Sunday, 22 November 2015

ಯಕ್ಷಗಾನದಲ್ಲಿ ದೇವಿ ಭಾಗ 1, 2, 3

ಯಕ್ಷಗಾನ ದೇವಿ ಭಾಗ

ಚಂಡಮುಂಡರ ಪಾತ್ರ ಗೌರವದ ಕುರಿತು ಆಡುವಾಗ ದೇವಿಗೆ ಕಾಯಕಲ್ಪ ಆಗಬೇಕು ಅನ್ನುವ ಅಭಿಪ್ರಾಯ ಬಂತು. ಇಂದೇನೋ ಇದಕ್ಕೆ ಸ್ವಲ್ಪ ಬರವಣಿಗೆಯ ಸ್ವರೂಪ ಕೊಡೋಣ ಅನ್ನಿಸಿತು.  ಅದಕ್ಕೊಂದು ಮಾತು.
ದೇವೀ ಮಾಹಾತ್ಮ್ಯೆ ಯಕ್ಷಗಾನದಲ್ಲಿ ವಿಜೃಂಭಿಸುವುದು ಮಧ್ಯಮಚರಿತೆ ಅಂದರೆ ಮಹಿಷಾಸುರನನ್ನು ಕೊಲ್ಲುವ ದೇವಿಯ ಕಥೆ. ಆದಿಮಾಯೆಯ ಪ್ರಕರಣದ ದೇವಿಯ ಕಲ್ಪನೆಗೆ ಯಕ್ಷಗಾನದಲ್ಲಿ ಅಂತಹ ಮಹತ್ತ್ವವನ್ನು ನೀಡಿಲ್ಲ. ಅವಳನ್ನು ಆದಿಮಾಯೆ ಎಂದೇ ಕರೆದು ಮುಗಿಸುತ್ತಾರೆ. ಇರಲಿ ಬಿಡಿ, ಆದರೆ ಮಹಿಷಾಸುರನನ್ನು ಕೊಲ್ಲುವ ದೇವಿಯ ಬಗ್ಗೆ ಹಲವಾರು ಕಲ್ಪನೆಗಳಿವೆ. ಅದು ಪಾತ್ರವನ್ನು ಹಿರಿದುಗೊಳಿಸಿ ಅಲೌಕಿಕವನ್ನಾಗಿಸುತ್ತಿದೆ ಎನ್ನುವುದು ನಿಸ್ಸಂಶಯ. ದೇವಿಯೂ ಅಲೌಕಿಕಳೇ ಅನ್ನಿ. ಆದರೂ ಅಲೌಕಿಕ ಶಕ್ತಿಯ ಕಲ್ಪನೆ ಹೇಗಿರಬೇಕು. ಅವಳು ಕೋಪಿಷ್ಟಳಾಗಿಯೇ ಕಾಣಬೇಕೇ? ಅದಕ್ಕಿಂತ ಹೆಚ್ಚಾಗಿ ದರ್ಶನ ಎಂದು ರೂಢಿಯಲ್ಲಿ ಕರೆಯಲಾಗುವ ದೈಹಿಕ ಕಂಪನ ಉಂಟಾಗುವುದು ಪಾತ್ರಕ್ಕೆ ಅನಿವಾರ್ಯವೇ ? ದರ್ಶನವೂ  ಕೋಪದ ಉಚ್ಛ್ರಾಯ ಸ್ಥಿತಿಯೇ? ವಿಮರ್ಶೆಗೆ ಒಡ್ಡಬೇಕಾದ ವಿಷಯವೇ.
ಯಾರು ದೇವಿ? ಅವಳ ಸ್ವರೂಪವಾದರೂ ಹೇಗೆ? ಕೋಪ ಯಾವ ತೆರನದ್ದು ಎನ್ನುವುದನ್ನು ಯಕ್ಷಗಾನದ ಆಧಾರವಾದ ಪ್ರಸಂಗದಲ್ಲಿ ನೋಡಿದರೆ ಬಗ್ಗೆ ಹೆಚ್ಚಿನ ವಿಚಾರ ಸಿಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮೂಲವನ್ನೇ ಆಧಾರವಾಗಿರಿಸಿ ಪಾತ್ರ ಚಿತ್ರಣ ಮಾಡುವುದು ಶಿಷ್ಟಾಚಾರವೂ ಹೌದು, ಯುಕ್ತವೂ ಹೌದು. ಆದ್ದರಿಂದ ಇದಕ್ಕೆ ಮೂಲವಾದ ಮಾರ್ಕಂಡೇಯ ಪುರಾಣಕ್ಕೊಮ್ಮೆ ಕಣ್ಣು ಹಾಯಿಸೋಣ.
