವಣೆಗೆ ತಕ್ಕಂತೆ, ಪಾತ್ರಗಳ ಸ್ವರೂಪಕ್ಕೆ ತಕ್ಕಂತೆ ಬದಲಿಸಬೇಕು. ವಿಸ್ತಾರಕ್ಕೆ ಪುನಃ ಅವಕಾಶವಿಲ್ಲ. ಯಕ್ಷಗಾನದಲ್ಲಿ ಅದನ್ನು ವಿಸ್ತರಿಸುವವ ಇನ್ನೊಬ್ಬ. ಅವನೇ ಗದ್ಯಕವಿ ಎಂಬ ಹೆಗ್ಗಳಿಕೆಯ ಅರ್ಥಧಾರಿ. ಆದ್ದರಿಂದ ಅಷ್ಟರಲ್ಲೇ ಸೌಂದರ್ಯವೃದ್ಧಿ ಅವನ ಚಾಕಚಕ್ಯತೆ.
ಪ್ರಸಂಗಕರ್ತನ ಕೆಲಸ ಇಲ್ಲಿಗೆ ಮುಗಿಯಿತು. ಇನ್ನು ಭಾಗವತನದ್ದು. ಇದರಲ್ಲಿ ಎಷ್ಟು ಪದ್ಯಗಳನ್ನು ಭಾಗವತಿಗೆಗಾಗಿ, ಸಂದರ್ಭೋಚಿತವಾಗಿ ತೆಗೆದುಕೊಳ್ಳಬೇಕು. ಯಾವ ಪದ್ಯವನ್ನು ಯಾವ ರಾಗದಲ್ಲಿ ಹಾಡಬೇಕು. (ರಾಗದ ಭಾನೆಯಲ್ಲಿ) ......  ಯಾವ ಕಾಲಕ್ಕೆ ಯಾವ ಪಾತ್ರಕ್ಕೆ ಯಾವ ರೀತಿ ಹಾಡಿದರೆ ಚೆನ್ನ ಎನ್ನುವುದು ಅವನ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಹಾಗೆಂದು ಇವನಿಗೂ ನಿಗದಿ ಪಡಿಸಿದ ಸ್ವಾತಂತ್ರ್ಯವು ಹೆಚ್ಚೇನಿಲ್ಲ. ಇವ ಮುಮ್ಮೇಳದವನ ಕುಣಿತಕ್ಕೆ ಸ್ಪಂದಿಸಬೇಕು, ಹೇಳಿದ ಅರ್ಥಕ್ಕೆ ಕಿವಿಗೊಡಬೇಕು. ಪದ್ಯ ಎತ್ತಿಕೊಡುವಾಗ ಸಮಯ ಇಲ್ಲದಿದ್ದರೆ ಜಾಗಟೆಗೆ ಒಂದು ಬಲವಾದ ಪೆಟ್ಟು; ಮುಂದೆ ಸಾಗಿ ಎಂದು ಮುಮ್ಮೇಳದವನಿಗೆ ಸೂಚನೆ. ನಂತರದ ಪದ್ಯದ ಅರ್ಥವನ್ನೂ ಹಾರಿ ಮುಂದೆ ಹೋದರೆ ಅದಕ್ಕಿಂತ ಅನಂತರದ ಪದ್ಯ ಹೇಳುವ ಅನಿವಾರ್ಯತೆ. ಆದರೆ ಇವನೇ ನಿರ್ದೇಶಕ ಅನ್ನುವುದನ್ನು ಎಲ್ಲ ತಿಟ್ಟುಗಳೂ ಒಪ್ಪುತ್ತವೆ. ಒಪ್ಪಲೇಬೇಕು ಕೂಡ. ಬಡಗುತಿಟ್ಟಿನಲ್ಲಿ ಪ್ರಧಾನ ವೇಷಧಾರಿಯನ್ನು ಎರಡನೇ ವೇಷ ಅನ್ನುವುದು ರೂಢಿ. ಒಂದನೆಯವ ಭಾಗವತನೇ ಎಂದರ್ಥ. ಅವನ ಪ್ರತಿಭೆಯಿಂದಲೇ ಎಲ್ಲವೂ ನಡೆಯಬೇಕು.
