Thursday, 9 July 2015

ಯಕ್ಷಗಾನವೆಂಬ ತ್ರಿವೇಣೀ ಸಂಗಮ

  ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಕಲೆಯೇ. ಅಲ್ಲಿ ನಡೆಯುವುದು ಸಾಂಸ್ಕೃತಿಕ ಕಾರ್ಯಕ್ರಮವೇ ಯಾ ಮನೋರಂಜನಾ ಕಾರ್ಯಕ್ರಮವಿರಲಿ. ಬಿಡಿಸಿ ಹೇಳುವುದಾದಲ್ಲಿ ಅದು ಯಕ್ಷಗಾನವಿರಲಿ, ನಾಟಕವಿರಲಿ, ಭಕ್ತಿ ಸಂಗೀತವಿರಲಿ, ಭರತನಾಟ್ಯವೇ ಇರಲಿ ಅಥವಾ ಸಿನಿಮಾವೇ ಆಗಿರಲಿ ಯಾ ಕ್ಯಾಬರೆಯೇ ಇರಲಿ ಎಲ್ಲವೂ ಒಂದೇ-ಕಲಾರಾಧನೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮ. ಭಾರತದ ಅರ್ಥಾನುಸಂಧಾನವೇ ಈಗ ನಶಿಸಿ ಪಾಶ್ಚಾತ್ಯರ ಸಾಲಿಗೆ ಸೇರುವ, ಅವರನ್ನು ಒಪ್ಪುವ, ಅವರನ್ನೇ ಸಮರ್ಥಿಸುವ ಮನಃಸ್ಥಿತಿ ನಮ್ಮನ್ನು ಆವರಿಸಿದೆ ಅನ್ನಬೇಕಷ್ಟೇ.
         ನಮ್ಮ ಭಾಷೆ ಸಮಾನಾರ್ಥಕ ಶಬ್ದಗಳೂ ವಿಭಿನ್ನ ಅರ್ಥಗಳನ್ನು ಕೊಡುತ್ತವೆ. ಭಾರ್ಯಾ, ಪತ್ನೀ, ದ್ವಿತೀಯಾ ಹೆಂಡತಿಯ ಪರ್ಯಾಯ ಶಬ್ದಗಳಾದರೂ ಒಳಾರ್ಥ ಬೇರೆಯೇ ಇದ್ದಂತೆ. ಕಲೆ ಬೇರೆ, ಸಾಂಸ್ಕೃತಿಕ ಕಾರ್ಯಕ್ರಮ ಬೇರೆ, ಮನೋರಂಜನಾ ಕಾರ್ಯಕ್ರಮ ಬೇರೆ. ‘ಕಲೆ’ ಎಂದರೆ ಇಂಗ್ಲೀಷ್ನ ‘art’ ಅಲ್ಲ. ಅದು ‘ಚಿತ್ರ’ ಅನ್ನುವ ಅರ್ಥಕ್ಕೆ ಇರುವಂಥದ್ದು. ಅದನ್ನು ಬಳಸಿದರೆ ಚಿತ್ರಕಲೆ ಅನ್ನುವುದಕ್ಕೆ ಏನನ್ನಬೇಕು? ದ್ವಿರುಕ್ತಿಯೇ ಅನಿವಾರ್ಯ ಆಗಬೇಕು. ಏನೇ ಇರಲಿ; ಅರ್ಥವ್ಯತ್ಯಾಸಗಳನ್ನು ಮೆಲುಕು ಹಾಕೋಣ.