ಮಾರ್ಕಂಡೇಯ ಪುರಾಣಾಂತರ್ಗತವಾದ ಸಪ್ತಶತಿಯೆಂದು ಕರೆಯುವ ದೇವೀ ಮಾಹಾತ್ಮ್ಯೆಯ ಎರಡು, ಮೂರು, ನಾಲ್ಕನೇ ಅಧ್ಯಾಯಗಳು ಮಹಿಷಾಸುರನ ವಧಾ ಪ್ರಕರಣದ್ದು. ಎರಡನೇ ಅಧ್ಯಾಯವು; ವಿಷ್ಣುವೇ ಮೊದಲಾದ ದೇವತೆಗಳ ತೇಜಸ್ಸಿನಿಂದ  ಸಾನ್ನಿಧ್ಯದ ಸೃಷ್ಟಿಯೊಂದಿಗೆ ಅವಳ ಪ್ರತ್ಯಕ್ಷ, ದಿವ್ಯಶಕ್ತಿಗಳಿಂದಲೇ ಆಯುಧಗಳ ಪರಿಗ್ರಹಣ, ಮಹಿಷಾಸುರನ ಸೈನ್ಯದ ವಧೆಗಳು ಹೇಳಲ್ಪಟ್ಟರೆ ಮೂರನೇ ಅಧ್ಯಾಯವು ಮಹಿಷಾಸುರನ ವಧೆಗಾಗಿ ಮೀಸಲು. ಎರಡೂ ಅಧ್ಯಾಯದಲ್ಲೂ ದೇವಿಯು ಲೀಲೆಯಿಂದಲೇ ಕಾರ್ಯವನ್ನು ನೆರವೇರಿಸಿದಳು ಎಂದು ಹೇಳಲ್ಪಟ್ಟಿದೆ. (ಲೀಲಯೈವ ಪ್ರಚಿಚ್ಛೇದ ನಿಜಶಸ್ತ್ರಾಸ್ತ್ರ ವರ್ಷಿಣೀ - ಎರಡನೇ ಅಧ್ಯಾಯ, ತಸ್ಯ ಛಿತ್ವಾ ತತೋ ದೇವೀ ಲೀಲಯೈವ ಶರೋತ್ಕರಾನ್ - ಮೂರನೆಯ ಅಧ್ಯಾಯ). ಅವಳಿಗೆ ಮಹಿಷಾಸುರನಂತಹ ರಾಕ್ಷಸರೂ ನಗಣ್ಯ. ಹಾಗಾಗಿ ಪಟಹ, ಶಂಖ, ಮೃದಂಗ ಇತ್ಯಾದಿಗಳನ್ನು ಯುದ್ಧ ಮಹೋತ್ಸವದಲ್ಲಿ ನುಡಿಸುತ್ತಿದ್ದರು ಎಂದು ಎರಡನೇ ಅಧ್ಯಾಯದಲ್ಲಿ ಹೇಳಲ್ಪಟ್ಟಿದೆ. ಹಾಗಿರುವಾಗ ಅತಿಯಾದ ಕೋಪ ಇಲ್ಲವೆಂದಾಯಿತು.
ನಾಲ್ಕನೇ ಅಧ್ಯಾಯದಲ್ಲಿ ದೇವತೆಗಳ ಸ್ತುತಿ ಇದೆ. ಅದನ್ನು ಗಮನಿಸಿದರೂ ಇದೇ ಸ್ಪಷ್ಟವಾಗುತ್ತದೆ. "ಷತ್ಸಹಾಸಮಮಲಮ್ ಪರಿಪೂರ್ಣಚಂದ್ರಬಿಂಬಾನುಕಾರಿ ಕನಕೋತ್ತಮಕಾಂತಿ ಕಾಂತಮ್ ಅತ್ಯದ್ಭುತಮ್ ಪ್ರಹೃತಮಾತ್ತರುಷಾ ತಥಾಪಿ ವಕ್ತ್ರಮ್ ವಿಲೋಕ್ಯ ಸಹಸಾ ಮಹಿಷಾಸುರೇಣ" ಎನ್ನುವ ದೇವತೆಗಳ ವಾಕ್ಯ ಇದನ್ನು ತಿಳಿಸುತ್ತದೆ. ಅತೀ ಹೆಚ್ಚಿನ ಕೋಪವುಳ್ಳ ಮಹಿಷಾಸುರನ ಮುಖವನ್ನು ನೋಡಿಯೂ ಪರಿಪೂರ್ಣವಾದ ಚಂದ್ರನ ಬಿಂಬವನ್ನು ಅನುಸರಿಸುವ ಬಂಗಾರದ ಕಾಂತಿಯಿಂದ ಆಕರ್ಷಣೀಯವಾದ ಸ್ವಲ್ಪ ಮಾತ್ರ ನಗುವುಳ್ಳವಳು ಆಗಬೇಕಾದರೆ ಅವಳ ಮಹಿಷಾಸುರನ ಬಗೆಗಿನ ನಗಣ್ಯ ಭಾವವನ್ನು ನಮಗೇನೇ ಊಹಿಸಲು ಸಾಧ್ಯ. ಕಠಿಣವೆನಿಸಿದ ಸಂದರ್ಭದಲ್ಲಿ ಮಂದಹಾಸವು ಅಂತಹ ಸಂದರ್ಭಗಳಲ್ಲಿ ಮಾತ್ರವಲ್ಲವೇ ಹೊರಹೊಮ್ಮುವುದು. ಅಂತಹ ದೇವಿಗೆ ಮಹಿಷಾಸುರನನ್ನು ಕೊಲ್ಲುವಾಗಲೂ ದಯೆ ಎನ್ನುವುದು ಸ್ಥಾಯಿಯಾಗಿ ಇದ್ದು ಅವನಿಗೂ ಅನುಗ್ರಹಿಸುವವಳು . ಅದನ್ನೇ ದೇವತೆಗಳುವೈರಿಷ್ವಪಿ ಪ್ರಕಟಿತೈವ ದಯಾ ತ್ವಯೇತ್ಥಮ್ (ವೈರಿಗಳಲ್ಲೂ ಇಂತಹ ದಯೆಯು ನಿನ್ನಿಂದ ಪ್ರಕಟಿಸಲ್ಪಟ್ಟಿತು)’ ಎಂದು ಅಚ್ಚರಿಯಿಂದ ಅಂದರು.