ಮದ್ದಳೆಗಾರ ಅಂದರೆ ಮದ್ದಳೆ ಬಡಿಯುವವ ಯಾ ಚೆಂಡೆಯವ ಅನ್ನುವ ವ್ಯಕ್ತಿ.. ಅವ ಚೆಂಡೆಯನ್ನು ಭಾಗವತರ ಪದ್ಯ ಕೇಳುವಂತೆ ಭಾರಿಸಬೇಕು; ಕೆಲವು ಕಡೆ ಮದ್ದಳೆ ಪ್ರಧಾನವಾಗಿ ಕೇಳುವಂತೆ. ಮುಮ್ಮೇಳದ ಕುಣಿತದವನ ಹೆಜ್ಜೆಗೂ ಒಂದು ಕಣ್ಣು ಇಡಬೇಕು. ಅವನ ಅರ್ಥದ ಸಮಯದಲ್ಲೂ ಅವನ ಕಾಲು ಯಾ ಮಾತಿನ ಏರಿಳಿತಕ್ಕೆ ಘಾತ ಬಡಿಯಬೇಕುಹಾಗೆಯೇ ಮದ್ದಳೆಯವ ಕೂಡ ಅದೇ ರೀತಿ. ಆದರೆ ಇವರಿಬ್ಬರೂ ಭಾಗವತನ ಪದ್ಯ, ಮುಮ್ಮೇಳದವರ ನಡಿಗೆಯ ಜೊತೆಗೆ ತಮ್ಮ ಸ್ವಂತ ಛಾಪಿನಿಂದ ಕಾವ್ಯ ಸೌಂದರ್ಯವರ್ಧಕಗಳೆನಿಸಿದ ಗುಣಗಳ ಸ್ಥಾನದಲ್ಲಿ ಇರುವವರು.
ಇನ್ನು ಮುಮ್ಮೇಳ. ಆಯಾ ಪಾತ್ರಗಳನ್ನು ಹೊತ್ತ ಕಲಾವಿದರುಭಾಗವತರ ಭಾವ ತುಂಬುವ ಪದ್ಯಗಳಿಗೆ ಜೀವ ತುಂಬುವವರು; ಆಹಾರ್ಯದಿಂದ ಅಲೌಕಿಕ ಲೋಕಕ್ಕೆ ಒಯ್ಯುವವರು. ಅದಕ್ಕೆ ತಕ್ಕ ಸಾತ್ವಿಕ ಹಾಗೂ ಆಂಗಿಕ ಅಭಿನಯದಿಂದ ಪ್ರೇಕ್ಷಕನಿಗೆ ತಾದ್ರೂಪ್ಯ ಯಾ ಅಭೇದ ಸಂಬಂಧೇನ ರಸಾನುಭೂತಿಯನ್ನು ನೀಡುವವರು ; ನವರಸಗಳನ್ನು ಯಥಾಯೋಗ್ಯವಾಗಿ ಬಿಂಬಿಸುವವರು.
ಇಲ್ಲಿಗೆ ಮುಗಿಯಲಿಲ್ಲ.. ಯಕ್ಷಗಾನದಲ್ಲಿ ವಾಚಿಕದಲ್ಲೂ ರಸದೌತಣವನ್ನು ಉಣಬಡಿಸುವವರು ಅನ್ನಲೇಬೇಕು. "ಗದ್ಯಮ್ ಕವೀನಾಮ್ ನಿಕಷಮ್ ವದಂತಿ" ಅಂದರೆ ಗದ್ಯದಲ್ಲಿ ಕವಿಗಳಿಗೆ ಛಂದಸ್ಸಿನ ನಿಬಂಧನೆ ಇಲ್ಲದಿರುವುದರಿಂದ ತಮ್ಮ ಪದವಲ್ಲರಿಗಳ ಮೂಲಕ ರಸೋತ್ಕರ್ಷೆಯನ್ನು ಅವರ ಪ್ರತಿಭೆಯಿಂದ ತರಬಹುದಾಗಿದೆ. ಆದ್ದರಿಂದ ಅವರ ಪ್ರತಿಭೆಗೆ ಅಂದರೆ ಪ್ರತ್ಯುತ್ಪನ್ನ ಮತಿಗೆ ಗದ್ಯವೇ ಓರೆಗಲ್ಲು.. ಯಕ್ಷಗಾನವನ್ನು ನಿತ್ಯನೂತನ ಕಾವ್ಯವಾಗಿಸುವಲ್ಲಿ ಕಾರಣನಾಗುವ ಅರ್ಥಧಾರೀ ಕಲಾವಿದ ಯಕ್ಷಗಾನದಲ್ಲಿ ಇನ್ನೊಬ್ಬ ಕವಿ.