        ‘ಕಲಾ’ ಎನ್ನುವ ಸಂಸ್ಕೃತ ಪದ ಕನ್ನಡದಲ್ಲಿ ‘ಕಲೆ’ ಎಂದು ಉಚ್ಚರಿಸಲ್ಪಡುತ್ತದೆ. ‘ಕಮ್ ಲಾತಿ ಇತಿ ಕಲಾ’ ಅನ್ನುವುದು ಅದರ ನಿಷ್ಪತ್ತಿ. ‘ಕ’ ಎನ್ನುವ ಅಕ್ಷರಕ್ಕೆ ‘ಭಗವಂತ’ ಅನ್ನುವ ಅರ್ಥ. ಅವನನ್ನು ತರಿಸುತ್ತದೆ ಅನ್ನುವ ಅರ್ಥದಲ್ಲಿ ‘ಕಲಾ’ ಎನ್ನುವ ಪ್ರಯೋಗ ಇರುವುದು. ಹಾಗಾಗಿ ಭಗವತ್ತತ್ವದ ಬಗ್ಗೆ ಅರಿವು ಮೂಡಿಸದೆ ಇರುವ ಮಾಧ್ಯಮವನ್ನು ಕಲಾ ಅನ್ನುವುದೆಂತು? ಸರ್ವತ್ರ ಹೇಳಲ್ಪಡುವ ‘ಕಲಶ’ ಅನ್ನುವುದೂ ಇದೇ ಅರ್ಥದಲ್ಲಿ ಇರುವಂಥದ್ದು. ‘ಕಲಾಃ ಅಸ್ಮಿನ್ ಶೇರಂತೇ ಇತಿ ಕಲಶಃ’ ಅಂದರೆ ಭಗವಂತನನ್ನು ತರುವ ಪರಿಕರಗಳು ಅಲ್ಲಿ ಮಲಗುತ್ತವೆಯಾದ್ದರಿಂದ ಅದನ್ನು ‘ಕಲಶ’ ಅನ್ನುತ್ತೇವೆ. ಆಚಾರ್ಯ ಸ್ಥಾನದಲ್ಲಿರುವ ಪುರೋಹಿತ ಮಂತ್ರಗಳ ಮೂಲಕ ಕಲೆಗಳನ್ನು ಅಂದರೆ ಭಗವಂತನನ್ನು ತರುವ ಪರಿಕರಗಳನ್ನು ಸೃಷ್ಟಿ ಕ್ರಮದಲ್ಲಿ ಆವಾಹಿಸುತ್ತಾನೆ. (ಸೃಷ್ಟಿ ಸ್ಥಿತಿ, ಸಂಹಾರ ಎನ್ನುವ ಮೂರು ಕ್ರಮಗಳಲ್ಲಿ ಇವೆ.) ಅವುಗಳನ್ನು ದೇವರ ಬಿಂಬಕ್ಕೆ ಅಭಿಷೇಕ ಮಾಡಿ ಸ್ಥಿತಿ ಕ್ರಮದಿಂದ ಆ ಕಲೆಗಳನ್ನು ಆವಾಹಿಸಿದಾಗ ಅಲ್ಲಿ ಸೃಷ್ಟಿಯಾದ ಸಾನ್ನಿಧ್ಯವು ಸ್ಥಿತಿ ರೂಪದಲ್ಲಿ ಉಳಿಯುತ್ತದೆ. ಆದ್ದರಿಂದಲೇ ಅವುಗಳು ಕಲಸಾಗಳು. ಅದೇ ರೀತಿ ಭಗವತ್ತತ್ವವನ್ನು ತರುವ ಪರಿಕರಗಳನ್ನು ‘ಕಲಾ’  ಅಥವಾ ‘ಕಲೆ’ ಅನ್ನುತ್ತೇವೆ. ಹೀಗೆ ಭಗವದ್ ಪ್ರೀತಿಗಾಗಿ ಅಲ್ಲದೆ ಇರುವ ಮಾಧ್ಯಮಗಳಿಗೆ ‘ಕಲೆ’ ಅನ್ನಲಾಗುವುದೇ ಇಲ್ಲ.  ಭಗವದ್ ಪ್ರೀತಿಗಾಗಿ ಅಂದರೆ ಕೇವಲ ‘ಸೇವೆ’ ಎಂದರ್ಥವಲ್ಲ. ರಾಮನ ಹಾಗೆ ವ್ಯವಹರಿಸುವುದು ಸೂಕ್ತ ಎಂದು ಜನರು ಅರ್ಥೈಸಿ ಧರ್ಮ ಮಾರ್ಗದಲ್ಲಿ ನಡೆದಲ್ಲಿ ಅದು ಭಗವದ್ ಪ್ರೀತಿಗಾಗಿ ಅನ್ನಬೇಕು. ಸ್ಮೃತಿಗಳ ಭಾವಾರ್ಥಗಳನ್ನು ರೂಢಿಸಿಕೊಳ್ಳುವುದು ಜೀವನಕ್ರಮದಲ್ಲಿ ಎಂದರ್ಥ. ಅಂಥವುಗಳೆಲ್ಲ ಕಲೆ ಅನ್ನಿಸಲ್ಪಡುತ್ತವೆ.
          ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು. ಆಯಾ ಊರಿಗೆ ಸಂಬಂಧಿಸಿದಂತೆ ಒಂದೊಂದು ಸಂಸ್ಕೃತಿ ಇರುವುದು ಸಹಜ. ಉದಾಹರಣೆಗೆ ಕೊಡಗಿನವರ ಸೀರೆ ಉಡುವ ಕ್ರಮವೇ ಬೇರೆ. ದಕ್ಷಿಣಕನ್ನಡದವರ ಕ್ರಮವೇ ಬೇರೆ. ಬೆಂಗಳೂರಿನವರದ್ದು ಮತ್ತೊಂದು ಕ್ರಮ. ಬ್ರಾಹ್ಮಣರು ಹಿರಿಯವರಿಗೆ ನಮಸ್ಕರಿಸುವ ಕ್ರಮವೇ ಬೇರೆ. ಇತರರಿಗೆ ಗೋತ್ರಾಭಿವಂದನೆ ಇಲ್ಲದಿರುವುದರಿಂದ ಅವರ ಕ್ರಮವೇ ಬೇರೆ. ಯಾರಾದರೂ ನಮಗೆ ಸೆಲ್ಯೂಟ್ ಹೊಡೆದರೆ ನಾವೇ ಕೇಳುತ್ತೇವೆ ನೀನೇನು ಪೋಲೀಸ? ಎಂದು. ಹೀಗೆ..... ಎರಡನೇ ಮದುವೆ ಹೆಣ್ಣಿಗೆ ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಬೇರೆಡೆ ಇಲ್ಲದಿರುವುದು ನಮ್ಮ ಹಿಂದಿನ ಸಂಸ್ಕೃತಿ. ಡೈವರ್ಸ್ ನಮ್ಮ ಸಂಸ್ಕೃತಿಯಲ್ಲ. ಇಂತಹ ಸಂದೇಶಗಳನ್ನು ಸಾರುವ ಮಾಧ್ಯಮಗಳು ಸಾಂಸ್ಕೃತಿಕ ಅನ್ನಿಸಲ್ಪಡುತ್ತವೆ. ಇದು ಕಲೆಯೊಂದಿಗೆ ಕೆಲವೊಮ್ಮೆ ಸೇರಿಕೊಂಡಿರುತ್ತವೆ, ಕೆಲವೊಮ್ಮೆ ಇಲ್ಲ.
        ಮೂರನೆಯದು ಮನೋರಂಜನಾ ಕಾರ್ಯಕ್ರಮ. ಇದಕ್ಕೆ ಯಾವ ಕಡಿವಾಣವೂ ಇಲ್ಲ. ಅವನವನ ಮನಃಸ್ಥಿತಿಗೆ ಸರಿಯಾಗಿ ಅವನಿಗೆ ಇಷ್ಟವಾಗುವುದೆಲ್ಲ ಮನೋರಂಜನೆಯ ಮಾಧ್ಯಮ ಅನ್ನಿಸಲ್ಪಡುತ್ತದೆ. ಇದು ಈಗಿನ ಅಶ್ಲೀಲ ಸಾಹಿತ್ಯ, ಅಶ್ಲೀಲ ಕುಣಿತ, ಅಶ್ಲೀಲ ಹಾಸ್ಯ ಎಲ್ಲವೂ ಆಗುತ್ತವೆ. ಈಗಿನ ಚಲನಚಿತ್ರಗಳಲ್ಲಿ ಕುಡಿತದ ದುರಭ್ಯಾಸವುಳ್ಳ ನಾಯಕನ ಆ ಕ್ರಿಯೆ ತಪ್ಪು ಎಂದು ಚಿತ್ರಿಸುವುದೇ ಇಲ್ಲ. ಅದರ ಅಭಿರುಚಿಯುಳ್ಳ ಪ್ರೇಕ್ಷಕನಿಗೆ ಆ ಮಾಧ್ಯಮ ಮನೋರಂಜನಾ ಕಾರ್ಯಕ್ರಮವಂತೂ ಹೌದೇ ಹೌದು. ಆದರೆ ಅದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಕಲೆಯಂತೂ ಅಲ್ಲವೇ ಅಲ್ಲ. ವಿಪರ್ಯಾಸವೆಂದರೆ  ದೇವಸ್ಥಾನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಹೇಳಿ ಅಶ್ಲೀಲ ಸಾಹಿತ್ಯವುಳ್ಳ ಚಲನಚಿತ್ರಗಳಿಗೆ ಕುಣಿಯುವುದನ್ನೂ ನಾವು ಕಾಣುತ್ತೆವೆ. ಹೇಳಿದರೆ ಆಗದ್ದು ಹೋಗದ್ದು ಮಾತನಾಡುವವರು ಎಂದು ನಮಗೇ ಬಿರುದು.
          ಮನೋರಂಜನಾ  ಕಾರ್ಯಕ್ರಮಗಳು ಸಂಸ್ಕೃತಿಯನ್ನು ಬಿಂಬಿಸುವಂತಿದ್ದರೆ ಅದನ್ನು ಸಾಂಸ್ಕೃತಿಕ ಕಾರ್ಯಕ್ರಮವೆಂದು ಅನ್ನಬಹುದು. ಭಾವಗೀತೆಗಳು, ಜಾನಪದ ಗೀತೆಗಳು, ಅವುಗಳಿಗೆ ಸಂಬಂಧಿಸಿದ ನೃತ್ಯಗಳು.... ಹೀಗೆ.. ಅವುಗಳೇ ಭಗವತ್ತತ್ವ ಪ್ರತಿಪಾದಕಗಳಾದರೆ ಅವುಗಳನ್ನೇ ‘ಕಲೆ’ ಎಂದೂ ಅನ್ನಬಹುದು. ಉದಾಹರಣೆಗೆ ಭಕ್ತಿಗೀತೆ, ಕೀರ್ತನೆಗಳು ಅವುಗಳನ್ನೇ ಸಾಹಿತ್ಯವಾಗಿಸಿದ ಭರತನಾಟ್ಯ, ಇತ್ಯಾದಿ. ಅವಾಗ ಕಲೆ, ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ ಎನ್ನುವುದು ಒಂದೇ ಅನ್ನಲ್ಪಡುತ್ತದೆ.
       ಲಕ್ಷಣವನ್ನು ಹೇಳಿದಲ್ಲಿ ಲಕ್ಷ್ಯವನ್ನು ಹೇಳುವಾಗ ಎಷ್ಟು ವಿವರಣೆ ಬೇಕು ನೋಡಿ. ಆದರೆ ನಮಗೆ ದೊಡ್ಡ ವಿಷಯವೇ ಅಲ್ಲ. ಯಾಕೆಂದರೆ ನಾವು ಕರಾವಳಿಯವರು. ನಮಗೆ ಈ ಲಕ್ಷಣಗಳನ್ನು ಹೇಳಿದರೆ ಲಕ್ಷ್ಯದ ಹುಡುಕಾಟದ ಪ್ರಮೇಯವೇ ಬರುವುದಿಲ್ಲ. ನೇರ ಅನ್ನುತ್ತಾರೆ ‘ಯಕ್ಷಗಾನ’ ಎಂದು. ಅಂತಹ ಸರ್ವಾಂಗ ಸುಂದರ  ಕಲೆ, ಸರ್ವಾಂಗ ಸುಂದರ ಸಾಂಸ್ಕೃತಿಕ ಕಾರ್ಯಕ್ರಮ, ಸರ್ವಾಂಗ ಸುಂದರ ಮನೋರಂಜನಾ ಕಾರ್ಯಕ್ರಮ ಇನ್ನೊಂದಿಲ್ಲ ಅಂತ ಕಣ್ಮುಚ್ಚಿ ಅನ್ನಬಹುದು. ಯಾಕೆಂದರೆ ನಮಗೆ ಕಣ್ಣುಮುಚ್ಚುವ ಸಮಯದಲ್ಲಿ ತೆರೆಸಿ ಕೂರಿಸುವಷ್ಟು ಮನೋರಂಜನೆ ಅದರಲ್ಲಿ ದೊರಕುತ್ತದೆ. ಇಲ್ಲಿನ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ತಿಳಿಸಿ ನಿರಕ್ಷರಕುಕ್ಷಿಯೂ ಕ್ರಮಬದ್ಧ ಜೀವನದ ಮೂರ್ತಸ್ವರೂಪನೆನಿಸಿಕೊಂಡಿದ್ದಾನೆ. ಆದ್ದರಿಂದಲೇ ಇದು ಸಾಂಸ್ಕೃತಿಕ ಕಾರ್ಯಕ್ರಮ. ವಿದ್ಯೆ ಕಲಿಯದವನೂ ಧರ್ಮದ, ದೇವರ ತತ್ತ್ವಗಳನ್ನು ಹೇಳಬಲ್ಲವನಾಗಿದ್ದಾನೆ. ಅದೂ ಬಾಯಿಪಾಠವಲ್ಲದೆ ಯಕ್ಷಗಾನದ ಶ್ರವಣ ಮತ್ತು ಅದರ ಮನನಗಳಿಂದ. ಆದ್ದರಿಂದ ಇದು ಕಲೆ.
     ಇಂತಹ ಕಲೆ, ಸಾಂಸ್ಕೃತಿಕ/ಮನೋರಂಜನಾ ಕಾರ್ಯಕ್ರಮಗಳ ತ್ರಿವೇಣೀ ಸಂಗಮ ಎನಿಸಿದ ಕರಾವಳಿಯ ನೆಲದಲ್ಲಿ ಹುಟ್ಟಿದ ನಾವು ನಮ್ಮ ಭೂಮಿಯನ್ನು ‘ಸ್ವರ್ಗಾದಪಿ ಗರೀಯಸೀ’ ಅನ್ನದೆ ಏನನ್ನಬೇಕು. ಧನ್ಯರು ನಾವು.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು
    
Vidwan Sriharinarayanadasa Asranna, Kateelu

No comments:

Post a Comment