ಇಂತಹ ಸರ್ವತಂತ್ರ ಸ್ವತಂತ್ರೆಯಾದ ದೇವಿಗೆ ಬರುವ ಕೋಪವಾದರೂ ಹೇಗಿರಬಹುದು ಎಂದು ನಾವೇ ಊಹಿಸಬಹುದು. ಲೌಕಿಕವಾಗಿಯೇ ನೋಡೋಣ. ಆರಕ್ಷಕರಿಗೆ (police) ಕಳ್ಳನಲ್ಲಿ ಕೋಪವೇ ಬರುವುದಾದರೂ ಅದು ಸಾತ್ವಿಕವಾದದ್ದು. ಕಳ್ಳ ನನಗಿಂತ ಸಾಮರ್ಥ್ಯವಂತನೆಂಬ ಭಾವದಿಂದಲೂ ಅಲ್ಲ, ಅವನಲ್ಲಿ ಕೋಪದಿಂದಲೂ ಅಲ್ಲ, ಅವನ ಕಳ್ಳತನದ ಮೇಲಿರುವ ವೈರದಿಂದ. ಆರಕ್ಷಕನೇ ಮತ್ತೊಬ್ಬ ಸಾತ್ವಿಕನಲ್ಲಿ ಅಷ್ಟೇ ಶಾಂತನಾಗಿ ವ್ಯವಹರಿಸುವುದಿಲ್ಲವೇ? ಅದರಂತೆ, ಅದು ಕಳ್ಳನಲ್ಲಿ ಕೋಪ ವ್ಯಕ್ತಪಡಿಸುವುದು, ಕೋಪ ಅವನಿಗೆ ಬರುವುದಲ್ಲ. ಇದನ್ನೇ ಸಾತ್ವಿಕ ಕೋಪ ಅನ್ನುವುದು. ಇದು ದೋಷವಲ್ಲ, ಗುಣ (merit).  ದೇವಿ ಅನಂತ ಕಲ್ಯಾಣಗುಣ ಪರಿಪೂರ್ಣೆ. ಅಂತಹ ಯಾವ ದೊಡ್ಡ ಅರ್ಹತೆಯೂ ಇಲ್ಲದ ಆರಕ್ಷನಿಗೇನೇ ರೀತಿ ವ್ಯಕ್ತಪಡಿಸಲಾಗುತ್ತದೆಯಾದರೆ ದೇವಿಗೆ ಇದು ಸ್ವಾಭಾವಿಕ ಎಂದೇ ತಿಳಿಯಬೇಕು.
ಇದೇ ಸತ್ಯವೆಂದು ಒಪ್ಪಿದಲ್ಲಿ ಇಡೀ ಜಗತ್ತನ್ನೇ ಸುಡುತ್ತೇನೆಂಬ ತೆರದ ದರ್ಶನದ ಕೋಪ ದೇವಿಗೆ ಹೇಗೆ ಬರಲು ಸಾಧ್ಯ. ಅವಳು ಮಾತೃಸ್ವರೂಪಿಣಿ. ಅವಳಲ್ಲಿ ಕೋಪಕ್ಕೆ ಕಾರಣವಿಲ್ಲ, ಆಡಂಬರಗಳ ವಾಸನೆ ಕಾಣುವುದಿಲ್ಲ. ಲೀಲೆ ಅವಳ ಸ್ವಭಾವಕ್ಕಾಗಿ ಉಪಕರಣವೆನಿಸಿದ್ದು. ಇಂತಹ ಪಾತ್ರಧಾರಿ ಹೆಚ್ಚು ಕೋಪಿಷ್ಟೆಯಾಗಿ ಕಾಣಕೂಡದು, ಹೆಚ್ಚು ಕುಣಿಯಲೂ ಕೂಡದು. ಇದನ್ನು ಚೆನ್ನಾಗಿ ತಿಳಿದ ಹಿರಿಯರು ಅಂತಹ ಪಾತ್ರಗಳಿಗೆ ಏರುಪದ್ಯದಲ್ಲೂ ಧೀಂಗಿಣ ಇಲ್ಲವೆಂದು ನಿರ್ಣಯಿಸಿದರು. ಕುಣಿಯಬಾರದೆಂದೇ ನಿರ್ದೇಶಿಸಿದರು. ಮಾತೂ ದೈರ್ಘವಾಗಕೂಡದು. ಸೂತ್ರಗಳಂತೆ ವಾಗ್ದೇವಿಯ ನುಡಿಗಳಿರಬೇಕು. ಪ್ರಪಂಚ ಅದಕ್ಕೆ ವ್ಯಾಖ್ಯಾನಿಸಬೇಕು.
ಹೀಗೆ ನನಗನ್ನಿಸಿತು. ಅಂದೇ ಬಿಟ್ಟೆ. ಧನಾತ್ಮಕವಾಗಿ ಯೋಚಿಸಿದೆ. ಅದನ್ನು ಬರವಣಿಗೆಗೆ ತಂದೆ. ತಪ್ಪು ಇದ್ದರೆ ತಿಳಿಹೇಳಿ. ಪ್ರಾಮಾಣಿಕವಾಗಿ ವಿಮರ್ಶಿಸಿ ತಿದ್ದಿಕೊಳ್ಳಲು ಯತ್ನಿಸುತ್ತೇನೆ.

ಭಾಗ-
ನಿನ್ನೆಯ ದಿನ ದೇವೀಪಾತ್ರದ ಬಗ್ಗೆ ಒಂದಿಷ್ಟು ಅಂದಿದ್ದೆ. ಅದಕ್ಕೆ ಹಲವಾರು ಧನಾತ್ಮಕ ಪ್ರತಿಕ್ರಿಯೆ ಬಂದಿತ್ತು. ಅದರೊಂದಿಗೆ ಕೆಲವು ಪೂರ್ವಪಕ್ಷಗಳೂ ಬಂದಿದ್ದವು. ಇದೂ ಧನಾತ್ಮಕಗಳೆ ಅನ್ನಿ. ಅವುಗಳಲ್ಲಿ ಕೆಲವು ವೇದಿಕೆ ಸದಸ್ಯರಿಂದ ಬಂದದ್ದಿದ್ದರೆ ಕೆಲವು ಬೇರೆ ವೇದಿಕೆಗೆ ಹೋಗಿ ಅಲ್ಲಿಂದ ಪುನಃ ಅನಿಸಿಕೆಗಳು ಬಂದವು. ನನ್ನ ಅಣ್ಣ ಪ್ರಸಾದ ಆಸ್ರಣ್ಣರೂ ಬಗ್ಗೆ ಪೂರ್ವಪಕ್ಷವನ್ನು ಮಂಡಿಸಿ ಹರಸಿದ್ದಾರೆ. ಸಹೃದಯ ಕಲಾವಿದ ಶಶಿಕಾಂತ ಶೆಟ್ಟರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೆಳೆಯರಾದ ನಟೇಶರೂ ಕೂಡ. ಬೊಟ್ಟಿಕೆರೆ ಪೂಂಜರು, ಅಂಡಾಲರು ಸಹಮತವನ್ನೂ ವ್ಯಕ್ತಪಡಿಸಿದ್ದಾರೆ. ಹೀಗೆ ಪರ ವಿರೋಧಗಳಿಗೆ ನನ್ನ ಮತಿಯ ಸಾಮರ್ಥ್ಯಕ್ಕನುಸಾರವಾಗಿ ಉತ್ತರಿಸಲು ಪ್ರಯತ್ನಿಸುತ್ತೇನೆ.