ರಾಮಾಯಣವನ್ನು ಬರೆದ ವಾಲ್ಮೀಕಿ ಆದಿ ಕವಿ. ಅದನ್ನು ಪುನಃ ಕಾವ್ಯವಾಗಿಸಿದವರ ಸಂಖ್ಯೆ ಗಣನೆಗೆ ಸಿಕ್ಕದ್ದು.. ಸಂಸ್ಕೃತದ ಭಾಸ, ಭವಭೂತಿಯಿಂದ ಹಿಡಿದು ಕನ್ನಡದ ಕುವೆಂಪು, ವೀರಪ್ಪ ಮೊಯಿಲಿ, ತುಳವಿನ ಮಂದಾರ ಕೇಶವ ಭಟ್ಟರು ಹೀಗೆ ..... ಯಕ್ಷಗಾನದ ಕವಿಗಳು ಅದಕ್ಕಿಂತಲೂ ಹೆಚ್ಚು ಅನ್ನಬಹುದು. ಶೇಣಿಯವರೇ ರಾಮಾಯಣದಲ್ಲಿ ಅದೆಷ್ಟು ಹೊಸಕವಿತ್ವದಿಂದ ನಿತ್ಯ ಹೊಸ ಚಿಂತನೆಯ ಕವಿಯಾಗಿದ್ದರೋ  ದೇವರಿಗೇನೇ ಗೊತ್ತು. ಹಾಗೆಯೇ ಅವರ ಭೀಷ್ಮಾರ್ಜುನದ ಭೀಷ್ಮ ಹಾಗೂ ರಾಮದಾಸ ಸಾಮಗರ ಭೀಷ್ಮ ಅಜಗಜಾಂತರದ್ದು. ಹಾಗೆಂದು ಎರಡೂ ಹೃದ್ಯ. ಅರ್ಥಗಳ ಮೂಲ ಪ್ರಸಂಗ ಕಾವ್ಯ ಒಂದಕ್ಷರವೂ ವ್ಯತ್ಯಾಸವಿಲ್ಲದ್ದು ಎನ್ನುವುದು ವಿಚಿತ್ರ.
ಸಾಹಿತ್ಯಸೂರಿ ರಾಜಶೇಖರ ತನ್ನ ಕಾವ್ಯಮೀಮಾಂಸೆಯಲ್ಲಿ ಕವಿತ್ವಕ್ಕೆ ಪ್ರತಿಭೆಯೇ ಪ್ರಧಾನ ಸಾಮಗ್ರಿ ಅಂದ. ಸಹೃದಯರೇ ಕಾವ್ಯಕ್ಕೆ ಪಾತ್ರ ಅಂದರು ವಿದ್ವಾಂಸರು. ಅಂತಹ ಪ್ರತಿಭೆಗಳನ್ನೇ ಆಮೂಲಾಗ್ರವಾಗಿ ತುಂಬಿದ ಯಕ್ಷಗಾನವನ್ನು ನಿತ್ಯನವೀನ ಕಾವ್ಯವನ್ನದೆ ಮತ್ತೇನನ್ನಬೇಕೋ ನಾನರಿಯೆ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
      Vidwan Sriharinarayanadasa Asranna, Kateelu

No comments:

Post a Comment