ಯಾವುದೇ ಕಾವ್ಯವು ನವರಸಗಳಿಂದ ಕೂಡಿದಲ್ಲಿ ಅದು ಸಹೃದಯರ ಮನ್ನಣೆಗೆ ಪಾತ್ರವಾಗುತ್ತದೆ. ಯಾಕೆಂದರೆ ಕಾವ್ಯವು ರಸೈಕನಿಷ್ಟವಾದುದು. ಅದು ಬರೀ ವೀರರಸದ ಕಾವ್ಯವಲ್ಲ, ರೌದ್ರದ್ದೂ ಅಲ್ಲ. ಹಾಗಿದ್ದಲ್ಲಿ ಅದು ಕಾವ್ಯವಾಗಿ ಅಹ್ಲಾದಕಾರಿ ಆಗಿ ಉಳಿಯುವುದೂ ಇಲ್ಲ. ಹಾಗೆಂದು ನವರಸಗಳೂ ಪ್ರಧಾನವಾದವುಗಳು ಅಲ್ಲ ; ಒಂದೊಂದು ಕಾವ್ಯಕ್ಕೂ ಒಂದು ಪ್ರಧಾನ ರಸ ಇರುತ್ತದೆ. ಅದನ್ನು ಅಂಗೀರಸ ಎನಿಸಲ್ಪಡುತ್ತದೆ. ಉಳಿದವುಗಳು ಅಂಗರಸಗಳು. ಅಂಗರಸಗಳು ಆಯಾ ಸಂದರ್ಭಕ್ಕೆ ಯಥೋಚಿತವಾಗಿ ವೇದ್ಯವಾಗುವವುಗಳು. ನಂತರ ಅವುಗಳ ಸ್ಪರ್ಶ ಇರುವುದಿಲ್ಲ. ಅಂಗೀರಸ ಹಾಗಲ್ಲ; ಇಡೀ ಕಾವ್ಯದ ರಸವಾಗಿರುವುದು. ಉದಾಹರಣೆಗೆ ಪಾಂಡವಾಶ್ವಮೇಧ ಪ್ರಸಂಗದಲ್ಲಿ ಪ್ರಧಾನರಸ ವೀರ. ರಸಕ್ಕೆ ಅರ್ಜುನನು ಆಲಂಬನ ವಿಭಾವ. ಅವನಲ್ಲಿ ಯುದ್ಧಾಂತ್ಯದಲ್ಲಿ ಪ್ರಮೀಳೆಯಲ್ಲಿ ಕರುಣೆ ಹುಟ್ಟುತ್ತದೆ. ಸುಧನ್ವಾರ್ಜುನದಲ್ಲಿ "ದೇವ ಕೃಷ್ಣ ನೀನು ಎಮ್ಮ ಭಾವ ಎಂದು......." ಎಂಬಲ್ಲಿ ಕರುಣಾರಸ ಸ್ಪುರಿಸುತ್ತದೆ; ಸುಧನ್ವನ ಕುರಿತಾಗಿ ಪ್ರತಿಜ್ಞೆಯ ಸಂದರ್ಭ ರೌದ್ರವೂ ಇರುತ್ತದೆ. ಆದರೆ ಪ್ರಧಾನರಸ ವೀರವೇ ಆಗಿದ್ದು ಉಳಿದ ರಸಗಳು ವೀರರಸದ ಅಂಗಗಳಾಗಿರುತ್ತವೆ.
ಪ್ರಸಂಗತ್ವೇನ ದೇವೀ ಮಾಹಾತ್ಮ್ಯೆಯನ್ನೇ ತೆಗೆದುಕೊಳ್ಳೋಣ. ಅಲ್ಲಿ ಅಲೌಕಿಕಶಕ್ತಿ ಕಾಣುವ ಕಾವ್ಯವಾದ್ದರಿಂದ ಅದ್ಭುತರಸವೇ ಪ್ರಧಾನ ಯಾ ಅಂಗೀರಸ. ಮಧುಕೈಟಭರು ಬ್ರಹ್ಮನನ್ನು ತಿನ್ನಲು ಹೋಗುವಲ್ಲಿ ಭಯಾನಕ ರಸ ಇದ್ದರೆ ಮಹಿಷಾಸುರನ ದೇವತೆಗಳೊಂದಿಗಿನ ಯುದ್ಧದ ಸಂದರ್ಭವೂ ಅದೇ. ಚಂಡಮುಂಡರು ದೇವಿಯನ್ನು ನೋಡುವಲ್ಲಿ ಶೃಂಗಾರವಿದ್ದರೆ ದೇವತೆಗಳು ಮೊರೆ ಹೋಗುವಲ್ಲಿ ಕರುಣ ರಸ ಇದೆ. ಆದರೆ ಇಡೀ ಪ್ರಸಂಗವು ಅದ್ಭುತ ರಸ ಪ್ರಧಾನವಾದದ್ದು. ಆದ್ದರಿಂದಲೇ ಕಥೆಗೆ ದೇವೀ ಮಾಹಾತ್ಮ್ಯ ಎನ್ನುವ ಹೆಸರು ಬಂತು. ಇಲ್ಲದಿದ್ದರೆ ದೇವೀ ಕಥಾ ಎಂದಾಗುತ್ತಿತ್ತು.
ಅದ್ಭುತ ರಸಕ್ಕೆ ಆಶ್ಚರ್ಯವೇ ಸ್ಥಾಯೀಭಾವವಾಗಿದೆ. ರಸದ ಬೋಧೆಗೆ ದೇವಿಯೇ ಕಾರಣವಾದ್ದರಿಂದ ಅವಳನ್ನು ಅದ್ಭುತರಸದ ಆಲಂಬನ ವಿಭಾವ ಅನ್ನುತ್ತೇವೆ. ಅವಳ ಪ್ರತ್ಯಕ್ಷ ಸಂದರ್ಭ ಅವಳ ಕುರಿತು ದೇವಾದಿ ದೇವತೆಗಳ ಸ್ತುತಿ ಇತ್ಯಾದಿಗಳು ಉದ್ದೀಪನವಿಭಾವ ಅನ್ನಿಸಲ್ಪಡುತ್ತದೆ. ಸ್ತಂಭ, ಸ್ವೇದ, ರೋಮಾಂಚ, ಗದ್ಗದಸ್ವರ, ಸಂಭ್ರಮ (ಅವಸರ), ನೇತ್ರ ವಿಕಾಸಾದಿಗಳು ಅನುಭಾವಗಳು; ವಿತರ್ಕ (ವಿವಿಧ ತರ್ಕಗಳು), ಆವೇಗ (ವೇಗಾತಿಶಯ), ಸಂಭ್ರಾಂತಿ (ಭ್ರಮೆ), ಆನಂದ ಇತ್ಯಾದಿಗಳು ವ್ಯಭಿಚಾರೀಭಾವಗಳು ಯಾ ಸಂಚಾರೀಭಾವಗಳು. ಇವುಗಳ ಸಂಯೋಗದಿಂದ ಉಂಟಾಗುವ ವಿಸ್ಮಯವೆನ್ನುವ ಸ್ಥಾಯೀಭಾವವು ಅದ್ಭುತರಸಕ್ಕೆ ಸ್ಥಾನವಾಗುತ್ತದೆ. ಅದ್ಭುತರಸ ಪ್ರಧಾನವಾದ ದೇವಿಯ ನುಡಿಗಳನ್ನೂ ಗದ್ಗದವಾಗಿಯೇ ಈಗಲೂ ಕಾಣುತ್ತೇವೆ. ಆದರೆ ಆಂಗಿಕದಲ್ಲಿ ಮಾತ್ರ ತಪ್ಪಿದ್ದೇವೆ. ಅದು ಅವಳ ಲೀಲೆ ಎಂದು ಒಪ್ಪದವರಾಗಿದ್ದೇವೆ. ಹೇಗೆ ನಾರಾಯಣ ನರಸಿಂಹನಾಗಿ ಯಾವತ್ತೋ ಹಿರಣ್ಯಕಶಿಪುವನ್ನು ಕೊಲ್ಲಬಹುದಾಗಿದ್ದರೂ ಪ್ರಹ್ಲಾದನಂತಹ ಭಾಗವತನ ಹುಟ್ಟಾಗಿ ಅವನ ನೆಪದಿಂದ ಕೊಲ್ಲಲು ಸಂಕಲ್ಪಿಸಿದನೋ ಅದರಂತೆ ದೇವಿಯೂ ಮಹಿಷಾಸುರನನ್ನು ಕೊಲ್ಲುತ್ತೇನೆ ಎಂದು ಮೊದಲೇ ನಿಶ್ಚೈಸಿದಂತಯೇ ಕೊಲ್ಲುತ್ತಾಳೆ. ಇದೇ ವಿತರ್ಕ ಯಾ ವಿವಿಧ ತರ್ಕದಿಂದ ಸಿದ್ಧಿಸಿದ ವಿಚಾರ. ಅಂತಹಆತ್ತರುಕ್ಅಂದರೆ ಅತೀವ ಕೋಪದಿಂದ ಕೂಡಿದ ಮಹಿಷಾಸುರನನ ಮುಖವನ್ನು ಕಂಡು ದೇವಿ ಮಂದಹಾಸವುಳ್ಳವಳು ಅಂದರೆ ಅದೇ ವಿಸ್ಮಯವಲ್ಲವೇ. ಯಾಕೆಂದರೆ ಇಡೀ ಜಗತ್ತಿಗೆ ಭಯಕಾರಕ ಮಹಿಷಾಸುರ. ಅಲ್ಲೂ ಇವಳು ಸದಾನಂದೆಯಾಗಿಯೇ ಇದ್ದಳು ಅನ್ನುವುದೇ ಆಶ್ಚರ್ಯಕ್ಕೆ ಕಾರಣ.
ಹಾಗಿದ್ದರೆ ದೇವಿಗೆ ಕೋಪವೇ ಬರಲಿಲ್ಲವೇ? ಇದು ನಿಜವಾದ ಪ್ರಶ್ನೆ. ರಾಮಕೃಷ್ಣ ಪೆಜತ್ತಾಯರು ಹೇಳಿದ್ದು. ಕೋಪ ಬಂದ ಬಗ್ಗೆಯೂ ಮಾರ್ಕಂಡೇಯಪುರಾಣದಲ್ಲಿ ಉಲ್ಲೇಖ ಇದೆ ಕೂಡ. ಕೋಪವನ್ನೇ ಸಾತ್ತ್ವಿಕ ಕೋಪ ನಾನಂದದ್ದು. ಹಾಗೆಂದರೇನು ಎನ್ನುವುದೂ ಪ್ರಶ್ನೆಯೇ. ಮೂರು ಗುಣಗಳೆಂದು ಹೇಳಲ್ಪಟ್ಟ ಸತ್ತ್ವ, ರಜಸ್ಸು, ತಮಸ್ಸು ಪ್ರತ್ಯೇಕವಾಗಿದ್ದರೂ ಅವುಗಳು ಪುನಃ ಒಂದರೊಂದಿಗೆ ಇನ್ನೊಂದು ಸೇರಿಕೊಂಡಿರುವುದೂ ಉಂಟು. ಸತ್ತ್ವದೊಂದಿಗೆ ರಜಸ್ಸು, ಸತ್ತ್ವದೊಂದಿಗೆ ತಮಸ್ಸು, ರಜಸ್ಸಿನೊಂದಿಗೆ ಸತ್ತ್ವ, ತಮಸ್ಸಿನೊಂದಿಗೆ ಸತ್ತ್ವ..... ಹೀಗೆ. ಅವುಗಳ ಅರ್ಥ ಯಾವುದು ಪ್ರಧಾನವಾಗಿರುತ್ತದೋ ಅದರ ಅಂಗವಾಗಿ ಯಾ ಅಪ್ರಧಾನವಾಗಿ ಇನ್ನೊಂದು ಗುಣ ವೇದ್ಯವಾಗುತ್ತದೆ ಎಂದು. ಕ್ರೋಧ ಯಾ ಕೋಪ ಎನ್ನುವುದು ತಾಮಸ ಗುಣ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಪ್ರಕರಣದಲ್ಲಿ ಅದು ಸತ್ತ್ವವನ್ನು ಮೀರಲಾರದು. ದೇಶದ್ರೋಹಿಯನ್ನು ಗಲ್ಲಿಗೇರಿಸುವ ನ್ಯಾಯಾಧೀಶನ ಆದೇಶದಂತೆ; ಅದನ್ನು ಪಾಲಿಸುವ ಕಟುಕನಂತೆ. ನ್ಯಾಯಾಧೀಶನಲ್ಲಿ ಯಾ ಕಟುಕನಲ್ಲಿ ಪ್ರಧಾನ ಭಾವ ದೇಶಪ್ರೇಮ ಅಂದರೆ ಸಾತ್ತ್ವಿಕ. ಅದರ ಪರಿಪಾಲನೆಗಾಗಿ ಭಯಾನಕ ಕೃತ್ಯ ಅಂದರೆ ಗಲ್ಲಿಗೇರಿಸುವುದು; ಅಂದರೆ ತಮಸ್ಸಿನ ಆಶ್ರಯ. ಇದು ಸುಳ್ಳಲ್ಲವೇ ಅಲ್ಲ; ಸತ್ಯವೇ. ಆದರೆ ಪ್ರಧಾನವಾದದ್ದು ಸಾತ್ತ್ವಿಕ. ಆದ್ದರಿಂದ ಮತಿಸ್ಥಿಮಿತ ಇರುತ್ತದೆ. ಸಾತ್ತ್ವಿಕದ ಕಾರ್ಯಲಾಭಕ್ಕೆ ತಾಮಸವೆಂದಷ್ಟೇ ಅದರ ಅರ್ಥವ್ಯಾಪ್ತಿ. ದೇವಿಯ ಕೋಪವೂ ಸತ್ತ್ವಗುಣದ ಅತಿಕ್ರಮಣ ಅಲ್ಲ. ಸತ್ತ್ವದ ಹಿಡಿತದಲ್ಲಿರುವ ತಮಸ್ಸು. ಅಂತಹ ಕೋಪ ದೇಹ ಕಂಪನಕ್ಕೆ ಕಾರಣವಾಗುವುದಿಲ್ಲ. ದೇಹ ಕಂಪನದ ಕೋಪ ಎನ್ನುವುದು ತನ್ನನ್ನು ಕೋಪಕ್ಕೆ ಅಧೀನನನ್ನಾಗಿಸುವುದಾಗಿರುತ್ತದೆ ಎಂದು ನನ್ನ ಅಭಿಪ್ರಾಯ.
ಇನ್ನೊಂದು ಪೂರ್ವಪಕ್ಷ ಯಕ್ಷಗಾನವು ಅಬ್ಬರಕ್ಕಾಗಿಯೇ ಇರುವ ಕಲೆ ಆದ್ದರಿಂದ ರೌದ್ರ ವೀರಗಳೇ ಕಾಣಬೇಕು ಎನ್ನುವುದು. ಆದರೆ ಇದಕ್ಕೆ ರೀತಿ ಅರ್ಥೈಸಬಹುದು ಎಂದು ಕಾಣುತ್ತದೆ. ಎಲ್ಲಾ ರಸಗಳೂ ಅತಿಶಯದಿಂದಲೇ ಇರುವುದೇ ಅಬ್ಬರ ಎಂದು. ಮಾನಿಷಾದದಂತಹ ಪ್ರಸಂಗ ಕರುಣರಸದ ಅಬ್ಬರಕ್ಕೆ ಉದಾಹರಣೆಯಾಯಿತು. ಸಹೃದಯ ಹೃದಯಮಾನ್ಯವಾಯಿತು. ರಾಮಾಯಣದಂತಹ ಪ್ರಸಂಗ ಶಾಂತರಸದ ಅಬ್ಬರಕ್ಕೆ ಉದಾಹರಣೆಯಾಯಿತು. ಹೀಗೆ ಯೋಚಿಸಿದರೆ ಚಂದ ಎಂದು ನನಗನಿಸುತ್ತದೆ.
ಆದ್ದರಿಂದ ದೇವಿಯ ಕೋಪ ಸಾತ್ತ್ವಿಕವಾಗಿಯೇ ಇರುವುದರಿಂದ ದೇಹಕಂಪನ ಯಾ ದರ್ಶನ ಒಪ್ಪಲಾಗದು. ಅದು ರಸದೋಷಕ್ಕೆ ಹೇತು ಎಂದೇ ನನ್ನ ಅಭಿಪ್ರಾಯ.

ಭಾಗ-
ಯಕ್ಷಗಾನದ ದೇವಿಯ ದರ್ಶನದ ಬಗ್ಗೆ ವೇದಿಕೆಯಲ್ಲಿ ಚರ್ಚೆಯಾದಷ್ಟು ಯಾವ ವೇದಿಕೆಯಲ್ಲೂ ಚರ್ಚೆಯಾಗಿಲ್ಲ. ಅದರ ಅರ್ಥ ವೇದಿಕೆಯಲ್ಲಿ ವಿರುದ್ಧ ಮತಿಗಳ ಸಂಖ್ಯೆ ಹೆಚ್ಚೆಂದು ಅರ್ಥವಲ್ಲ. ತತ್ತ್ವಬೋಧದ ಅರಸುವಿಕೆಯಲ್ಲಿ ಎಲ್ಲರೂ ಉತ್ಸುಕರೆಂದೇ ತಿಳಿಯೋಣ.
ದರ್ಶನದ ಬಗ್ಗೆ ಮೊದಲು ಕಾವ್ಯಶಾಸ್ತ್ರಜ್ಞರ ಮತ ತಿಳಿಯೋಣ. ಅತ್ತೂರು ರವೀಂದ್ರ ಭಟ್ರ ವಾದವನ್ನು ವಿಮರ್ಶಿಸೋಣ. ನಾಲ್ಕು ಅಭಿನಯಗಳು. ವಾಚಿಕ, ಆಂಗಿಕ, ಆಹಾರ್ಯ, ಸಾತ್ತ್ವಿಕಗಳೆಂಬುದು. ಇವುಗಳಿಂದ ಕೂಡಿದ ದೃಶ್ಯಕಾವ್ಯ ಒಟ್ಟಂದದಲ್ಲಿ ಸುಂದರವೆನಿಸುತ್ತದೆ. ಆದರೆ ಅವುಗಳ ಪ್ರಮಾಣ ಎಷ್ಟು ಅನ್ನುವುದು ಅತೀ ಮುಖ್ಯ. ಅದನ್ನು ಯಕ್ಷಗಾನದಲ್ಲಿ ಎಷ್ಟರಮಟ್ಟಿಗೆ ತೆಗೆದುಕೊಳ್ಳಬಹುದು? ಎನ್ನುವುದೂ ಮುಖ್ಯವೆಂದು ಕಾಣುತ್ತದೆ.
ಸಾತ್ತ್ವಿಕ ಎನ್ನುವುದು ಆಂಗಿಕ, ಆಹಾರ್ಯ, ವಾಚಿಕಗಳಲ್ಲಿ ಬೆರೆತಿರುವ ವಸ್ತು. ಆದ್ದರಿಂದಲೇ ಇಂತಹ ಪಾತ್ರಗಳಿಗೆ ಇಂತಹ ವೇಷಭೂಷಣ ಎನ್ನುವ ನಿಯಮವಿದೆ. ಉದಾಹರಣೆಗೆ ಕಿರೀಟವೇಷಗಳು. ದೇವೇಂದ್ರನಿಗೆ ಯಾ ಇತರ ಕಿರೀಟವೇಷದಲ್ಲಿ ಬರುವ ದೇವತೆಗಳಿಗೆ ಹಸಿರು ಬಣ್ಣದ ಇಜಾರು, ಬಾಲ್ಮುಂಡು, ಅಂಗಿ, ಸೊಗವಲ್ಲಿ... ಹೀಗೆ ನಿಯಮವಾದರೆ ಇತರ ಸಾಧು ಸ್ವಭಾವದ ಕಿರೀಟವೇಷಗಳಿಗೆ ಕೆಂಪುಬಣ್ಣದ್ದು. ಹಾಗೆಯೇ ಖಳ ಸ್ವಭಾವದ ಕಿರೀಟವೇಷಗಳಿಗೆ ಕಪ್ಪು. ಕ್ರಮದಿಂದ ಕರ್ಣ ಯಾರು, ಅರ್ಜುನ ಯಾರು ಎಂದು ರಂಗದಲ್ಲಿ ಶ್ರೀಸಾಮಾನ್ಯನಿಗೂ ತಿಳಿಯಲಾಗುತ್ತದೆ. ಇದನ್ನು ತಿಳಿಯಲು ಮುಖದ ಬಣ್ಣಗಾರಿಕೆಯೂ ಇದೇ ರೀತಿಯ ಕೆಲಸ ಮಾಡುತ್ತದೆ. ಕಲ್ಪನೆಯೇ ಸಾತ್ತ್ವಿಕ ಎನಿಸುತ್ತದೆ.
ಇನ್ನು ಆಂಗಿಕ. ರಾಮ, ನಳನಂತಹ  ಪಾತ್ರಗಳು ಹೆಚ್ಚು ಕುಣಿಯಬಾರದು. ಪ್ರಬುದ್ಧವಾದ ಗಂಭೀರವಾದ ಹೆಜ್ಜೆಗಳೇ ಅವರಿಗೆ ಗುಣ. ಹಾಗೆಂದು ಎಷ್ಟೇ ಮೈದುಂಬಿಸಿ ಬಂದ ಮಹಿಷಾಸುರನಂಹ ಪಾತ್ರಗಳು,  ಹಿರಣ್ಯಾಕ್ಷ, ಇಂದ್ರಜಿತುವಿನಂತಹ ಪಾತ್ರಗಳು ಕುಣಿಯಲೇ ಬೇಕು. ಅವರದ್ದು ಅದೇ ಸಾತ್ತ್ವಿಕ ಅಭಿನಯ.
ಇನ್ನು ವಾಚಿಕ. ವಾಗಭಿನಯ ಎನ್ನುವುದು ಭಾವಾಭಿವ್ಯಕ್ತಿಗೆ ಅತ್ಯಂತ ಸೂಕ್ತಮಾಧ್ಯಮ. ಹಾಗಿದ್ದಲ್ಲಿಯೂ ಇಲ್ಲಿಯೂ ಸಾತ್ತ್ವಿಕವಾದದ್ದೇ ಪಾರಮ್ಯವನ್ನು ಹೊಂದುತ್ತದೆ. ರಾಮನಂತಹ ಧೀರೋದಾತ್ತ ನಾಯಕ ಮಿತಭಾಷಿಯೇ ಆಗಿರಬೇಕು. ಹಾಸ್ಯಪ್ರವೃತ್ತಿ ಅವನಿಗೆ ಸಲ್ಲ. ದೇವಿಯ ವಾಕ್ಯ ಸೂತ್ರಪ್ರಾಯವಾಗಿರಬೇಕು. ಹಾಗೆಂದು ಕೃಷ್ಣ ಹಾಸ್ಯದಲ್ಲಿ ತೊಡಗಬಹುದು. ಸ್ತ್ರೀಯರು ಸಂಸ್ಕೃತಭೂಯಿಷ್ಠ ವಾಕ್ಯಗಳನ್ನು ಬಳಸಕೂಡದು. ರಾಜ ಪ್ರಬುದ್ಧ ಶೈಲಿಯಲ್ಲೇ ವ್ಯವಹರಿಸಬೇಕು, ಹಾಸ್ಯಗಾರ ಗ್ರಾಮ್ಯ ಯಾ ಸಾಮಾನ್ಯಕ್ಕಿಂತಲೂ ಕೆಳಮಟ್ಟದ ಶೈಲಿಯಲ್ಲಿ ಯಾ ತಪ್ಪುತಪ್ಪಾಗಿ ಭಾಷಾಸಾಂಕರ್ಯವೂ ಇರುವಂತೆ ಮಾತನಾಡಬೇಕು.... ಹೀಗೆ ಹಲವಾರು ನಿಯಮಗಳು ಹೇಳಲ್ಪಟ್ಟಿವೆ; ನಮಗೂ ಅನುಭವೇನ ವೇದ್ಯವಾಗುವವುಗಳೇ. ಹೀಗೆ ಸಾತ್ತ್ವಿಕ ಅನ್ನುವುದು ಇತರ ಮೂರೂ ಪ್ರಕಾರಗಳ ಅಭಿನಯಗಳಲ್ಲಿ ಒಳಹೊಕ್ಕು ತನ್ನ ಪ್ರಭುತ್ವದಿಂದಲೇ ರಸದ ಉತ್ಕರ್ಷಾಪಕರ್ಷಕ್ಕೆ ಹೇತುವಾಗುತ್ತದೆ.
ಇನ್ನೊಂದು ವಿಚಾರ. ಯಕ್ಷಗಾನವು ಭಾರತದ ಇತರ ಕಲಾಪ್ರಕಾರಗಳಿಗಿಂತ ತೀರಾ ಭಿನ್ನವಾದದ್ದು. ಇತರ ಕಡೆಗಳಲ್ಲಿ ಆಂಗಿಕವಾದ ಅಭಿನಯವೇ ಕೆಲವೊಮ್ಮೆ ವಾಚಿಕವನ್ನು ತುಂಬುತ್ತದೆ ಅಥವಾ ಕೆಲವೊಮ್ಮೆಎರಡೂ ಏಕಕಾಲದಲ್ಲಿ ಆಗಲ್ಪಡುತ್ತದೆ. ಉದಾಹರಣೆಗೆ ಸಂಸ್ಕೃತ ನಾಟಕಗಳಲ್ಲಿ ಗದ್ಯದ ಮಾತು ವಾಚಿಕವಾಗಿರುತ್ತದೆ. ಅವುಗಳೊಡನೆ ಪದ್ಯಗಳೂ ಮಧ್ಯೆ ಇರುವುದನ್ನು ನಾವು ಕಾಣಬಹುದು. ಸಂದರ್ಭದಲ್ಲಿ ಅದನ್ನು ನಟ ಯಾ ನೇಪಥ್ಯದಲ್ಲಿ ಬೇರೆ ಯಾರೇ ಹಾಡಲಿ, ಅದಕ್ಕೆ ಪುನಃ ವಿವರಣಾತ್ಮಕ ಅರ್ಥ ಇರುವುದಿಲ್ಲ. ಅದೇ ಸಂಗೀತದೊಂದಿಗಿನ ಅವನ ಅಭಿನಯ ವಾಚಿಕವೆಂದು ಪರಿಗಣಿಸಲ್ಪಡುತ್ತದೆ. ಆದರೆ ಯಕ್ಷಗಾನದಲ್ಲಿ ಹಾಗಲ್ಲ. ಪ್ರಸಂಗದ ಪದ್ಯವು ಭಾಗವತರಿಂದ ಹಾಡಲ್ಪಡುವಾಗ ನೃತ್ಯ ಪ್ರಧಾನವಾದ ಆಂಗಿಕ ಅಭಿನಯ ಇರುತ್ತದೆ. ಅನಂತರ ವಾಚಿಕ ಯಥಾಪ್ರಕಾರ, ಕೆಲವೊಮ್ಮೆ ಆಂಗಿಕವು ಸ್ವಲ್ಪ ಹೆಚ್ಚೇ ಅಭಿನಯಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ವಾಚಿಕವನ್ನು ಎಷ್ಟರಮಟ್ಟಿಗೆ ಕಾಣಿಸಬಹುದು ಎನ್ನುವುದೂ ವಿಚಾರಾರ್ಹ. ಕೆಲವೊಮ್ಮೆ ವಾಚಿಕವು ಪುನಃ ಅಷ್ಟೇ ವಿಸ್ತಾರವಾಗುವುದರಿಂದ ಆಂಗಿಕಾಭಿನಯಕ್ಕೆ ಅಷ್ಟೇ ಪ್ರಾಧಾನ್ಯ ಕೊಟ್ಟಲ್ಲಿ ಎರಡೂ ಪ್ರತ್ಯೇಕವಾಗಿ ಸಹೃದಯನಿಗೆ ವೇದ್ಯವಾಗುವುದರಿಂದ ರಸದ ಅಪಕರ್ಷಕ್ಕೆ ಹೇತುವಾಗುತ್ತದೆ ಎನ್ನುವ ವಾದವನ್ನೂಅಲ್ಲಗಳೆಯಲಾಗದು. ಆದ್ದರಿಂದಲೇ ಭರತನಾಟ್ಯದ ಕಲಾವಿದರು ಪದ್ಯದ ಒಂದೊಂದು ಸೊಲ್ಲನ್ನು ಹಲವಾರು ಭಾರಿ ಪುನರಾವರ್ತನೆ ಮಾಡಿ ಅವರಿಗೆ ತೋಚಿದ ಎಲ್ಲಾ ಭಾವಗಳನ್ನು ಆಂಗಿಕದ ಮೂಲಕವೇ ಜನಮಾನಸಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಾರೆ. ಅಷ್ಟು ಪುನರಾವರ್ತನೆ ಯಕ್ಷಗಾನದಲ್ಲಿ ಕಾಣಲಾರೆವು. ಕಾಣಬಾರದು ಕೂಡ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು

       Vidwan Sriharinarayanadasa Asranna, Kateelu

No comments:

Post a Comment